ಸುಂಟಿಕೊಪ್ಪ, ಜು. 24: ಇಲ್ಲಿನ ಗ್ರಾಮ ಪಂಚಾಯಿತಿಯ ಉಲುಗುಲಿ ಗ್ರಾಮದ ಓಡಿಯಪ್ಪನ ತೋಟ ಹಾತೂರು ಮಹಾಲಕ್ಮಿ ತೋಟಗಳಿಗೆ ಹಾಡಹಗಲೇ ಎರಡು ಕಾಡಾನೆಗಳು ಸೇರಿಕೊಂಡಿದ್ದು, ಇದರಿಂದ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಭಯಭೀತರಾಗಿದ್ದಾರೆ.
ಸ್ಥಳೀಯ ತೋಟದ ಮಾಲೀಕರೂ ಹಾಗೂ ತಾಲೂಕು ಪಂಚಾಯಿತಿ ಸದಸ್ಯರಾದ ಓಡಿಯಪ್ಪನ ವಿಮಲಾವತಿ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅರಣ್ಯ ಇಲಾಖೆಯವರು ಬಂದು ತೋಟದಲ್ಲಿದ್ದ ಆನೆಗಳನ್ನು ಕಾಡಿಗೆ ಅಟ್ಟುವ ಕಾರ್ಯ ಕೈಗೊಂಡರು. ಈ ಭಾಗದ ಕಂಬಿಬಾಣೆ ಮತ್ತಿಕಾಡು ಕೊಡಗರಹಳ್ಳಿ ಈ ಭಾಗದಲ್ಲಿ ಕಾಡಾನೆ ಹಾವಳಿ ಜಾಸ್ತಿಯಾಗಿದ್ದು ಪ್ರತೀ ವರ್ಷ ಹಲಸಿನ ಹಣ್ಣು ಅರಸುತ್ತಾ ಕಾಫಿ ತೋಟಕ್ಕೆ ಲಗ್ಗೆಯಿಡುತ್ತದೆ. ಆನೆ ಹಾವಳಿಯಿಂದ ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳದೆ ಮನೆಯಲ್ಲಿ ಕೆಲಸವಿಲ್ಲದೆ ಕಾಲ ಕಳೆಯುವಂತಾಗಿದೆ. ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸುವಲ್ಲಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.