ಸಿದ್ದಾಪುರ, ಜು.24 : ಸಿದ್ದಾಪುರದ ಮಾರುಕಟ್ಟೆ ರಸ್ತೆಯಲ್ಲಿ ವ್ಯಕ್ತಿಯೋರ್ವನಿಗೆ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆ ವ್ಯಕ್ತಿ ವಾಸಮಾಡುತ್ತಿದ್ದ ಭಾಗದಲ್ಲಿ ಸೀಲ್ ಡೌನ್ ಮಾಡಲಾಗಿದೆ ಇತ್ತೀಚೆಗೆಷ್ಟೇ ಸಿದ್ದಾಪುರ ಭಾಗದಲ್ಲಿ ಕೊರೊನಾ ಪತ್ತೆಯಾದ ಹಿನ್ನೆಲೆಯಲ್ಲಿ ಸಿದ್ದಾಪುರ ಎಂಜಿ ರಸ್ತೆ ಹಾಗೂ ಕರಡಿಗೋಡು ರಸ್ತೆ ಸೀಲ್‍ಡೌನ್ ಮಾಡಲಾಗಿತ್ತು.

ಅವಧಿ ಮುಕ್ತಾಯಗೊಳ್ಳುವ ಒಂದೆರಡು ದಿನಗಳು ಬಾಕಿ ಇದ್ದು ಅಷ್ಟರಲ್ಲಿ ಮತ್ತೊಂದು ವ್ಯಕ್ತಿಗೆ ವೈರಸ್ ಪತ್ತೆಯಾಗಿದ್ದು ಪಟ್ಟಣ ವ್ಯಾಪ್ತಿಯ ನಿವಾಸಿಗಳಿಗೆ ಹಾಗೂ ಎಂಜಿ ರಸ್ತೆಯ ನಿವಾಸಿಗಳಿಗೆ ಸಮಸ್ಯೆಯಾಗಿದೆ. ಶುಕ್ರವಾರ ಪತ್ತೆಯಾದ ವ್ಯಕ್ತಿಯ ಮನೆಯ ಸುತ್ತಲೂ ಸೀಲ್‍ಡೌನ್ ಮಾಡುವ ಸಂದರ್ಭ ವೀರಾಜಪೇಟೆ ತಾಲೂಕು ತಹಶೀಲ್ದಾರ್ ನಂದೀಶ್ ಕುಮಾರ್ ಅಮ್ಮತಿ ಹೋಬಳಿ ಕಂದಾಯ ಪರಿವೀಕ್ಷಕ ಹರೀಶ್ ಗ್ರಾಮಲೆಕ್ಕಿಗ ಬಣಕರ್ ಪಿಡಿಓ ವಿಶ್ವನಾಥ್, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಆರೋಗ್ಯ ಸಿಬ್ಬಂದಿ ಹಾಜರಿದ್ದರು.