ಗಡಿ ಬಂದ್ ಮಾಡಿದ ಕೇರಳ ಸರ್ಕಾರ

ತಿರುವನಂತಪುರಂ, ಜು. 23: ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಜನರ ಅನಗತ್ಯ ಪ್ರಯಾಣ ನಿರ್ಬಂಧಿಸುವುದಕ್ಕಾಗಿ ಕೇರಳ ಸರ್ಕಾರ ಅಂತರರಾಜ್ಯ ಗಡಿಗಳನ್ನು ಬಂದ್ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದ ನಂತರ ಕೇರಳ-ತಮಿಳುನಾಡು ಮತ್ತು ಕೇರಳ-ಕರ್ನಾಟಕ ಗಡಿಗಳನ್ನು ಬಂದ್ ಮಾಡಲಾಗಿದ್ದು, ತುರ್ತು ಅಗತ್ಯಗಳಿಗೆ ಮಾತ್ರ ಗಡಿ ಪ್ರವೇಶಿಸಲು ಅವಕಾಶ ನೀಡಲಾಗಿದೆ. ವೈದ್ಯಕೀಯ ತುರ್ತುಸ್ಥಿತಿ ಮತ್ತು ಅನಿವಾರ್ಯ ಸಾಮಾಜಿಕ ಸಂದರ್ಭಗಳನ್ನು ಹೊಂದಿರುವ ಜನರಿಗೆ ಮಾತ್ರ ರಾಜ್ಯಕ್ಕೆ ಪ್ರವೇಶಿಸಲು ಅವಕಾಶವಿರುತ್ತದೆ ಎಂದು ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹೆರಾ ಹೇಳಿದ್ದಾರೆ.

ಜಲಜೀವನ ಅಭಿಯಾನ ಯಶಸ್ವಿ

ನವದೆಹಲಿ, ಜು. 23: ದೇಶದಲ್ಲಿ ಪ್ರತಿದಿನ ಒಂದು ಲಕ್ಷ ಜನರಿಗೆ ನೀರಿನ ಸಂಪರ್ಕ ಒದಗಿಸಲಾಗುತ್ತಿದ್ದು, ಜಲಜೀವನ ಅಭಿಯಾನದಿಂದ ಇದು ಸಾಧ್ಯವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಇಂದು ದೆಹಲಿಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಣಿಪುರ ಜಲ ಪೂರೈಕೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಇಂದು ಪ್ರತಿದಿನ ಸುಮಾರು 1 ಲಕ್ಷ ಜನರಿಗೆ ನೀರಿನ ಸಂಪರ್ಕವನ್ನು ದೇಶಾದ್ಯಂತ ನೀಡಲಾಗುತ್ತಿದೆ. ಇದರಿಂದ ಅನೇಕ ತಾಯಂದಿರಿಗೆ, ಸಹೋದರಿಯರಿಗೆ ನೀರಿಗೆ ಏನು ಮಾಡುವುದು, ಎಲ್ಲಿಗೆ ಹೋಗುವುದು ಎಂಬ ಚಿಂತೆ ದೂರಾಗಿದೆ ಎಂದರು. ಜಲ ಜೀವನ ಅಭಿಯಾನವನ್ನು ಒಂದು ಸಾಮೂಹಿಕ ಚಳವಳಿಯನ್ನಾಗಿ ಮಾಡಿಕೊಂಡಿದ್ದಕ್ಕೆ ಇದು ಸಾಧ್ಯವಾಗಿದೆ. ಗ್ರಾಮಗಳಲ್ಲಿ ಜನರು ಮತ್ತು ಜನಪ್ರತಿನಿಧಿಗಳು ಎಲ್ಲಿ ಪೈಪ್ ಹಾಕಬೇಕು, ಎಲ್ಲಿ ನೀರು ಸಿಗಬಹುದು, ಟ್ಯಾಂಕ್ ಎಲ್ಲಿ ಕಟ್ಟಬಹುದು, ಎಷ್ಟು ಬಜೆಟ್ ಬೇಕಾಗಬಹುದು ಎಂದು ನಿರ್ಧರಿಸುತ್ತಾರೆ. ಇದರಿಂದ ನೀರಿನ ಪೂರೈಕೆ ಚೆನ್ನಾಗಿ ಒದಗಿಸಲು ಸಾಧ್ಯವಾಗಿದೆ ಎಂದರು.

