ಕೂಡಿಗೆ, ಜು. 22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ದಿಡ್ಡಳ್ಳಿ ಪುನರ್ವಸತಿ ಕೇಂದ್ರದಲ್ಲಿರುವ ಕುಟುಂಬಗಳಿಗೆ ಈಗಾಗಲೇ ಮನೆಗಳ ನಿರ್ಮಾಣದ ಕಾರ್ಯ ಮುಗಿದಿದೆ. ಕಳೆದ ಐದು ತಿಂಗಳುಗಳಿಂದ ಇಲ್ಲಿನ ನಿವಾಸಿಗಳು ಅವರುಗಳಿಗೆ ನಿಗದಿ ಮಾಡಿದ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಇದುವರೆಗೂ ಶೌಚಾಲಯದ ನೀರು ಒಂದು ಜಾಗಕ್ಕೆ ಸೇರಲು ಸಮರ್ಪಕವಾದ ಗುಂಡಿಯನ್ನು ನಿರ್ಮಾಣ ಮಾಡದೆ ತೆರೆದ ಕಾಲುವೆಯಲ್ಲಿ ಶೌಚಾಲಯದ ನೀರು ಹರಿಯುತ್ತಿದ್ದು, ದುರ್ವಾಸನೆಯೊಂದಿಗೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ.
ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತುರ್ತಾಗಿ ಶೌಚಾಲಯ ನೀರು ಸಂಗ್ರಹದ ಗುಂಡಿಯನ್ನು ನಿರ್ಮಾಣ ಮಾಡಬೇಕೆಂದು ಇಲ್ಲಿನ ಪ್ರಮುಖರಾದ ಅಪ್ಪು ಮುತ್ತ, ಶಂಕರಾ, ರಾಜ, ಗಿರೀಶ್, ಗಣೇಶ, ಕಿರಣ ಮತ್ತಿತರರು ಒತ್ತಾಯಿಸಿದ್ದಾರೆ.