ಸೋಮವಾರಪೇಟೆ, ಜು. 24: ಮೈಸೂರು ಇನ್ನರ್ ವೀಲ್ ಕ್ಲಬ್ ಮತ್ತು ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಇಲ್ಲಿಗೆ ಸಮೀಪದ ಬೇಳೂರಿನಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತೋಟ ಕಾರ್ಮಿಕರಿಗೆ ಕೋವಿಡ್-19 ಕುರಿತು ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭ ಮಾತನಾಡಿದ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನಂದಿನಿ ಪ್ರಭುದೇವ್, ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವದರೊಂದಿಗೆ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಂಡರೆ ಕೊರೊನಾ ಸೋಂಕಿನಿಂದ ಪಾರಾಗಬಹುದು ಎಂದರು.

ವಲಯ ಅರಣ್ಯಾಧಿಕಾರಿ ಕೊಟ್ರೇಶ್ ಮಾತನಾಡಿ, ಪರಿಸರ ಜಾಗೃತಿ ಇಂದು ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕಿದೆ. ಪ್ರಕೃತಿ ನಮಗೆ ನೀಡಿರುವ ಕೊಡುಗೆಗಳನ್ನು ನಾವು ಕಲುಷಿತಗೊಳಿಸಿದ್ದೇವೆ. ಇನ್ನಾದರೂ ನಾವು ಎಚ್ಚತ್ತುಕೊಳ್ಳದಿದ್ದಲ್ಲಿ ಪರಿಸರ ನಾಶವಾಗಿ ಮನುಕುಲವೂ ವಿನಾಶದ ಅಂಚಿಗೆ ಬಂದು ನಿಲ್ಲಲಿದೆ ಎಂದರು.

ಈ ಸಂದರ್ಭ ಕಾರ್ಮಿಕರಿಗೆ ಕಡ್ಡಾಯ ಮುಖ ಗವಸು ಧರಿಸುವ ಬಗ್ಗೆ ಮತ್ತು ಸ್ಯಾನಿಟೈಸರ್ ಬಳಸುವ ಬಗ್ಗೆ ಅರಿವು ಮೂಡಿಸಲಾಯಿತು. ಮೈಸೂರು ಜಿಲ್ಲೆ ನಾಡ್ನಳ್ಳಿ ಗ್ರಾಮದ ವಿದ್ಯಾ ಜ್ಯೋತಿ ಶಾಲೆಯ ವಿದ್ಯಾರ್ಥಿನಿ ವಿದ್ಯಾ ಅವರಿಗೆ 14 ಸಾವಿರ ರೂಪಾಯಿಗಳ ನೆರವನ್ನು ಕ್ಲಬ್ ವತಿಯಿಂದ ನೀಡಲಾಯಿತು. ದಿನಾಚರಣೆ ಅಂಗವಾಗಿ ಅರಣ್ಯ ವಸತಿ ಗೃಹ ಆವರಣದಲ್ಲಿ 50ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಬೇಳೂರು ಉಪವಲಯ ಅರಣ್ಯಾಧಿಕಾರಿ ಕೆ.ಸಿ. ನಾರಾಯಣ ಮೋಲಿ ಉಪಸ್ಥಿತರಿದ್ದರು.