ಪರೀಕ್ಷೆಯಲ್ಲಿ ಶೇ.75 ಅಂಕಗಳ ಅಗತ್ಯವಿಲ್ಲ

ನವದೆಹಲಿ, ಜು. 23: ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆ ಎನ್‍ಐಟಿ ಮತ್ತು ಕೇಂದ್ರ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ತಾಂತ್ರಿಕ ಸಂಸ್ಥೆಗಳಲ್ಲಿನ ಪ್ರವೇಶ ಮಾನದಂಡದಲ್ಲಿ ಸಡಿಲಿಕೆ ಮಾಡಲಾಗಿದ್ದು, 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಕನಿಷ್ಟ ಶೇ. 75 ರಷ್ಟು ಅಂಕಗಳ ಅಗತ್ಯತೆ ಇರಬೇಕಾಗಿಲ್ಲ. ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಎನ್‍ಐಟಿಗಳು ಮತ್ತು ಇತರ ಕೇಂದ್ರಿಯ ಅನುದಾನಿತ ತಾಂತ್ರಿಕ ಸಂಸ್ಥೆಗಳಲ್ಲಿ ಪ್ರವೇಶ ಮಾನದಂಡಗಳಲ್ಲಿ ಸಡಿಲಿಕೆ ಮಾಡಲು ಕೇಂದ್ರೀಯ ಸೀಟು ಹಂಚಿಕೆ ಮಂಡಳಿ (ಸಿಎಸ್‍ಎಬಿ) ನಿರ್ಧರಿಸಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಟ್ವಿಟ್ ಮಾಡಿದ್ದಾರೆ.

ಮಾಸ್ಕ್ ಧರಿಸದವರಿಗೆ ರೂ. 1 ಲಕ್ಷ ದಂಡ

ರಾಂಚಿ, ಜು. 23: ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಾರ್ಖಂಡ್ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಲಾಕ್‍ಡೌನ್ ನಿಯಮ ಉಲ್ಲಂಘಿಸಿದವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಮಾಸ್ಕ್ ಧರಿಸದವರಿಗೆ ರೂ. 1 ಲಕ್ಷ ದಂಡ ವಿಧಿಸಿ ಸರ್ಕಾರ ಆದೇಶ ಹೊರಡಿಸಿದೆ. ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು 12 ಲಕ್ಷ ಗಡಿ ದಾಟಿದ್ದು, ಲಸಿಕೆ ಬರುವವರೆಗೂ ಕೊರೊನಾ ವೈರಸ್ ವಿರುದ್ಧ ಧೈರ್ಯದಿಂದ ಹೋರಾಡಬೇಕಾದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 45,720 ಪ್ರಕರಣಗಳು ದಾಖಲಾಗಿದ್ದು, ಸೋಂಕಿತರ ಸಂಖ್ಯೆ 12 ಲಕ್ಷಕ್ಕೆ ಏರಿಕೆ ಆಗಿದೆ. ಒಂದು ದಿನದಲ್ಲಿ 1,129 ಸಾವಿನೊಂದಿಗೆ ದೇಶದಲ್ಲಿ ಮೃತರ ಸಂಖ್ಯೆ 29,861ಕ್ಕೆ ಏರಿಕೆಯಾಗಿದೆ.

