ಅರಳುವುದೇ ಮುದುಡಿದ್ದ ತಾವರೆ...?

ಮಡಿಕೇರಿ, ಜು. 23: ಕೊಡಗು-ಮೈಸೂರು ಕ್ಷೇತ್ರದ ಮಾಜಿ ಸಂಸದರೂ, ಮಾಜಿ ಸಚಿವರೂ ಆಗಿದ್ದು ಕೊಡಗಿನಲ್ಲಿ ಒಂದಷ್ಟು ಹೆಚ್ಚು ಪ್ರಭಾವ ಹೊಂದಿದ್ದ ‘ಹಳ್ಳಿ ಹಕ್ಕಿ’ ಖ್ಯಾತಿಯ ರಾಜಕಾರಣಿ ಅಡಗೂರು ಹೆಚ್. ವಿಶ್ವನಾಥ್ ಅವರಿಗೆ ಕೊನೆಗೂ ಒಂದು ನೆಲೆ (ಗೂಡು) ಸಿಕ್ಕಂತಾಗಿದೆ.

2008 ರ ಲೋಕಸಭಾ ಚುನಾವಣೆಯ ಸಂದರ್ಭ ಕ್ಷೇತ್ರ ಪುನರ್ ವಿಂಗಡಣೆಯಾಗಿದ್ದು, ಕೊಡಗು-ಮೈಸೂರು ಲೋಕಸಭಾ ಕ್ಷೇತ್ರವಾಗಿ ವಿಲೀನಗೊಂಡಿತ್ತು. ಈ ಸಂದರ್ಭ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ವಿಶ್ವನಾಥ್ ಅವರು ಸಂಸದರಾಗಿ ಚುನಾಯಿತರಾಗಿದ್ದರು. ಕೊಡಗನ್ನು ಒಳಗೊಂಡ ಮೈಸೂರು ಕ್ಷೇತ್ರದ ಸಂಸದರಾದ ಬಳಿಕ ಇವರು ಜಿಲ್ಲೆಯಲ್ಲೂ ಪ್ರಭಾವಿ ನಾಯಕರಾಗಿದ್ದರು.

2013 ರಲ್ಲಿ ಮತ್ತೊಮ್ಮೆ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ.ಯಿಂದ ಅಚ್ಚರಿಯ ಅಭ್ಯರ್ಥಿಯಾಗಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ವಿಶ್ವನಾಥ್ ಈ ಚುನಾವಣೆಯಲ್ಲಿ ಪರಾಭವಗೊಂಡರಾದರೂ ಕಾಂಗ್ರೆಸ್‍ನಲ್ಲೇ ಮುಂದುವರಿದಿದ್ದರು.

ಆದರೆ ಇದಾದ ನಂತರದ ವರ್ಷಗಳಲ್ಲಿ ಉಂಟಾದ ರಾಜಕೀಯ ಕ್ಷೋಬೆಯಲ್ಲಿ ವಿಶ್ವನಾಥ್ ಅವರು ಕಾಂಗ್ರೆಸ್ ತೊರೆದು ಜೆ.ಡಿ.ಎಸ್. ಪಕ್ಷಕ್ಕೆ ಸೇರ್ಪಡೆಗೊಂಡಿದ್ದರಲ್ಲದೆ ಜೆ.ಡಿ.ಎಸ್.ನ ರಾಜ್ಯಾಧ್ಯಕ್ಷರೂ ಆಗಿ ನೇಮಕಗೊಂಡರು. ಇದೇ ವೇಳೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿಯೂ ಚುನಾಯಿತರಾದವರು ವಿಶ್ವನಾಥ್.

