ಸೋಮವಾರಪೇಟೆ, ಜು. 22: ಕಾಫಿ ತೋಟದಲ್ಲಿ ಮರ ಕಟಾವು ಮಾಡುತ್ತಿದ್ದ ಸಂದರ್ಭ ಆಯತಪ್ಪಿ ಕೆಳಬಿದ್ದು ಕಾರ್ಮಿಕ ವ್ಯಕ್ತಿಯೋರ್ವರು ಸಾವನ್ನಪ್ಪಿರುವ ಘಟನೆ ಸಮೀಪದ ಅಬ್ಬೂರುಕಟ್ಟೆ ಗ್ರಾಮದಲ್ಲಿ ಇಂದು ನಡೆದಿದೆ.
ಪಟ್ಟಣ ಸಮೀಪದ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ತಣ್ಣೀರುಹಳ್ಳ ನಿವಾಸಿ ಗಣೇಶ್ (48) ಎಂಬವರೇ ಸಾವನ್ನಪ್ಪಿದ ದುರ್ದೈವಿ. ಇಂದು ಬೆಳಿಗ್ಗೆ ಇತರ ಕಾರ್ಮಿಕರೊಂದಿಗೆ ಅಬ್ಬೂರುಕಟ್ಟೆಯ ಶಾಂತಕುಮಾರ್ ಎಂಬವರ ಕಾಫಿ ತೋಟದಲ್ಲಿ ಮರ ಕಟಾವು ಮಾಡುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.
ಪೂರ್ವಾಹ್ನ 11 ಗಂಟೆ ಸುಮಾರಿಗೆ ಹತ್ತಿ ಮರವನ್ನು ಕಟಾವು ಮಾಡುತ್ತಿದ್ದ ಸಂದರ್ಭ ಗಣೇಶ್ ಅವರು ಆಕಸ್ಮಿಕವಾಗಿ ಆಯತಪ್ಪಿ ಕೆಳಬಿದ್ದಿದ್ದಾರೆ. ತಕ್ಷಣ ಅವರನ್ನು ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲು ಮುಂದಾಗಿದ್ದು, ಅಷ್ಟರಲ್ಲಾಗಲೇ ಗಣೇಶ್ ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ.
ಮೃತರು ಪತ್ನಿ ಬೇಬಿ ಸೇರಿದಂತೆ ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಮತ್ತು ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇಲ್ಲಿನ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು.