ಗೋಣಿಕೊಪ್ಪಲು.ಜು.22:ಕಾಣೆಯಾಗಿದ್ದ ವಿವಾಹಿತ ಮಹಿಳೆ 26 ದಿನಗಳ ನಂತರ ಹೆಣವಾಗಿ ಪತ್ತೆಯಾಗಿದ್ದಾಳೆ. ಇವಳೊಂದಿಗೆ ಕಾಣೆಯಾಗಿದ್ದ ಎರಡೂವರೆ ವರ್ಷದ ಹೆಣ್ಣು ಮಗುವಿನ ಪತ್ತೆಗಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದಾರೆ. ನಲ್ಲೂರು ಗ್ರಾಮದ ಲಕ್ಷ್ಮಣ ತೀರ್ಥ ನದಿಗೆ ಸೇರುವ ಕೀರೆ ಹೊಳೆಯಲ್ಲಿ ಕಾಣೆಯಾದ ವಿವಾಹಿತ ಮಹಿಳೆ ಸುಮಿತಳ ಮೃತದೇಹ ಗೋಚರಿಸಿದ್ದು, ದೇಹದ ಸಂಪೂರ್ಣ ಭಾಗ ಕೊಳೆತು ಮೂಳೆಗಳು ಮಾತ್ರ ಸಿಕ್ಕಿವೆ. ಕಾಣೆಯಾದ ಸಂದರ್ಭ ಈಕೆ ಧರಿಸಿದ್ದ ಬಟ್ಟೆಯ ಸಹಾಯದಿಂದ ಮೃತ ಮಹಿಳೆ ಸುಮಿತ ಎಂದು ಈಕೆಯ ಪತಿ ಮಹೇಶ್ ಹಾಗೂ ಕುಟುಂಬಸ್ಥರು ಗುರುತಿಸಿದ್ದಾರೆ.ಜೂನ್ 26ರಂದು ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲೂರು ಗ್ರಾಮದ ಗೌರಿಬಾಣೆ ಪೈಸಾರಿ ನಿವಾಸಿ ಮಹೇಶ್ ಎಂಬವರ ಪತ್ನಿ ಸುಮಿತ (28) ಹಾಗೂ ಈಕೆಯ ಎರಡೂವರೆ ವರ್ಷದ ಹೆಣ್ಣು ಮಗು ಮಧ್ಯಾಹ್ನದ ವೇಳೆ ಮನೆಯಿಂದ ಸಮೀಪದ ಅಂಗನವಾಡಿ ಕೇಂದ್ರಕ್ಕೆ ಆಹಾರ ಧಾನ್ಯ ಪಡೆದು ಬರುತ್ತೇನೆ ಎಂದು ತೆರಳಿದಾಕೆ ಮಗುವಿನೊಂದಿಗೆ ನಾಪತ್ತೆಯಾಗಿದ್ದಳು. ಇವಳ ಸುಳಿವಿಗಾಗಿ ಮನೆಯವರು ಸತತ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ. (ಮೊದಲ ಪುಟದಿಂದ) ಇದರಿಂದ ಪೊನ್ನಂಪೇಟೆ ಪೊಲೀಸ್ ಠಾಣೆಗೆ ದೂರು ನೀಡಿ ತಾಯಿ, ಮಗುವನ್ನು ಪತ್ತೆಹಚ್ಚಿಕೊಡುವಂತೆ ಮಹೇಶ್ ಕೋರಿಕೊಂಡಿದ್ದ. ದೂರನ್ನು ಸ್ವೀಕರಿಸಿಕೊಂಡಿದ್ದ ಪೊನ್ನಂಪೇಟೆ ಎಸ್‍ಐ ಡಿ. ಕುಮಾರ್ ಸುಮಿತ, ಮಗುವಿನ ಸುಳಿವಿಗಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿದ್ದರು. ಸತತ ಹುಡುಕಾಟ ನಡೆಸಿದರೂ ಇವರ ಸುಳಿವು ಮಾತ್ರ ಪತ್ತೆಯಾಗಿರಲಿಲ್ಲ.

ಮಂಗಳವಾರ ಸಂಜೆಯ ವೇಳೆಯಲ್ಲಿ ನಾಗರಿಕರೊಬ್ಬರು ದನ ಮೇಯಿಸುವ ಸಂದರ್ಭ ಹೊಳೆ ಬದಿಯಲ್ಲಿ ಕೆಟ್ಟ ವಾಸನೆ ಬರುತ್ತಿರುವುದನ್ನು ಗಮನಿಸಿ ಸಮೀಪದ ನಿವಾಸಿಗಳಿಗೆ ಸುದ್ದಿ ತಿಳಿಸಿದ್ದಾರೆ. ನಂತರ ಪೊಲೀಸರ ಸಮ್ಮುಖದಲ್ಲಿ ಹೊಳೆ ಬದಿಗೆ ತೆರಳಿ ಪರಿಶೀಲನೆ ನಡೆಸಿದಾಗ ಗಿಡವೊಂದಕ್ಕೆ ಮಹಿಳೆಯ ಮೃತದೇಹ ಸಿಕ್ಕಿಹಾಕಿಕೊಂಡು ದುರ್ನಾತ ಬೀರುತ್ತಿರುವುದು ಗೋಚರಿಸಿದೆ. ನಂತರ ನಾಗರಿಕರು ಹೊಳೆಯಿಂದ ಮೃತದೇಹವನ್ನು ಹೊರ ತೆಗೆದಾಗ ಕಾಣೆಯಾಗಿದ್ದ ಮಹಿಳೆ ಸುಮಿತ ಎಂದು ಗೊತ್ತಾಗಿದೆ.

