ಸುಂಟಿಕೊಪ್ಪ, ಜು. 20: ಕೋವಿಡ್ – 19 ಸೋಂಕಿತರನ್ನು ಹಾಗೂ ಸೋಂಕಿನಿಂದ ಮುಕ್ತರಾದವರನ್ನು ಕಂಡರೆ ಮಾರುದ್ದ ದೂರ ನಿಂತು ಮೂಗು ಮುರಿಯುವ ಇಂದಿನ ದಿನಗಳಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಸುಂಟಿಕೊಪ್ಪದ ಬಡಾವಣೆಯೊಂದರ ನಿವಾಸಿಗಳು ಕೊರೊನಾ ಮುಕ್ತಳಾದ ಬಾಲಕಿಗೆ ಹೃದಯಸ್ಪರ್ಶಿ ಸ್ವಾಗತ ನೀಡುವ ಮೂಲಕ ಇತರರಿಗೆ ಮಾದರಿ ಎನಿಸಬಹುದಾದ ಮಾನವೀಯ ಘಟನೆಗೆ ಸಾಕ್ಷಿಯಾಗಿದ್ದಾರೆ.

ಸುಂಟಿಕೊಪ್ಪದ ಅಪ್ಪಾರಂಡ ಬಡಾವಣೆಯ 11ರ ವರ್ಷ ಪ್ರಾಯದ ಬಾಲಕಿಗೆ ಜುಲೈ 12 ರಂದು ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಬಾಲಕಿ ಸೇರಿದಂತೆ ಮನೆಯವರನ್ನು ಹೋಂ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತಲ್ಲದೇ ಮರುದಿನ ಮಡಿಕೇರಿಯಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿ ಅಪ್ಪಾರಂಡ ಬಡಾವಣೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಕೋವಿಡ್ ಆಸ್ಪತ್ರೆಯಲ್ಲಿನ ಯಶಸ್ವಿ ಚಿಕಿತ್ಸೆಯ ಫಲವಾಗಿ ಕೊರೊನಾ ಸೋಂಕಿನಿಂದ ಗುಣಮುಖಗೊಂಡು ಇಂದು ಮನೆಗೆ ಹಿಂತಿರುಗಿ ಬಂದ ಬಾಲಕಿಯನ್ನು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ಅಪ್ಪಾರಂಡ ಬಡಾವಣೆಯ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸ್ಥಳೀಯ ನಿವಾಸಿಗಳು, ಕೊರೊನಾ ವಿರುದ್ಧ ಜಯಿಸಿ ಆಗಮಿಸಿದ ಬಾಲಕಿಯ ಮೇಲೆ ರಸ್ತೆಯುದ್ದಕ್ಕೂ ಪುಷ್ಟದಳವನ್ನು ಎಸೆದು, ಚಪ್ಪಾಳೆ ತಟ್ಟಿ ಹೂಗುಚ್ಛವನ್ನು ನೀಡಿ ಬರಮಾಡಿಕೊಳ್ಳುವ ಮೂಲಕ ಹೃದಯ ವೈಶಾಲ್ಯತೆಯನ್ನು ಮೆರೆದರು.