ಕರಿಕೆ, ಜು. 23: ಗ್ರಾಮದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಆ್ಯಂಬುಲೆನ್ಸ್ ಅನ್ನು ಸರಕಾರ ಮಂಜೂರು ಮಾಡಿದ್ದು, ಜಿ.ಪಂ.ಸದಸ್ಯೆ ಕವಿತಾ ಪ್ರಭಾಕರ್ ಸ್ಥಳೀಯ ಆರೋಗ್ಯ ವಿಸ್ತರಣಾ ಕೇಂದ್ರದ ಆವರಣದಲ್ಲಿ ಕೀಲಿ ಕೈಯನ್ನು ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸುವುದರ ಮೂಲಕ ಜನಸೇವೆಗೆ ಬಿಡುಗಡೆಗೊಳಿಸಿದರು. ಕಳೆದ ಕೆಲ ತಿಂಗಳುಗಳಿಂದ ಕೊರೊನಾ ಹಿನೆÀ್ನಲೆಯಲ್ಲಿ ಕೇರಳ - ಕರ್ನಾಟಕ ಗಡಿಯಲ್ಲಿ ಮಣ್ಣು ಸುರಿದು ರಸ್ತೆ ಬಂದ್ ಆಗಿದ್ದು, ಇದರಿಂದ ಗ್ರಾಮಸ್ಥರು ಚಿಕಿತ್ಸೆ ಪಡೆಯಲು ದೂರದ ಮಡಿಕೇರಿಗೆ ತೆರಳಲು ಸಾಹಸಪಡಬೇಕಾಗಿತ್ತು. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತಿ ಆಡಳಿತ ಮಂಡಳಿ, ಗ್ರೀನ್ ಸ್ಟಾರ್ ಯುವಕ ಸಂಘ, ವಾಯ್ಸ್ ಆಫ್ ಕರಿಕೆ ಸಂಘಟನೆ, ಕರಿಕೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ ಮನವಿ ಸಲ್ಲಿಸಿದ್ದರು. ಈ ಸಮಸ್ಯೆಯ ಬಗ್ಗೆ ಮಡಿಕೇರಿಯಲ್ಲಿ ನಡೆದ ಉಸ್ತುವಾರಿ ಸಚಿವರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರ ಗಮನಕ್ಕೆ ತಂದ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಕೂಡಲೇ ಕರಿಕೆಗೆ ನೂತನ ಆ್ಯಂಬುಲೆನ್ಸ್ ಮಂಜೂರು ಮಾಡುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸುವ ಭರವಸೆಯನ್ನು ಸಚಿವರು ನೀಡಿದ್ದರು. ತಾ. 23ರಂದು ಖಾಸಗಿ ವಾಹನವನ್ನು ಆ್ಯಂಬುಲೆನ್ಸ್ ಆಗಿ ಮಾರ್ಪಡಿಸಿ ಈ ಭಾಗದ ಜನರಿಗೆ ಉಪಯೋಗವಾಗುವಂತೆ ಸರಕಾರ ಆ್ಯಂಬುಲೆನ್ಸ್ ಬಿಡುಗಡೆ ಗೊಳಿಸಿತು.

(ಮೊದಲ ಪುಟದಿಂದ) ಬಿಡುಗಡೆ ಸಂದರ್ಭ ಮಾತನಾಡಿದ ಮಾಜಿ ಗ್ರಾಮ ಪಂಚಾಯತಿ ಅಧÀ್ಯಕ್ಷ ಕೋಡಿ ಪೆÇನ್ನಪ್ಪ, ಸುಮಾರು ಎಪ್ಪತ್ತೆರಡನೆ ಇಸವಿಯಲ್ಲಿ ನಿರ್ಮಾಣಗೊಂಡ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಹಲವು ವರ್ಷಗಳಿಂದ ವೈದ್ಯರು, ಸಿಬ್ಬಂದಿಗಳು, ತುರ್ತು ಚಿಕಿತ್ಸಾ ವಾಹನ ಸೇರಿದಂತೆ ಹಲವಾರು ಸಮಸ್ಯೆಗಳು ಇದ್ದವು. ಇದೀಗ ಕಳೆದ ಆರು ತಿಂಗಳಿಂದ ಖಾಯಂ ವೈದ್ಯರು ಕರ್ತವ್ಯಕ್ಕೆ ಹಾಜರಾಗಿದ್ದು, ಅವರ ಸೇವಾ ಅವಧಿಯಲ್ಲಿ ನೂತನ ಆ್ಯಂಬುಲೆನ್ಸ್ ಮಂಜೂರಾಗಿದ್ದು, ಸಂತಸದ ವಿಷಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಹೊಸಮನೆ ಹರೀಶ್, ಆರ್.ಎಂಸಿ ಸದಸ್ಯ ನಾರಾಯಣ, ವೈದ್ಯಾಧಿಕಾರಿ ಡಾ.ಪುಂಡಲಿ ಕೃಷ್ಣ, ಮಧು ಚೆಂಬೇರಿ ಅತ್ತಿಕಾಯ ರಾಮಚಂದ್ರ, ರಮೇಶ್ ಬಿ.ಕೆ, ನಂದ, ವಾಯ್ಸ್ ಆಫ್ ಕರಿಕೆ ಸಂಘಟನೆಯ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು. ಕಳೆದ ಕೆಲ ದಿನಗಳ ಹಿಂದೆ ಈ ಬಗ್ಗೆ ‘ಶಕ್ತಿ’ಯಲ್ಲಿ ‘ಅತ್ತ ದರಿ ಇತ್ತ ಪುಲಿ, ತ್ರಿಶಂಕು ಸ್ಥಿತಿಯಲ್ಲಿ ಕರಿಕೆ ಗ್ರಾಮಸ್ಥರು’ ಎಂಬ ಶೀರ್ಷಿಕೆ ಅಡಿಯಲ್ಲಿ ಗ್ರಾಮದ ಜನರು ಚಿಕಿತ್ಸೆ ಪಡೆಯಲು ಪಡುತ್ತಿರುವ ಸಂಕಷ್ಟದ ಸ್ಥಿತಿಯನ್ನು ವರದಿ ಮಾಡಿ, ಸರಕಾರ, ಜಿಲ್ಲಾಡಳಿತ ಕೂಡಲೇ ಗಮನ ಹರಿಸಬೇಕೆಂದು ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

-ಸುಧೀರ್ ಹೊದ್ದೆಟ್ಟಿ