ಸುಂಟಿಕೊಪ್ಪ, ಜು. 22: ಸುಂಟಿಕೊಪ್ಪ ಎಮ್ಮೆಗುಂಡಿ ರಸ್ತೆಯಲ್ಲಿ ಒಂದೇ ಮನೆಯ ನಾಲ್ವರಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣ ಸೀಲ್‍ಡೌನ್ ಮಾಡಲಾಗಿದ್ದು, ಈ ಪ್ರದೇಶದ ಜನರ ರಕ್ಷಣೆ ಕ್ರಮ ಕೈಗೊಂಡಿರುವುದು ನಿಜ. ಆದರೆ ಸುಂಟಿಕೊಪ್ಪ ಪಂಚಾಯಿತಿ ವ್ಯಾಪ್ತಿಯ ಮತ್ತು ನಾಕೂರು-ಶಿರಂಗಾಲ ಪಂಚಾಯಿತಿ ವ್ಯಾಪ್ತಿಯ 2 ಕಿ.ಮೀ. ದೂರದ ಎಮ್ಮೆಗುಂಡಿ ನೆಟ್ಲಿಬಿ, ಅತ್ತಿಮರ ಲೈನ್, ಲೆಬ್ಬೆ ತೋಟ, ಕಾನ್‍ಬೈಲು, ಶಾಂತಗೇರಿ, ಎಮ್ಮೆಗುಂಡಿ ನಾಟಿ ವೈದ್ಯರ ಮನೆಕಡೆಯಿಂದ ಬರುವ ಹಲವಾರು ಕುಟುಂಬಗಳು ಸೀಲ್‍ಡೌನ್ ಮಾಡಿದ ರಸ್ತೆಯಲ್ಲಿ ಬರಬೇಕಾಗಿದ್ದು ಇವರಿಗೆ ಈಗ ದಾರಿಕಾಣದಂತಾಗಿದೆ. ಕೂಲಿ ಕಾರ್ಮಿಕರು ಹೆಚ್ಚಾಗಿರುವ ಈ ಗ್ರಾಮಗಳಲ್ಲ್ಲಿ ಆರೋಗ್ಯ ಹದಗೆಟ್ಟರೆ 5 ಕಿ.ಮೀ. ದೂರದ ಪನ್ಯ ಮಾದಾಪುರ ರಸ್ತೆಯಲ್ಲಿ ಸುತ್ತಿ ಬರಬೇಕು. ಆದರೆ ವಾಹನದವರು ಈ ರಸ್ತೆಯಲ್ಲಿ ಸಂಚರಿಸಲು ಒಪ್ಪುತ್ತಿಲ್ಲ. ಕಾರಣ ಒಂದೆಡೆ ನಡೆಯಲು ಸಾಧ್ಯವಾಗದ ಗುಂಡಿಬಿದ್ದ ರಸ್ತೆ, ಮತ್ತೊಂದೆಡೆ ಆನೆ ಕಾಟದಿಂದ ಬಾಡಿಗೆ ವಾಹನಗಳು, ಆಟೋ ರಿಕ್ಷಾಗಳು ಬರುತ್ತಿಲ್ಲ. ಇದರಿಂದ ಈ ಗ್ರಾಮದವರಿಗೆ ಕೊರೊನಾಕ್ಕಿಂತ ದೊಡ್ಡ ಶಿಕ್ಷೆಯಾಗಿ ಆಕಾಶ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅನಾರೋಗ್ಯಸ್ಥರು ಮನೆಯಲ್ಲಿ ಜೀವ ಕಳೆಯುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಇಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪಾರಂಡ ಬಡಾವಣೆ ಮತ್ತು ಎಮ್ಮೆಗುಂಡಿ ರಸ್ತೆಯನ್ನು ನಿಷೇಧಿತ ವಲಯ ಎಂದು ಸೀಲ್‍ಡೌನ್ ಮಾಡಲಾಗಿದ್ದು, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ 4 ಸೋಂಕು ಪ್ರಕರಣಗಳು ದಾಖಲಾಗಿರುವುದರಿಂದ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಸೀಲ್‍ಡೌನ್ ಆದ ಪದೇಶದಿಂದ ಪಟ್ಟಣಕ್ಕೆ ಜನ ಬರುತ್ತಿರುವುದು ಹೇಗೆÉ? ಎಂದು ಸಾರ್ವಜನಿಕರು ಆರೋಪ ವ್ಯಕ್ತಪಡಿಸಿದ್ದು ಕಾಟಚಾರಕ್ಕಾಗಿ ಸೀಲ್‍ಡೌನ್ ಮಾಡಿ ದೂರದ ಗ್ರಾಮದವರಿಗೆ ಈ ಶಿಕ್ಷೆ ಯಾಕೆ? ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮದ ಜನತೆ ಒತ್ತಾಯಿಸಿದ್ದಾರೆ. ಗ್ರಾಮದವರಿಗೆ ಔಷಧಿ ಅಂಗಡಿಗೆ, ಆಸ್ಪತ್ರೆಗೆ ತೆರಳಲು ಮುಕ್ತ ಅವಕಾಶ ಕಲ್ಪಿಸಬೇಕು. ಸೀಲ್‍ಡೌನ್ ಆದ ಜಾಗದಲ್ಲಿ ವೈಜ್ಞಾನಿಕವಾಗಿ ರಸ್ತೆ ಅವಕಾಶ ಕಲ್ಪಿಸಿ ಸಂಬಂಧವಿಲ್ಲದ ದೂರದ ಗ್ರಾಮದ ಜನರಿಗೆ ಆಸ್ಪತ್ರೆಗೆ ತೆರಳಲು ಮುಕ್ತ ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದಾರೆ.