ವರದಿ: ಉಜ್ವಲ್‍ರಂಜಿತ್ ಮಡಿಕೇರಿ, ಜು. 21: ಒಂದೆರಡು ವರ್ಷಗಳಿಂದೀಚೆಗೆ ಮಳೆಯ ರೌದ್ರ ನರ್ತನದಿಂದಾಗಿ ಕೊಡಗಿನ ಪ್ರಮುಖ ಬೆಳೆಯಾದ ಕಾಫಿ ಸಾಕಷ್ಟು ಹೊಡೆತ ತಿಂದಿರುವದು ಅನುಭವ ವೇದ್ಯ. ಆ ಹೊಡೆತದ ನಡುವೆಯೂ ಅಳಿದುಳಿದ ಕಾಫಿಯನ್ನು ಇದೀಗ ಕೊರೊನಾ ವೈರಸ್ ನುಂಗಿಹಾಕುತ್ತಿದೆ. ಹೌದು.., ಪ್ರಸ್ತುತ ವರ್ಷ ಮಾರ್ಚ್‍ವರೆಗೆ ಕುಯ್ಯಲಾಗಿದ್ದ ಕಾಫಿಯನ್ನು ಇನ್ನೇನು ಮಾರುಕಟ್ಟೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‍ನ ಕರಿನೆರಳಿಗೆ ಸಿಲುಕಿ ಕಾಫಿ ಫಸಲು ಕಳೆಗುಂದುತ್ತಿದೆ. ಪ್ರತಿ ಬಾರಿ ಕೊಡಗಿನಲ್ಲಿ ಡಿಸೆಂಬರ್‍ನಿಂದ ಮಾರ್ಚ್‍ವರೆಗೆ ಕಾಫಿ ಕೊಯ್ಲು ನಡೆಯುತ್ತ್ತದೆ. ಮಾರ್ಚ್ ಬಳಿಕ ಕಾಫಿಯನ್ನು ಮಾರುಕಟ್ಟೆಗೆ ಬಿಡಲಾಗುತ್ತದೆ. ಅದರಂತೆ ಈ ಬಾರಿಯು ಕಾಫಿಯನ್ನು ಮಾರುಕಟ್ಟೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ಕೊರೊನಾ ವೈರಸ್‍ನಿಂದಾಗಿ ಜಾರಿಯಾದ ಲಾಕ್‍ಡೌನ್ ಕಾಫಿ ಬೆಳೆಗಾರರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡ ವ್ಯಾಪಾರ ವಹಿವಾಟು ಸಂಚಾರ ಸ್ಥಗಿತ, ಕಫ್ರ್ಯೂ ಇತ್ಯಾದಿ ನಿರ್ಬಂಧಗಳಿಂದಾಗಿ ಇಲ್ಲಿ ಬೆಳೆದ ಕಾಫಿಯನ್ನು ಬೇರೆಡೆಗಳಿಗೆ ರಫ್ತು ಮಾಡಲಾಗದೆ ಕಾಫಿ ವ್ಯಾಪಾರಿಗಳು ಪರಿತಪಿಸಿದರೆ ಕಾಫಿ ಆದಾಯವನ್ನೆ ನಂಬಿಕೊಂಡಿರುವ ಬೆಳೆಗಾರರು ಕಂಗಾಲಾಗಿದ್ದಾರೆ. ಕೊಡಗಿನ ಪ್ರಮುಖ ಕಾಫಿ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾಗಿರುವ ಕುಶಾಲನಗರದ ಎಸ್‍ಎಲ್‍ಎನ್ ಕಾಫಿ ಕ್ಯೂರಿಂಗ್ ವಕ್ರ್ಸ್‍ನ ವ್ಯವಸ್ಥಾಪಕ ನಿರ್ದೇಶಕರಾದ ವಿಶ್ವನಾಥ್ ಅವರ ಪ್ರಕಾರ ಅವರ ಸಂಸ್ಥೆಗೆ ಪ್ರತಿ ವರ್ಷ ಈ ವೇಳೆಗೆ 18 ರಿಂದ 20 ಸಾವಿರ ಟನ್‍ಗಳಷ್ಟು ಕಾಫಿ ಬರುತ್ತಿತ್ತು. ಆದರೆ ಪ್ರಸಕ್ತ ವರ್ಷ 15 ಸಾವಿರ ಟನ್‍ಗಳಷ್ಟು ಮಾತ್ರ ಬಂದಿದೆ. ಲಾಕ್‍ಡೌನ್‍ನಿಂದಾಗಿ ಶೇ. 80 ರಷ್ಟು ಕಾಫಿ ರಫ್ತು ಕಡಿಮೆಯಾಗಿದ್ದು, ಶೇ. 20 ರಷ್ಟು ಮಾತ್ರ ನಡೆಯುತ್ತಿದೆ. ಕಾಫಿ ಸಂಸ್ಕರಣಾ ಕೆಲಸ ನಡೆಯುತ್ತಿದೆಯಾದರೂ ಕೊರೊನಾ ಲಾಕ್‍ಡೌನ್ ನಿರ್ಬಂಧದ ಹಿನ್ನೆಲೆಯಲ್ಲಿ ಪ್ರತಿ ದಿನ ಒಂದು ಪಾಳಿಯ ಕೆಲಸ ಮಾತ್ರ ಮಾಡಲಾಗುತ್ತಿದೆ. ಇನ್‍ಸ್ಟಂಟ್ ಕಾಫಿ (ದಿಢೀರ್ ಕಾಫಿ) ಶೇ. 35 ರಷ್ಟು ಕಡಿಮೆಯಾಗಿದೆ ಎಂದು ಅವರು ಹೇಳುತ್ತಾರೆ.
