ವೀರಾಜಪೇಟೆ, ಜು. 22: ಕೊರೊನಾ ವೈರಾಣು ಹರಡದಂತೆ ಮುಂಜಾಗರೂಕತೆ ವಹಿಸಲು ಸೇವಾ ಸಂಸ್ಥೆಗಳು ಬದ್ಧರಾಗಬೇಕು. ಸಮಾಜದ ಪ್ರತಿಯೊಬ್ಬರಿಗೂ ಕೊರೊನಾ ವೈರಸ್‍ನ ಜಾಗ್ರತೆಯ ಅರಿವು ಮೂಡಿಸಿ ಪ್ರತಿಯೊಬ್ಬರ ಆರೋಗ್ಯ ಕಾಪಾಡಬೇಕು. ಆರೋಗ್ಯ ತಂಡ, ಅಂಗನವಾಡಿ ಕಾರ್ಯಕರ್ತೆಯರು, ಸಮಾಜ ಸೇವಕರು, ಸ್ವಯಂ ಸೇವಕರು ಇದರಲ್ಲಿ ತಮ್ಮ ಸೇವೆಯನ್ನು ತೊಡಗಿಸಿಕೊಳ್ಳಬೇಕು ಎಂದು ವೈದ್ಯಕೀಯ ತಜ್ಞರಾದ ಡಾ:ಫಾತಿಮಾ ಕಾರ್ಯಪ್ಪ ಹೇಳಿದರು.

ವೀರಾಜಪೇಟೆ ಪಟ್ಟಣ ಪಂಚಾಯಿತಿಯ ನೇತೃತ್ವದಲ್ಲಿ ಇಲ್ಲಿನ ಕಾವೇರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಸರಕಾರದ ಆದೇಶದಂತೆ ಪ್ರತಿವಾರ್ಡ್‍ಗೂ ಕೋವಿಡ್19 ಜಾಗೃತಿ ಸಮಿತಿ ಸಭೆ ರಚಿಸುವ ಸಂದರ್ಭದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಡಾ:ಫಾತಿಮಾ ಕಾರ್ಯಪ್ಪ ಮಾತನಾಡಿದರು.

ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ:ವಿಶ್ವನಾಥ್ ಸಿಂಪಿ ಮಾತನಾಡಿ ಕೊರೊನಾ ವೈರಾಣು ಹರಡದಂತೆ ನಿಯಂತ್ರಣಕ್ಕೆ ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ವಿಶೇಷ ಸೌಲಭ್ಯ ಒದಗಿಸಲಾಗಿದೆ. ಇದಕ್ಕಾಗಿ ಫೀವರ್ ಕ್ಲಿನಿಕ್ ಕಾರ್ಯೋನ್ಮುಖವಾಗಿದೆ. ತುರ್ತು ರೋಗಿಗಳಿರುವ ಕೊರೊನಾ ವಾರ್ಡ್ ಸಿದ್ಧವಿದೆ. ಕೊರೊನಾ ಶಂಕಿತರನ್ನು ತಪಾಸಣೆಗಾಗಿ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಕಳಿಸಲಾಗುತ್ತಿದೆ. ಈಗ ರಚನೆಯಾಗುವ ಕೊರೊನಾ ವೈರಾಣು ತಡೆಗಟ್ಟುವ ಜಾಗೃತಿ ಸಮಿತಿಯೊಂದಿಗೆ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳು, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ಮುಕ್ತವಾಗಿ ಸಹಕರಿಸಲಿದ್ದಾರೆ ಎಂದರು.

ಕೊರೊನಾ ವೈರಾಣು ಹರಡದಂತೆ ಜಾಗೃತಿ ಸಭೆಯನ್ನುದ್ದೇಶಿಸಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಅಭಿಯಂತರ ಎಂ.ಪಿ.ಹೇಮ್‍ಕುಮಾರ್, ಎನ್.ನರೇಂದ್ರ ಕಾಮತ್, ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ, ಸದಸ್ಯರುಗಳಾದ ಎಸ್.ಎಚ್.ಮತೀನ್, ಮಹಮ್ಮದ್ ರಾಫಿ ಮತ್ತಿತರರು ಮಾತನಾಡಿದರು.

ಸಭೆಯಲ್ಲಿ ಪಟ್ಟಣ ಪಂಚಾಯಿತಿಯ ಏಳು, ಐದನೇ ವಾರ್ಡ್‍ಗಳÀ ಸದಸ್ಯರುಗಳಾದ ಎಂ.ಕೆ.ದೇಚಮ್ಮ ಹಾಗೂ ಎಸ್.ಎಚ್.ಮತೀನ್ ಅವರ ಉಸ್ತುವಾರಿಯಲ್ಲಿ ಕೋವಿಡ್ 19ರ ಜಾಗೃತಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಈ ಎರಡು ವಾರ್ಡ್‍ಗಳ ಸಮಿತಿ ಸದಸ್ಯರುಗಳಾಗಿ ಎ.ಆರ್.ರುಕೇಶ್ ರಾವ್, ಶಮಿವುಲ್ಲಾ, ರಾವೂಫ್. ಅಪ್ತಾಬ್, ಮೊಹಿಸಿನ್,ಮೋಬಿನಾ, ಶಬನಾ, ಜುಬೇರ್ ಹಾಗೂ ಪುರ್ಷಾನ್ ಈ 9 ಮಂದಿಯನ್ನು ಎರಡು ವಾರ್ಡ್‍ಗಳ ಸಂಯುಕ್ತವಾಗಿ ರಚನೆ ಮಾಡಲಾಯಿತು. ಈ ಸಮಿತಿಯೊಂದಿಗೆ ಕೊರೊನಾ ವೈರಾಣು ಹರಡದಂತೆ ಸಮಿತಿಯ ಸೇವೆಯೊಂದಿಗೆ ಆರೋಗ್ಯ ತಂಡ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯಕ ಸಂಘಗಳು, ಸ್ವಯಂ ಸೇವಾ ಸಂಘಗಳು ಸಹಕರಿಸಲಿವೆ

ಮುಖ್ಯಾಧಿಕಾರಿ ಶ್ರೀಧರ್ ಮಾತನಾಡಿ ರಾಜ್ಯ ಸರಕಾರದ ಆದೇಶದಂತೆ ಎಲ್ಲ ವಾರ್ಡ್‍ಗಳಲ್ಲಿ ಸದಸ್ಯರುಗಳ ಉಸ್ತುವಾರಿಯಲ್ಲಿ ಕೋವಿಡ್ 19 ಜಾಗೃತಿ ಸಮಿತಿ ರಚಿಸಲಾಗುವುದು. ಮೊದಲ ಹಂತವಾಗಿ ವಾರ್ಡ್ 5,ವಾರ್ಡ್‍ಗಳ ಸದಸ್ಯರುಗಳ ಉಸ್ತುವಾರಿಯಲ್ಲಿ ಜಾಗೃತಿ ಸಮಿತಿ ರಚಿಸಲಾಗಿದೆ. ಸರದಿ ಪ್ರಕಾರ ಎಲ್ಲ ವಾರ್ಡ್‍ಗಳಲ್ಲಿ ಕೋವಿಡ್19 ಜಾಗೃತಿ ಸಮಿತಿಯ ರಚನೆ ಮುಂದುವರೆಯಲಿದೆ ಎಂದು ಹೇಳಿದರು.