ಗೋಣಿಕೊಪ್ಪ ವರದಿ, ಜು. 24: ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿ ಹಸುವನ್ನು ಕೊಂದು ಕಾಲ್ಕಿತ್ತಿರುವ ಘಟನೆ ಕೆ. ಬಾಡಗ ಗ್ರಾಮದ ಅಯ್ಯಪ್ಪ ದೇವಸ್ಥಾನ ಹತ್ತಿರದ ಚಾಮಡು ಕಾಪ್ ಎಂಬಲ್ಲಿ ನಡೆದಿದೆ. ಮುಕ್ಕಾಟೀರ ರಮೇಶ್ ಎಂಬವರಿಗೆ ಸೇರಿದ ಹಸು ಹುಲಿ ದಾಳಿಗೆ ಬಲಿಯಾಗಿದೆ. ಸ್ಥಳಕ್ಕೆ ನಾಗರಹೊಳೆ ವಲಯ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಲಿ ಎಲ್ಲಿ ಸೇರಿಕೊಂಡಿದೆ ಎಂಬ ಬಗ್ಗೆ ಮಾಹಿತಿ ಇಲ್ಲ.ಹುಲಿ ಹಿಂದೆ ಓಡಿದ ಕಾರ್ಮಿಕ: ಬೆಳಗ್ಗೆ 9 ಗಂಟೆ ಸುಮಾರಿಗೆ ಗದ್ದೆಯಲ್ಲಿ ಹಸುವನ್ನು ಮೇಯಲು ಬಿಟ್ಟಿದ್ದಾಗ ಹುಲಿ ದಾಳಿ ನಡೆಸಿ ಹಸುವನ್ನು ಹೊತ್ತೊಯ್ಯುವ ಪ್ರಯತ್ನ ಮಾಡಿದೆ. ಇದನ್ನು ಕಂಡ ಪಿರಾಂದ (ಮೊದಲ ಪುಟದಿಂದ) ಎಂಬ ಕಾರ್ಮಿಕ ಹಸುವನ್ನು ರಕ್ಷಿಸಲು ಮುಂದಾಗಿದ್ದು, ಕೂಗಾಡಿ ಹುಲಿಯ ಹಿಂದೆ ಓಡಿದ್ದಾನೆ. ಆಗಲೇ ಹಸು ಸಾವಿಗೀಡಾಗಿದ್ದ ಕಾರಣ ಹುಲಿ ಹಸು ಕಳೇಬರವನ್ನು ಅಲ್ಲಿಯೇ ಬಿಟ್ಟು ಕಾಲ್ಕಿತ್ತಿದೆ. ಹುಲಿ ಬಾಯಿಂದ ಹಸುವನ್ನು ರಕ್ಷಿಸಲು ಜೀವ ಭಯ ಬಿಟ್ಟು ಓಡಿದ ಕಾರ್ಮಿಕನ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೀವ ಕಳೆದುಕೊಂಡ ಹಸುವನ್ನು ನೋಡಿ ದುಃಖಿತನಾಗಿದ್ದಾರೆ.
ಸೆರೆಗೆ ಒತ್ತಾಯ: ಹುಲಿಯನ್ನು ಹಿಡಿದು ಬೇರೆಡೆಗೆ ಸಾಗಿಸಬೇಕು ಎಂದು ಬಿಜೆಪಿ ತಾಲೂಕು ಕೃಷಿಮೋರ್ಚ ಒತ್ತಾಯಿಸಿದೆ. ದಕ್ಷಿಣ ಕೊಡಗಿನ ಹಲವು ಭಾಗಗಳಲ್ಲಿ ನಿರಂತರ ಹುಲಿ ದಾಳಿ ನಡೆಯುತ್ತಿದೆ. ಕೆಲ ದಿನಗಳಿಂದ ದಾಳಿ ನಡೆದಿರಲಿಲ್ಲ. ಮತ್ತೆ ದಾಳಿ ನಡೆಸುತ್ತಿರುವುದರಿಂದ ಹುಲಿ ಹಿಡಿಯಬೇಕಿದೆ. ಹೆಚ್ಚಿನ ಪರಿಹಾರ ನೀಡಬೇಕು ಎಂದು ಬಿಜೆಪಿ ತಾಲೂಕು ಕೃಷಿಮೋರ್ಚ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ, ಉಪಾಧ್ಯಕ್ಷ ಚಟ್ಟಮಾಡ ಅನಿಲ್ ಉತ್ತಪ್ಪ ಒತ್ತಾಯಿಸಿದ್ದಾರೆ. ಅರಣ್ಯಾಧಿಕಾರಿ ಕಾಂತರಾಜು ಸಿಸಿ ಕ್ಯಾಮೆರಾ ಇರಿಸಿ ಕಾರ್ಯಾಚರಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. - ಸುದ್ದಿಪುತ್ರ