ಬೇಡಿಕೆ ಇಲ್ಲ
ಕೊಡಗಿನ ಕಾಫಿಗೆ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಆದರೆ ಪ್ರಸಕ್ತ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಇಲ್ಲಿನ ಕಾಫಿಗೆ ಬೇಡಿಕೆ ಕುಸಿದಿದೆ. ಅಲ್ಲಿನ ಕಾಫಿ ಖರೀದಿದಾರರು ಈ ಹಿಂದಿನಂತೆ ಕೊಡಗಿನ ಕಾಫಿಗೆ ಬೇಡಿಕೆಯಿಡುತ್ತಿಲ್ಲ ಎಂದು ಅನುಭವಿ ಕಾಫಿ ಬೆಳೆಗಾರ ಬೋಸ್ ಮಂದಣ್ಣ ತಿಳಿಸಿದ್ದಾರೆ. ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಕಾಫಿ ತೋಟಗಳಲ್ಲಿ ನಿಗದಿತ ಸಮಯಗಳಲ್ಲಿ ನಡೆಯಬೇಕಿದ್ದ ಕೆಲಸಗಳು ನಡೆದಿಲ್ಲ. ಮತ್ತೊಂದೆಡೆ ಕಾಫಿ ಬೆಳೆಗೆ ಬೇಕಾದ ಗೊಬ್ಬರಗಳು, ಉಪಕರಣಗಳು ಹೇಳಿಕೊಳ್ಳುವಷ್ಟರ ಮಟ್ಟಿಗೆ ಸಮರ್ಪ ಕವಾಗಿ ಸಿಗುತ್ತಿಲ್ಲ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಇಂತಹ ಸಮಸ್ಯೆಗಳು ಸೃಷ್ಟಿಯಾಗಿವೆ. ತಮ್ಮ ಲೈನ್‍ಮನೆಗಳಲ್ಲಿ ಕಾರ್ಮಿಕರನ್ನು ಹೊಂದಿರುವ ಬೆಳೆಗಾರರಿಗೆ ಕಾರ್ಮಿಕರ ಸಮಸ್ಯೆ ಉಂಟಾಗಿಲ್ಲ. ಆದರೆ ಬೇರೆಡೆಗಳಿಂದ ಕಾರ್ಮಿಕರನ್ನು ಅವಲಂಭಿಸಿರುವ ಬೆಳೆಗಾರರು ಕಾರ್ಮಿಕರ ಕೊರತೆ ಎದುರಿಸುವಂತಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಗಡಿಗೇಟ್‍ಗಳು ತೆರೆಯಲ್ಪಟ್ಟ ಹಿನ್ನೆಲೆಯಲ್ಲಿ ಕಾರ್ಮಿಕರ ಕೊರತೆ ಅಷ್ಟಾಗಿ ಉಂಟಾಗಲಿಲ್ಲ. ಒಂದು ವೇಳೆ ಗೇಟ್‍ಗಳು ಬಂದ್ ಆದರೆ ಕಾರ್ಮಿಕರ ಕೊರತೆ ಕಾಫಿ ಉದ್ಯಮವನ್ನು ಕಾಡಲಿದೆ ಎಂದು ಮತ್ತೋರ್ವ ಬೆಳೆಗಾರರಾದ ಪಾಲಿಬೆಟ್ಟದ ಕಿಶೋರ್ ಕಾರ್ಯಪ್ಪ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಬೆಲೆ ಎಷ್ಟಿದೆ?
ರೋಬಸ್ಟಾ ಚೆರಿ (26 ಓ.ಟಿ.) ಒಂದು ಚೀಲಕ್ಕೆ (50 ಕೆ.ಜಿ.) 3325 ರೂ. ರೋಬಸ್ಟಾ ಪಾರ್ಚ್‍ಮೆಂಟ್ ಒಂದು ಚೀಲಕ್ಕೆ 5800 ರಿಂದ 6000 ರೂ. ಅರೆಬಿಕಾ ಚೆರಿ ಒಂದು ಚೀಲಕ್ಕೆ 3800 ರೂ. ಅರೆಬಿಕಾ ಪಾರ್ಚ್‍ಮೆಂಟ್ ಒಂದು ಚೀಲಕ್ಕೆ 10,400 ರೂ. ಬೆಲೆ ಇರುವದಾಗಿ ವ್ಯಾಪಾರಿ ಕಬೀರ್ ಮಾಹಿತಿ ನೀಡಿದ್ದಾರೆ. ರೊಬಸ್ಟಾ ಚೆರಿಗಿಂತಲೂ ರೋಬಸ್ಟಾ ಪಾರ್ಚ್‍ಮೆಂಟ್‍ಗೆ ಬೇಡಿಕೆಯಿದೆ. ಅರೆಬಿಕಾ ಚೆರಿಗಿಂತಲೂ ಅರೆಬಿಕಾ ಪಾರ್ಚ್‍ಮೆಂಟ್‍ಗೆ ಬೇಡಿಕೆ ಹೆಚ್ಚಿದೆ ಎಂದು ಅವರು ತಿಳಿಸಿದ್ದಾರೆ.