ಸುದ್ದಿ ತಿಳಿದ ಡಿವೈಎಸ್ಪಿ ಜಯಕುಮಾರ್, ಸಿಪಿಐ ರಾಮರೆಡ್ಡಿ, ಪೊನ್ನಂಪೇಟೆ ಎಸ್‍ಐ ಡಿ.ಕುಮಾರ್, ಎಎಸ್‍ಐ ಉದಯ ಹಾಗೂ ಸಿಬ್ಬಂದಿಗಳು ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ಗೋಣಿಕೊಪ್ಪಲುವಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಗ್ರಾಮಸ್ಥರ ಸಹಕಾರದಿಂದ ಸಾಗಿಸಿದ್ದಾರೆ. ಮುಂಜಾನೆ ತಾಲೂಕು ದಂಡಾಧಿಕಾರಿಗಳಾದ ನಂದೀಶ್ ಕುಮಾರ್ ಶವಾಗಾರಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸುರೇಶ್ ಮರಣೊತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಘಟನೆಯ ಹಿನ್ನೆಲೆ : 28ರ ಪ್ರಾಯದ ವಿವಾಹಿತ ಮಹಿಳೆ ಸುಮಿತ ಗ್ರಾಮದಲ್ಲಿ ಎಲ್ಲರೊಂದಿಗೂ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದಳು. ಎರಡೂವರೆ ವರ್ಷದ ಹೆಣ್ಣುಮಗುವಿನೊಂದಿಗೆ ತನ್ನ ತವರು ಮನೆಯಲ್ಲಿಯೇ ಸುಮಿತ ಹಾಗೂ ಪತಿ ಮಹೇಶ್ ಜೀವನ ಸಾಗಿಸುತ್ತಿದ್ದರು.

ಪೈಂಟರ್ ಕೆಲಸಕ್ಕೆ ತೆರಳುತ್ತಿದ್ದ ಮಹೇಶ್ ಮನೆಯವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡು ಸಂಸಾರ ಸಾಗಿಸುತ್ತಿದ್ದ. ಆದರೆ ಸುಮಿತ ಇದ್ದಕ್ಕಿದ್ದಂತೆಯೇ ಜೂ. 26ರಂದು ತನ್ನ ತವರು ಮನೆಯಿಂದ ಹೊರಟು ನಲ್ಲೂರು ಗ್ರಾಮದ ಅಂಗಡಿಯೊಂದಕ್ಕೆ ತೆರಳಿ ತಾನೂ ಚಹಾ ಕುಡಿದು, ಮಗುವಿಗೆ ಬ್ರೆಡ್ ತಿನ್ನಿಸಿ ನಂತರ ಸಮೀಪದ ಬಸ್ ತಂಗುದಾಣದಲ್ಲಿ ಬಾಳೆಲೆಯತ್ತ ತೆರಳಲು ಬಸ್ಸಿಗಾಗಿ ಕಾದಿದ್ದಳು. ಅತ್ತ ಹೋಗುವ ವಾಹನಗಳನ್ನು ವಿಚಾರಿಸುತ್ತಿದ್ದಳು ಎಂಬ ಬಗ್ಗೆ ನಾಗರಿಕರು ಮಾಹಿತಿ ನೀಡಿದ್ದಾರೆ. ತದ ನಂತರ ಈಕೆ ಎಲ್ಲಿ ಹೋದಳು ಎಂಬದು ಯಾರಿಗೂ ಗೊತ್ತಾಗಲೇ ಇಲ್ಲ.

ತನ್ನ ಮೊಬೈಲ್‍ನೊಂದಿಗೆ ಮುಂಜಾನೆ ಹೊರಟ ಈಕೆ ಬಳಸುತ್ತಿದ್ದ ಮೊಬೈಲ್ ಮಧ್ಯಾಹ್ನದ ವೇಳೆ ಸಂಪರ್ಕ ಕಡಿದುಕೊಂಡಿದೆ. ತದ ನಂತರ ಈಕೆಯ ಕುಟುಂಬಸ್ಥರು ಹಲವು ಕಡೆಗಳಲ್ಲಿ ವಿಚಾರಿಸಿದರೂ ಸುಳಿವು ಪತ್ತೆಯಾಗಲಿಲ್ಲ. ಅಂತಿಮವಾಗಿ ಪೊಲೀಸರಿಗೆ ದೂರು ನೀಡಿದ್ದರು. ಕಾಣೆಯಾದ ದಿನವೇ ಸಮೀಪದ ನಲ್ಲೂರು ಗ್ರಾಮದಲ್ಲಿ ಹರಿಯುವ ಕೀರೆಹೊಳೆ ನದಿಗೆ ಈಕೆ ಮಗುವಿನೊಂದಿಗೆ ಹಾರಿ ಪ್ರಾಣ ಕಳೆದುಕೊಂಡಿರಬಹುದೆಂದು ಅಂದಾಜಿಸಲಾಗಿದೆ. ಮರಣೊತ್ತರ ಪರೀಕ್ಷೆಯ ಸಂದರ್ಭ ಈಕೆ ಬಳಸುತ್ತಿದ್ದ ಮೊಬೈಲ್ ಈಕೆಯ ಸೊಂಟದಲ್ಲಿ ಗೋಚರಿಸಿದೆ. ಆದರೆ ಈಕೆಯೊಂದಿಗೆ ತೆರಳಿದ ಮಗುವಿನ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ. -ಹೆಚ್.ಕೆ. ಜಗದೀಶ್