ಸೋಮವಾರಪೇಟೆ, ಜು. 23: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೊರೊನಾ ಸೋಂಕಿತರು, ಹೊರ ರಾಜ್ಯ, ದೇಶಗಳಿಂದ ಆಗಮಿಸಿ ಹೋಂ ಕ್ವಾರಂಟೈನ್‍ನಲ್ಲಿರುವ ಮಂದಿಯ ಬಗ್ಗೆ ನಿನ್ನೆ ನಡೆದ ಕೆ.ಡಿ.ಪಿ. ಸಭೆಯಲ್ಲಿ ಪಿಡಿಒಗಳು ಸಭೆಗೆ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳ ನೇಮಕವಾಗಿದ್ದು, ಇರುವ ಸಮಯದಲ್ಲಿ ಉತ್ತಮ ಕೆಲಸಗಳನ್ನು ನಿರ್ವಹಿಸಬೇಕು ಎಂದು ಸೂಚಿಸಿದ ಶಾಸಕ ರಂಜನ್, ಗ್ರಾ.ಪಂ.ಗಳ ಮಾಜಿ ಸದಸ್ಯರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರುಗಳೊಂದಿಗೆ ಸಭೆ ನಡೆಸಿ, ಕೊರೊನಾ ಸೋಂಕು ನಿಯಂತ್ರಣದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು.

ತಾಲೂಕು ಪಂಚಾಯಿತಿಯಿಂದ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಕಸವಿಲೇವಾರಿ ಘಟಕ ನಿರ್ಮಾಣಕ್ಕೆ ರೂ. 2 ಲಕ್ಷ ಅನುದಾನ ಮಂಜೂರಾಗಿದೆ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್ ಮಾಹಿತಿ ನೀಡಿದರು. ಕಸ ವಿಲೇವಾರಿಗೆ ವಾಹನಗಳ ಖರೀದಿ ಮಾಡುವ ಬಗ್ಗೆ ಸೂಚಿಸಿದರು. ತಾಲೂಕಿನ ಗುಡ್ಡಗಾಡು ಪ್ರದೇಶಗಳಾದ ಗರ್ವಾಲೆ, ಶಾಂತಳ್ಳಿ, ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಪಿಕ್‍ಅಪ್ ವಾಹನಗಳ ಖರೀದಿ ಮಾಡುವಂತೆ ಶಾಸಕ ರಂಜನ್ ತಿಳಿಸಿದರು.

ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಹೋಂ ಸ್ಟೇ ಮತ್ತು ರೆಸಾರ್ಟ್‍ಗಳನ್ನು ಮುಚ್ಚಿದ್ದರೂ ಸಹ ಹೊರ ಭಾಗದಿಂದ ಹಲವಷ್ಟು ಮಂದಿ ಪ್ರವಾಸಿಗರು ಬರುತ್ತಿದ್ದಾರೆ. ಗರ್ವಾಲೆಯ ಕೋಟೆಬೆಟ್ಟದಲ್ಲಿ ಮದ್ಯಪಾನ ಮಾಡಿ ಮೋಜು ಮಸ್ತಿ ನಡೆಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದರು.

ಕೋವಿಡ್-19ರ ಸಂಬಂಧ ಸಮಾಜ ಕಲ್ಯಾಣ ಇಲಾಖೆಯಿಂದ ಸರ್ಕಾರದ ಸುತ್ತೋಲೆಯ ಪ್ರಕಾರ ಆಹಾರ ಸಾಮಗ್ರಿ ವಿತರಿಸಲಾಗುತ್ತಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು. ವಿವೇಕಾನಂದ ವೃತ್ತದಿಂದ ಆಲೇಕಟ್ಟೆವರೆಗೆ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇದನ್ನು ಇನ್ನಷ್ಟು ದೂರ ಮುಂದುವರೆಸಬೇಕು. ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಬೇಕೆಂದು ಅಭಿಮನ್ಯುಕುಮಾರ್ ಅವರು ಲೋಕೋಪಯೋಗಿ ಇಲಾಖಾ ಅಭಿಯಂತರರಿಗೆ ಮನವಿ ಮಾಡಿದರು.

ಮುಂದಿನ ಕ್ರಿಯಾಯೋಜನೆಯಲ್ಲಿ ರಸ್ತೆಯನ್ನು ಮುಂದುವರೆಸಲು ಕ್ರಮ ವಹಿಸುವದಾಗಿ ಎಇಇ ಮೋಹನ್‍ಕುಮಾರ್ ತಿಳಿಸಿದರು. ಆಲೇಕಟ್ಟೆ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಶಾಸಕರು ಅಭಿಯಂತರರಿಗೆ ಸೂಚಿಸಿದರು. ಪಶುವೈದ್ಯ ಇಲಾಖೆಯಿಂದ ನೂತನ ಕಟ್ಟಡ ನಿರ್ಮಾಣವಾಗಿದ್ದು, ಉದ್ಘಾಟನೆಗೆ ಬಾಕಿಯಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಮಾಹಿತಿ ನೀಡಿದರು. ತಾ. 28 ರಂದು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸಲಾಗುವದು ಎಂದು ರಂಜನ್ ತಿಳಿಸಿದರು.