ಕುಶಾಲನಗರ, ಜು. 24 : ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಗಂಧದಕೋಟಿ ಬಳಿ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳು ನಿಲುಗಡೆಗೊಂಡು ಪಾದಚಾರಿಗಳು ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ ಎಂದು ದೂರುಗಳು ಕೇಳಿಬಂದಿವೆ.
ಗಂಧದಕೋಟಿ ಬಳಿ ಗುಡ್ಡೆಹೊಸೂರು ಗ್ರಾಪಂ ವತಿಯಿಂದ ಕೋಳಿ, ಮೀನು ಮಾಂಸ ಮತ್ತಿತರ ಅಂಗಡಿಗಳಿಗೆ ರಸ್ತೆ ಎರಡೂ ಬದಿಗಳಲ್ಲಿ ಪರವಾನಗಿ ಕೊಟ್ಟಿದ್ದು ಈ ಅಂಗಡಿಗಳಿಗೆ ಬರುವ ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆಯಲ್ಲಿ ನಿಲುಗಡೆಗೊಳಿಸುವುದರ ಕಾರಣ ಆಗಾಗ್ಯೆ ರಸ್ತೆ ಅಪಘಾತಗಳು ನಡೆದು ಜೀವಹಾನಿ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ತರಬೇತಿ ಕೇಂದ್ರ, ಸರಕಾರಿ ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು ಸೇರಿದಂತೆ ಖಾಸಗಿ ಕಾಲೇಜುಗಳಿಗೆ ದಿನನಿತ್ಯ ಓಡಾಟ ಮಾಡಬೇಕಾಗಿದ್ದು ಬಹಳಷ್ಟು ಅನಾನುಕೂಲ ಉಂಟಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಪಿ.ಬಿ.ಮಾದಪ್ಪ ತಿಳಿಸಿದ್ದಾರೆ.
ಹಲವು ಬಾರಿ ಸಂಬಂಧಿಸಿದ ಪಂಚಾಯ್ತಿಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಇಡೀ ವ್ಯಾಪ್ತಿಯಲ್ಲಿ ಸ್ವಚ್ಛತೆಯ ಕೊರತೆಯಿದ್ದು ವಾಸನಾಮಯ ವಾಗಿರುವ ದೃಶ್ಯ ಕೂಡ ಕಂಡುಬಂದಿದೆ. ತಕ್ಷಣ ಈ ಬಗ್ಗೆ ಕ್ರಮಕೈಗೊಂಡು ಮುಂದೆ ಉಂಟಾಗಲಿರುವ ಅನಾಹುತವನ್ನು ತಪ್ಪಿಸಬೇಕೆಂದು ಸ್ಥಳೀಯರು ಪತ್ರಿಕೆ ಮೂಲಕ ಕೋರಿದ್ದಾರೆ.