ಜುಲೈ 16, ಬೆಳಗ್ಗೆ ಎದ್ದು ಮನೆಯವರಿಗೆ ವಿಷಯ ತಿಳಿಸಿದೆ. ಮಡದಿ ಕಣ್ಣೀರು ಹಾಕುತ್ತಲೇ ಸಮಾಧಾನ ಹೇಳಿದಳು. ಸಹೋದರನೂ ಸಾಕಷ್ಟು ಧೈರ್ಯ ಹೇಳಿದ. ಆದರೆ ಮನದೊಳಗಿನ ಕೊರೊನಾ ಕಿಚ್ಚು ಧಗಧಗಿಸುತ್ತಲೇ ಇತ್ತು. ಬೆಳಗ್ಗೆ 11.30 ಕ್ಕೆ ಆ್ಯಂಬುಲೈನ್ ಬಂತು. ಮನೆಯ ಸಮೀಪ ಬಾರಲು ಬಿಡದೆ ಮುಖ್ಯ ರಸ್ತೆಯಿಂದಲೇ ಆ್ಯಂಬುಲೆನ್ಸ್ ಹತ್ತಿದೆ. ಮೊದಲ ಬಾರಿ ಆ್ಯಂಬುಲೆನ್ಸ್ ಹತ್ತಿದ್ದೆ. ವಿಚಿತ್ರ ಅನುಭವ. ಅಲ್ಲೊಂದು ಇಲ್ಲೊಂದು ಕುತೂಹಲದ ಕಣ್ಣುಗಳು ಒಳಗೆ ಇಣುಕುತ್ತಿದ್ದವು. ನಾನು ನಿರ್ಲಕ್ಷಿಸಲು ಪ್ರಯತ್ನಿಸುತ್ತಿದ್ದೆ.

ಸುಮಾರು 20 ನಿಮಿಷಗಳ ಪ್ರಯಾಣದ ಬಳಿಕ ಆ್ಯಂಬುಲೆನ್ಸ್ ವಿಜಯನಗರದ ಗಲ್ಲಿಯೊಂದನ್ನ ಪ್ರವೇಶಿಸಿತು. ಗಲ್ಲಿ ಪ್ರವೇಶಿಸುತ್ತಲೇ ಡ್ರೈವರ್ ಜೋರಾಗಿ ಸೈರನ್ ಹಾಕಿದ. ಸಣ್ಣ ಗಲ್ಲಿಯಾದ್ದರಿಂದ ಸೈರನ್ ಇನ್ನೂ ಜೋರಾಗಿ ಪ್ರತಿಧ್ವನಿಸುತ್ತಿತ್ತು. ರಸ್ತೆ ಬದಿಯಲ್ಲಿ ನೂರಾರು ಕಣ್ಣುಗಳು ಗಾಬರಿ ಕುತೂಹಲದಿಂದ ಆ್ಯಂಬುಲೆನ್ಸ್ ಒಳಗೆ ಇಣುಕುತ್ತಿದ್ದವು. ನಾನು ಮನುಷ್ಯ ಅಲ್ಲ, ಯಾವುದೋ ಮಂಗಳ ಗ್ರಹದ ಜೀವಿಯಾ ಅನಿಸೋಕೆ ಶುರುವಾಯಿತು. 10 ನಿಮಿಷಗಳ ಕಾಲ ಗಲ್ಲಿಗಲ್ಲಿಗಳಲ್ಲಿ ನುಸುಳಿ ಕೊನೆಗೆ ಮನೆಯೊಂದರ ಎದುರು ಬಂದು ನಿಂತಿತ್ತು. ಸುಮಾರು 25, 30 ಜನರು ಗಾಬರಿ ಕುತೂಹಲದಿಂದಲೇ ಆ್ಯಂಬುಲೆನ್ಸ್ ಕಾಯುತ್ತಿದ್ದರು. ಮನೆಯೊಳಗಿನಿಂದ ಬ್ಯಾಗ್ ಒಂದನ್ನು ಹಿಡಿದು ಹೊರ ಬಂದ ಸುಮಾರು 50ರ ಪ್ರಾಯದ ವ್ಯಕ್ತಿ ಸೀದಾ ಬಂದು ಆ್ಯಂಬುಲೆನ್ಸ್ ಹತ್ತಿದ. ಮುಖದ ತುಂಬಾ ದುಗುಡ. ಭಯದಿಂದ ಕೂಡಿದ್ದ ಆ ಕಣ್ಣುಗಳು ಕೇವಲ ನೆಲ ನೋಡುತ್ತಿದ್ದವು. ಆತ ಸಂಪೂರ್ಣ ಕುಗ್ಗಿಹೋಗಿದ್ದಾನೆ ಎನಿಸಿತು.

ಆ್ಯಂಬುಲೆನ್ಸ್ ಹತ್ತಿದ ಆತ ನೆಲ ನೋಡುತ್ತಲೇ ಕುಳಿತುಬಿಟ್ಟ. ಅಷ್ಟರಲ್ಲಿ ಒಂದಿಬ್ಬರು ಮೊಬೈಲ್ ತೆಗೆದು ವೀಡಿಯೋ ಮಾಡಲು ಪ್ರಯತ್ನಿಸುತ್ತಿದ್ದರು. ಬಹುಶಃ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಖುಷಿಪಡುವ ಹುಚ್ಚುತನ.