ಮಾದರಿ ನೀಡಲಾಗಿದೆ
‘ಪ್ರಿಬ್ಲಾಸಮ್ - ಆಫ್ಟರ್ ಬ್ಲಾಸಮ್’ ಗೆ ಸಂಬಂಧಿಸಿದಂತೆ ಈಗಾಗಲೇ ಮಾದರಿ ತೋಟಗಳಿಂದ ಸಂಗ್ರಹಿಸಿದ ಮಾದರಿಯನ್ನು ಕಾಫಿ ಮಂಡಳಿಯ ರಾಜ್ಯ ಘಟಕಕ್ಕೆ ಕಳುಹಿಸಲಾಗಿದ್ದು, ಅಲ್ಲಿಂದ ಇನ್ನಷ್ಟೆ ಅಧಿಕೃತ ವಿವರ ಬರಬೇಕಿದೆ ಎಂದು ಮಡಿಕೇರಿ ವಿಭಾಗದ ಕಾಫಿ ಮಂಡಳಿ ಅಧಿಕಾರಿ ಶಿವಕುಮಾರ್ ಸ್ವಾಮಿ ಹಾಗೂ ದಕ್ಷಿಣ ಕೊಡಗಿನ ಅಧಿಕಾರಿ ಸತೀಶ್ ಚಂದ್ರ ತಿಳಿಸಿದ್ದಾರೆ. ಇಲ್ಲಿನ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ
(ಮೊದಲ ಪುಟದಿಂದ) ಸಂಬಂಧಿಸಿದವರ ಗಮನ ಸೆಳೆಯಲಾಗಿದೆ. ಯಾವ ರೀತಿಯ ಸ್ಪಂದನ ದೊರೆಯಲಿದೆ ಎಂಬ ಬಗ್ಗೆ ಕಾದುನೋಡಬೇಕಿದೆ ಎಂದು ಶಿವಕುಮಾರ್ ಸ್ವಾಮಿ ನುಡಿದರು.
ಕಾಫಿ ಬೆಳೆಗಾರರಿಗೆ ನೆರವಿಲ್ಲ
ಕಾಫಿ ಮಂಡಳಿಯಿಂದ ಪ್ರಸ್ತುತ ಕಾಫಿ ಬೆಳೆಗಾರರಿಗೆ ಯಾವದೇ ರೀತಿಯ ನೆರವಿನ ಯೋಜನೆಗಳಿಲ್ಲ. ಫಸಲ್ ಭೀಮ್ ಯೋಜನೆಯಲ್ಲಿ ಕಾಫಿ ಬೆಳೆಯನ್ನು ಹೊರಗಿಡಲಾಗಿದೆ. ಕೊಡಗಿನ ಕಾಫಿಯನ್ನು ಹೆಚ್ಚಾಗಿ ಆಮದು ಮಾಡಿಕೊಳ್ಳುತ್ತಿದ್ದ ಇಟಲಿ, ಜರ್ಮನಿಯಂತಹ ದೇಶಗಳು ಕೊರೊನಾದಿಂದಾಗಿ ಕಾಫಿ ಆಮದನ್ನು ನಿಲ್ಲಿಸಿವೆ. ಕಾಫಿ ಬೆಳೆಗಾರರಿಗೆ ನೀಡುತ್ತಿದ್ದ ಎಲ್ಲಾ ಸಬ್ಸಿಡಿಗಳನ್ನು ಕೂಡ ಮಾರ್ಚ್‍ನಲ್ಲೇ ನಿಲ್ಲಿಸಲಾಗಿದೆ. ಸಣ್ಣ ಬೆಳೆಗಾರರ ಸಾಲ ಹಾಗೂ ದೊಡ್ಡ ಬೆಳೆಗಾರರ ಸಾಲದ ಬಡ್ಡಿಯನ್ನು ಮನ್ನಾ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕಾಫಿ ಬೆಳೆಗೆ ಯಾವದೇ ವಿಮೆಯೂ ಇಲ್ಲ. ಒಟ್ಟಾರೆ ಕಾಫಿ ಬೆಳೆಗಾರರಿಗೆ ಯಾವದೇ ನೆರವು ಇಲ್ಲದಂತಾಗಿದ್ದು, ಕಾಫಿ ಬೆಳೆ ಹಾಗೂ ಬೆಳೆಗಾರರಿಗೆ ನೆರವು ಕೊಡಿಸುವಲ್ಲಿ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಹೇಳಿದ್ದಾರೆ.