ಕುಶಾಲನಗರ, ಜು. 23: ಕುಶಾಲನಗರ ಪಟ್ಟಣದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ಹಿಂತಿರುಗಿದರೂ ಆ ಪ್ರದೇಶವನ್ನು ನಿಯಂತ್ರಿತ ವಲಯದಿಂದ ತೆರವುಗೊಳಿಸದಿರುವ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಶಾಲನಗರ ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನ, ದಂಡಿನಪೇಟೆ ಮತ್ತಿತರ ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, ಕೆಲವೆಡೆ ಸರಕಾರಿ ಕಛೇರಿಗಳು ಕಾರ್ಯನಿರ್ವಹಿಸುತ್ತಿವೆ. ಜನರಿಗೆ ಅನಾನುಕೂಲ ಉಂಟಾಗುತ್ತಿದೆ. ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನ, ದಂಡಿನಪೇಟೆಯ ಸುಮಾರು 14 ಮಂದಿ ಕೋವಿಡ್ ಆಸ್ಪತ್ರೆಗೆ ಸೇರಿ ನಂತರ ಬಿಡುಗಡೆಗೊಂಡಿದ್ದಾರೆ. ಆದರೆ ನಿಯಂತ್ರಿತ ವಲಯವನ್ನು ತೆರವುಗೊಳಿಸಿಲ್ಲ. ಅಲ್ಲದೆ ಸೀಲ್‍ಡೌನ್ ಪ್ರದೇಶದ ಜನರು ಯಾವುದೇ ನಿಯಮವನ್ನು ಪಾಲಿಸದೆ ಹೊರಗಡೆ ಓಡಾಡುತ್ತಿರುವುದು ಕಂಡುಬಂದಿದೆ. ಇದನ್ನು ಯಾವುದೇ ಇಲಾಖೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಸ್ಥಳೀಯರಾದ ಶಬ್ಬೀರ್ ತಿಳಿಸಿದ್ದಾರೆ.

ಸೋಂಕು ಪ್ರದೇಶವನ್ನು ನಿಯಮಾನುಸಾರ ಸೀಲ್‍ಡೌನ್ ಮಾಡಲಾಗಿದೆ. ಸೋಂಕಿತ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕ ಹೊಂದಿದ ಜನರ ಸ್ವಾಬ್ ಪರೀಕ್ಷೆ ವರದಿ ಬರುವ ತನಕ ಅಥವಾ 14 ದಿನಗಳ ಕಾಲ ಆ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗುತ್ತದೆ ಎಂದು ಪಪಂ ಮುಖ್ಯಾಧಿಕಾರಿ ಸುಜಯ್‍ಕುಮಾರ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.