ಮತ್ತೆ ಮುನಿಸು

ಆದರೆ ಇವರು ಜೆ.ಡಿ.ಎಸ್. ಶಾಸಕರಾಗಿ ಪೂರ್ಣ ಅವಧಿ ಪೂರೈಸಲಿಲ್ಲ. ಜೆ.ಡಿ.ಎಸ್. ವರಿಷ್ಠರೊಂದಿಗೆ ಮುನಿಸಿಕೊಂಡು ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸಿದ ಇವರು ನಂತರದ ದಿನಗಳಲ್ಲಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ಜೆ.ಡಿ.ಎಸ್. ಹಾಗೂ ಕಾಂಗ್ರೆಸ್‍ನ ಅತೃಪ್ತ ಶಾಸಕರ ಬಣ ಕಟ್ಟಿಕೊಂಡು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಜೆ.ಡಿ.ಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ ತಾವೇ ವಿರೋಧಿಸುತ್ತಿದ್ದ ಬಿ.ಜೆ.ಪಿ. ಪಕ್ಷವನ್ನು ಅಪ್ಪಿಕೊಂಡಿದ್ದರು.

ಬಳಿಕ ಜರುಗಿದ ಉಪಚುನಾವಣೆಯಲ್ಲಿ ಹುಣಸೂರಿನಿಂದಲೇ ಬಿ.ಜೆ.ಪಿ.ಯಿಂದ ಸ್ಪರ್ಧಿಸಿದ್ದ ‘ಹಳ್ಳಿ ಹಕ್ಕಿ’ ಸೋಲು ಕಂಡರಲ್ಲದೆ ಸಚಿವರಾಗುವ ಕನಸಿನಿಂದ ವಂಚಿತರಾದರು. ಈ ಎಲ್ಲಾ ರಾಜಕೀಯ ಏರು-ಪೇರಿನಿಂದಾಗಿ ಒಂದು ರೀತಿಯಲ್ಲಿ ನೆಲೆ ಕಳೆದುಕೊಂಡಂತವರಾಗಿದ್ದ ಹೆಚ್. ವಿಶ್ವನಾಥ್ ಈತನಕ ಮೂಲೆ ಗುಂಪಾದಂತೆ ‘ಸೈಲೆಂಟ್’ ಆಗಿ ಇರುವಂತಾಗಿತ್ತು.

ಇದೀಗ ಕೊನೆಗೂ ಆಡಳಿತಾರೂಡ ಬಿ.ಜೆ.ಪಿ. ಪಕ್ಷ ಈ ಹಿರಿಯ ರಾಜಕಾರಣಿಗೆ ಹೊಸ ‘ನೆಲೆ’ ಕಲ್ಪಿಸಿಕೊಟ್ಟಿದೆ. ಆಪರೇಷನ್ ಕಮಲದ ಪ್ರಮುಖ ರೂವಾರಿಯೊಬ್ಬರಾಗಿ ಬಿ.ಜೆ.ಪಿ. ಅಧಿಕಾರಕ್ಕೆ ಬರಲು ಕಾರಣರಾಗಿದ್ದ ವಿಶ್ವನಾಥ್ ಅವರನ್ನು ಕೊನೆಗೂ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ. ಇವರನ್ನು ಸಾಹಿತ್ಯ ಕ್ಷೇತ್ರದಿಂದ ಪರಿಗಣಿಸಲಾಗಿದ್ದು, ಏನೇ ಆದರೂ ಎಂ.ಎಲ್.ಸಿ.ಯನ್ನಾಗಿ ಮಾಡಲಾಗಿದೆ.

ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನಾಕಾಂಕ್ಷಿಯಾಗಿದ್ದ ವಿಶ್ವನಾಥ್ ಇದೀಗ ಮೇಲ್ಮನೆ ಸದಸ್ಯರಾಗಿರುವುದರಿಂದ ಮತ್ತೆ ಸಚಿವರಾಗುವರೇ ಎಂಬ ಕುತೂಹಲ ಸೃಷ್ಟಿಯಾಗಿದೆ.

ಕೊಡಗಿನಲ್ಲೂ ವಿಶ್ವನಾಥ್ ಅವರಿಗೆ ಸಾಕಷ್ಟು ಮಂದಿ ಸ್ನೇಹಿತರು ಇರುವುದರಿಂದ ಇವರ ಮುಂದಿನ ಅವಕಾಶಗಳ ಕುರಿತು ಚರ್ಚೆ ಆರಂಭಗೊಂಡಿದೆ.

- ಶಶಿ ಸೋಮಯ್ಯ.