ಮಹಿಳಾ ಸೇನಾಧಿಕಾರಿಗಳಿಗೆ ಆಯೋಗ

ನವದೆಹಲಿ, ಜು. 23: ಭಾರತೀಯ ಸೇನೆಯಲ್ಲಿರುವ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ಸ್ಥಾಪಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಸರ್ಕಾರದ ಈ ಆದೇಶವು ಸೈನ್ಯದಲ್ಲಿ ಮಹಿಳೆಯರಿಗೆ ದೊಡ್ಡ ಹುದ್ದೆಗಳನ್ನು ನಿರ್ವಹಿಸಲು ಅವಕಾಶ ಮಾಡಿಕೊಡುವ ಮೂಲಕ ಮಹಿಳಾ ಸಬಲೀಕರಣಗೊಳಿಸಲು ದಾರಿ ಮಾಡಿಕೊಟ್ಟಿದೆ ಎಂದು ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಅವರು ಹೇಳಿದ್ದಾರೆ. ಭಾರತೀಯ ಸೇನೆಯ ಎಲ್ಲಾ 10 ವಿಭಾಗಗಳ ಶಾರ್ಟ್ ಸರ್ವಿಸ್ ಕಮಿಷನ್ಡ್ (ಎಸ್‍ಎಸ್‍ಸಿ) ಮಹಿಳಾ ಅಧಿಕಾರಿಗಳ ಶಾಶ್ವತ ಆಯೋಗಕ್ಕೆ ಅನುದಾನ ನಿರ್ದಿಷ್ಟಪಡಿಸುವಂತೆ ಕೇಂದ್ರ ಆದೇಶ ಹೊರಡಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿಂದೆ ಭಾರತೀಯ ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೂ ಕಮಾಂಡರ್ ಸ್ಥಾನ ಕೊಡಬೇಕು. ಅವರಿಗೆ ಶಾಶ್ವತ ಆಯೋಗ ಸ್ಥಾಪಿಸಬೇಕು. ಲಿಂಗ ತಾರತಮ್ಯ ಹೋಗಲಾಡಿಸಬೇಕು. ಕೇಂದ್ರ ಸರ್ಕಾರವು ತನ್ನ ಮಾನಸಿಕ ಸ್ಥಿತಿಯನ್ನು ಬಲಾವಣೆ ಮಾಡಬೇಕೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅದರಂತೆ ಕೇಂದ್ರ ಈಗ ಆಯೋಗ ಸ್ಥಾಪನೆಗೆ ಆದೇಶ ಹೊರಡಸಿದೆ.

ಬ್ರಾಹ್ಮಣ ಮಂಡಳಿಗೆ ರಾಘವೇಂದ್ರ ಭಟ್ ನೇಮಕ

ಬೆಂಗಳೂರು, ಜು. 23: ವೇದ ಬ್ರಹ್ಮ ವಿದ್ವಾನ್ ಡಾ. ರಾಘವೇಂದ್ರ ಭಟ್ ಅವರನ್ನು ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರು ಮತ್ತು ವಿಶೇಷ ಆಹ್ವಾನಿತರನ್ನಾಗಿ ಸರ್ಕಾರ ನೇಮಿಸಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ನ ಬ್ರಾಹ್ಮಣ ಸಂಘದ ಅಧ್ಯಕ್ಷರಾಗಿರುವ ಡಾ. ರಾಘವೇಂದ್ರ ಭಟ್, ಸಂಸ್ಕೃತ ವೇದ ಪಾಠ ಶಾಲೆ ಮುನ್ನಡೆಸುತ್ತಿದ್ದಾರೆ. ಸಂಸ್ಕೃತ ಮತ್ತು ವೇದಾಧ್ಯಯನದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಅವರು, ಹಲವಾರು ರೀತಿಯ ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ರೈಲು ಹರಿದು ಮೂವರ ಸಾವು

ಹೈದರಾಬಾದ್, ಜು. 23: ನಗರದ ಹೊರವಲಯದಲ್ಲಿರುವ ವಿಕರಾಬಾದ್ ಜಿಲ್ಲೆಯ ಚಿತ್ತಿಗಡ್ಡ ಪ್ರದೇಶದ ರೈಲ್ವೆ ಸೇತುವೆಯ ಮೇಲೆ ರೈಲು ಹರಿದು ಮೂವರು ರೈಲ್ವೆ ಇಲಾಖೆ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಮೃತ ಕಾರ್ಮಿಕರನ್ನು ಹೈದರಾಬಾದ್‍ನ ಎನ್. ಪ್ರತಾಪ್ ರೆಡ್ಡಿ (56), ಡಿ. ನವೀನ್‍ಕುಮಾರ್ (35) ಮತ್ತು ಬಿಹಾರ ಮೂಲದ ಶಮ್‍ಶೀರ್ ಅಲಿ (25) ಎಂದು ಗುರುತಿಸಲಾಗಿದೆ ಎಂದು ವಿಕರಾಬಾದ್ ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಕಾರ್ಮಿಕರು ಸೇತುವೆಗೆ ಬಣ್ಣಬಳಿಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ವಿಕರಾಬಾದ್ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.