ಅದನ್ನು ಗಮನಿಸಿದ ವ್ಯಕ್ತಿಯೊಬ್ಬ “ಏ ಯಾರೂ ವೀಡಿಯೋ ಮಾಡ್ಬೇಡ್ರಪ್ಪಾ, ನಮ್ಮ ಮಹಾದೇವಣ್ಣಂಗೆ ಏನೂ ಆಗಲ್ಲ. ಹುಷಾರಾಗಿ ಬರ್ತಾರೆ ಅವ್ರು” ಎಂದ. ಓ ಬಹುಶಃ ಈತ ಜೀವಂತವಾಗಿ ವಾಪಾಸ್ ಬರಲ್ಲ ಅಂತ ಭಾವಿಸಿ ಕೆಲವರು ಆತನ ವೀಡಿಯೋ ಮಾಡ್ತಾ ಇದ್ರು.

ವ್ಯಾನಿನ ಬಳಿ ಬಂದ ಮತ್ತೊಬ್ಬ ವ್ಯಕ್ತಿ ಜೋರು ದನಿಯಲ್ಲಿ ‘‘ಮಹಾದೇವಣ್ಣ, ಟೆನ್ಶನ್ ಮಾಡ್ಕೋಬೇಡ, ನಿಂಗೆ ಏನೂ ಆಗಲ್ಲ, ನೀನ್ ವಾಪಾಸ್ ಬಂದೆ ಬರ್ತೀಯಾ, ಬರ್ಬೇಕು, ಬಂದು ಮತ್ತೆ ಬೆಲ್ಟಲ್ಲಿ ಹೊಡೀ ಬೇಕು. ನಿಂಗೆ ಬೆಲ್ಟ್ ಎತ್ತಿಟ್ಟಿರ್ತೀನಿ, ಮತ್ತೆ ನೀನು ಬೆಲ್ಟಲ್ಲಿ ಹೊಡೀಬೇಕಣ್ಣಾ” ಅಂತ ಒದರಿದ. ನನ್ನ ಪಕ್ಕ ಕುಳಿತಿದ್ದವ ಆಯ್ತು ಅಂದು ಮತ್ತೆ ಮೌನವಾದ.ಆದರೆ ಬೆಲ್ಟ್ ಮ್ಯಾಟರ್ ಏನೂ ಎಂದು ಅರ್ಥವಾಗಲಿಲ್ಲ. ಬಹುಶಃ ಪುಡಿ ರೌಡಿ ಇರ್ಬೇಕು, ಹೊಡೆಯಲು ಬೆಲ್ಟ್ ಬಳಸ್ತಾನೆನೋ ಅಂದ್ಕೊಂಡು ಸುಮ್ಮನಾದೆ.

ನಮ್ಮನ್ನು ಹೊತ್ತ ಆ್ಯಂಬುಲೆನ್ಸ್ ಮತ್ತೆ ಕರ್ಕಶವಾಗಿ ಕಿರುಚುತ್ತಾ, ನಮ್ಮ ಎದೆಬಡಿತ ಹೆಚ್ಚಿಸುತ್ತಾ ಆಸ್ಪತ್ರೆ ಕಡೆ ಹೊರಟಿತು. ಪಕ್ಕದಲ್ಲಿ ಕುಳಿತಿದ್ದ ಮಹಾದೇವನಿಗೆ ಮಾತನಾಡುವ ಆಸಕ್ತಿ ಇದ್ದಂತಿರಲಿಲ್ಲ. ಇಬ್ಬರೂ ಗಾಢ ಮೌನಕ್ಕೆ ಜಾರಿದ್ದೆವು. ಕೆಲವೊಮ್ಮೆ ಜೀವನದ ಪಲ್ಲಟಗಳು ನಮ್ಮನ್ನ ಎಂತೆಂತಹ ಸಂಕಷ್ಟಕ್ಕೆ ದೂಡಿಬಿಡುತ್ತವಲ್ಲಾ ಅಂತ ಯೋಚಿಸುತ್ತಿದ್ದೆ. ಲಾಕ್ಡೌನ್ ಆದ್ದರಿಂದ ಬೆಂಗಳೂರಿನ ಬೀದಿಗಳು ನಿರ್ಜನವಾಗಿದ್ದವು. ನನ್ನ ಮನಸ್ಸು ಕೂಡ ಒಂಥರಾ ಅದೇ ರೀತಿ ನಿರ್ಜನವಾಗಿತ್ತು. ಆ್ಯಂಬುಲೆನ್ಸ್ ವೇಗವಾಗಿ ಓಡುತ್ತಿತ್ತು. ನನ್ನ ಮನಸ್ಸಿನ ಯೋಚನೆಗಳು ಅದಕ್ಕಿಂತ ವೇಗವಾಗಿ ಓಡುತ್ತಿದ್ದವು.

(ನಾಳಿನ ಸಂಚಿಕೆಯಲ್ಲಿ: ಆಸ್ಪತ್ರೆಯಲ್ಲಿ ಮೊದಲ ರಾತ್ರಿ, ಕೊರೊನಾಕ್ಕೆ ಕಿಕ್ ಕೊಟ್ಟ 90ರ ಅಜ್ಜಿ ಮತ್ತು ನನ್ನ ಇಡೀ ಕುಟುಂಬಕ್ಕೆ ಕೊರೊನಾ ಬಂದ ಆ ವೇದನೆಯ ಕ್ಷಣದ ಬಗ್ಗೆ ಹೇಳುತ್ತೇನೆ)

?ಐಮಂಡ ಗೋಪಾಲ್ ಸೋಮಯ್ಯ,

ಪತ್ರಕರ್ತ, ಬೆಂಗಳೂರು. ಮೊ : 8197602051