ವೀರಾಜಪೇಟೆ, ಜು. 24: ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಕೃಷಿಕ-ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ನಡೆಯುತ್ತಿರುವ ಪ್ರತಿಭಟನೆಯ ಅಂಗವಾಗಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕ ಹಾಗೂ ಸಿ.ಐ.ಟಿ.ಯು. ನೇತೃತ್ವದಲ್ಲಿ ವೀರಾಜಪೇಟೆಯಲ್ಲಿ ತಹಶೀಲ್ದಾರ್ ಅವರ ಮೂಲಕ ಮನವಿಯೊಂದನ್ನು ಸರಕಾರಕ್ಕೆ ಸಲ್ಲಿಸಲಾಯ್ತು. ಈ ಸಂದರ್ಭ ಮಾತನಾಡಿದ ಸಿ.ಪಿ.ಐ.ಎಂ. ಜಿಲ್ಲಾ ಕಾರ್ಯದರ್ಶಿ ಡಾ||.ಐ.ಆರ್. ದುರ್ಗಾಪ್ರಸಾದ್ ದೇಶದಾದ್ಯಂತ ಜನತೆ ಒಂದು ಕಡೆ ಆರ್ಥಿಕ ಬಿಕ್ಕಟ್ಟು, ಮತ್ತೊಂದೆಡೆ ಕೊರೊನಾ ಸಾಂಕ್ರಾಮಿಕ ಸಂಕಷ್ಟವನ್ನು ಎದುರಿಸುತ್ತಿರುವಾಗ ಕೇಂದ್ರ ಸರಕಾರ ಜನತೆಯ ಪರವಾಗಿ ದೇಶದ ಆರ್ಥಿಕ ಸಂಕಷ್ಟ ಮತ್ತು ಆರೋಗ್ಯ ರಕ್ಷಣೆಗೆ ತೊಡಗಬೇಕಾಗುವ ಬದಲು ಜನತೆಯನ್ನು ಇನ್ನಷ್ಟು ಸಂಕಷ್ಟದಲ್ಲಿ ಮುಳುಗಿಸಿ ಜನವಿರೋಧಿ ನೀತಿಯನ್ನು ಹೇರುತ್ತಿರುವುದು ಖಂಡನೀಯವಾಗಿದೆ ಎಂದರು.
ಈ ಸಂದರ್ಭ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ರಮೇಶ್, ಜಿಲ್ಲಾ ಸಮಿತಿ ಸದಸ್ಯ ಎಂ.ಕೆ.ಬಾಪುಟ್ಟಿ, ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಎ.ಸಿ.ಸಾಬು, ಸದಸ್ಯ ಖಾಲಿದ್ ಹಾಜರಿದ್ದರು.
ಸೋಮವಾರಪೇಟೆ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ವತಿಯಿಂದ ಸೋಮವಾರಪೇಟೆ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ರೈತವಿರೋಧಿ ತಿದ್ದುಪಡಿ, ಸಾರ್ವಜನಿಕ ರಂಗದ ಕೈಗಾರಿಕೆಗಳು ಹಾಗೂ ಹಣಕಾಸು ಸಂಸ್ಥೆಗಳ ಖಾಸಗೀಕರಣವನ್ನು ತಡೆಹಿಡಿಯಬೇಕೆಂದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ವಿವಿಧ ಬೇಡಿಕೆಯುಳ್ಳ ಮನವಿ ಪತ್ರವನ್ನು ಶಿರಸ್ತೇದಾರ್ ಮಹೇಶ್ ಅವರ ಮೂಲಕ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿದರು. ಸಂಘಟನೆಯ ಪ್ರಮುಖರಾದ ಭಾಗೀರಥಿ, ಭಾರತಿ, ಸಾವಿತ್ರಿ, ಚಂದ್ರನ್, ಉಮೇಶ್, ನವೀನ್ ಹಾಗೂ ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಹಾಜರಿದ್ದರು.