*ಕೊಡ್ಲಿಪೇಟೆ, ಜು. 24: ಕೊಡ್ಲಿಪೇಟೆ ಹೋಬಳಿಗೊಳಪಡುವ ಬೆಸೂರು ಪಂಚಾಯಿತಿ ವ್ಯಾಪ್ತಿಯ ಕೆರೆಕೇರಿ ಮತ್ತು ಕೂಡ್ಲೂರು ರಸ್ತೆ ಸಮಸ್ಯೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಸ್ಥಳೀಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೆರೆಕೇರಿ ಮತ್ತು ಕೂಡ್ಲೂರು ವ್ಯಾಪ್ತಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ತಮ್ಮ ಕೃಷಿ ಜಮೀನು ಗಳಿಗೆ ತೆರಳಲು ಬಳಸುತ್ತಿರುವ ರಸ್ತೆಯು ಕೆರೆಕೇರಿ ಗ್ರಾಮದ ಸರ್ವೆ ನಂ. 40/3 ರ ಎರಡೂವರೆ ಎಕರೆ ಜಮೀನಿನಲ್ಲಿ ಹಾದು ಹೋಗುತ್ತಿದ್ದು, ಸ್ಥಳ ಪರಿಶೀಲನೆ ಹಾಗೂ ಸರ್ವೆ ಮಾಡದೆ ಜಾಗವನ್ನು ಅವೈಜ್ಞಾನಿಕವಾಗಿ ಮಂಜೂರಾತಿ ಮಾಡಲಾಗಿದೆ ಎಂದು ಗ್ರಾಮಸ್ಥರು, ಜಿಲ್ಲಾಧಿಕಾರಿಗಳ ಗಮನ ಸೆಳೆದರು.
ಸ್ಥಳ ಮಂಜೂರು ಮಾಡಿಸಿ ಕೊಂಡವರು ಇದೀಗ ತಮ್ಮ ಜಾಗಕ್ಕೆ ಬೇಲಿ ಹಾಕಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ತಮ್ಮ ಗದ್ದೆಗಳಿಗೆ ತೆರಳಲು ಅನಾನುಕೂಲವಾಗಿದೆ. ಇದ್ದ ಒಂದು ರಸ್ತೆಗೆ ಅಡ್ಡಲಾಗಿ ತಂತಿ ಬೇಲಿ ಹಾಕಿರುವದರಿಂದ ಕೃಷಿಕರಿಗೆ ಸಮಸ್ಯೆಯಾಗಿದೆ ಎಂದು ಅಳಲು ತೋಡಿಕೊಂಡರು.
ಪ್ರಸ್ತುತ ಭತ್ತ ಕೃಷಿ ಮಾಡುವ ಸಮಯವಾಗಿದ್ದು, ರಸ್ತೆ ಇಲ್ಲದಿರುವದರಿಂದ ತೊಂದರೆ ಯಾಗುತ್ತಿದೆ. ತಕ್ಷಣ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಈ ಹಿಂದೆ ರಸ್ತೆ ಸಮಸ್ಯೆ ಬಗ್ಗೆ ತಾಲೂಕು ತಹಶೀಲ್ದಾರ್ಗೆ ಮನವಿ ಸಲ್ಲಿಸಿದ್ದರೂ ಯಾವದೇ ಪ್ರಯೋಜನವಾಗಿಲ್ಲ. ರಸ್ತೆ ಸಮಸ್ಯೆಯಿಂದಾಗಿ 20 ಎಕರೆ ಕೃಷಿ ಭೂಮಿ ಪಾಳು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದರು.
ಈ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಈ ಸಂದರ್ಭ ಗ್ರಾಮಸ್ಥರಾದ ಕೆ.ಬಿ. ಧರ್ಮಪ್ಪ, ಮೋಹನ್ ಮೌರ್ಯ, ಮಹೇಶ್, ಹರೀಶ್ ಬಿ.ಪಿ., ಜವರಯ್ಯ, ಗಿರೀಶ್, ವೀರಭದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.