ಮಾಧ್ಯಮಗಳಿಗೂ ಲಾಕ್‍ಡೌನ್ !
ಬೆಂಗಳೂರು, ಜು. 20: ಕಳೆದ ಕೆಲವು ತಿಂಗಳುಗಳಿಂದ ಕೊರೊನಾ ಬಗ್ಗೆ ಅರಿವು-ಜಾಗೃತಿ ಹಾಗೂ ಜನರಿಗೆ ಮಾಹಿತಿ ನೀಡುವಲ್ಲಿ ಮಾಧ್ಯಮಗಳು ಉತ್ತಮ ಕೆಲಸ ಮಾಡುತ್ತಿವೆ; ಆದರೆ ಬಿತ್ತಿರಿಸುವ ಸುದ್ದಿಯಲ್ಲಿ ಸಮತೋಲನ ಅಗತ್ಯ ಎಂದು ನಿಮ್ಹಾನ್ಸ್ ಮನಶಾಸ್ತ್ರಜ್ಞ ಡಾ.ಕೆಎಸ್.ಚತುರ್ವೇದಿ ಹೇಳಿದ್ದಾರೆ. ಕಳೆದ ಮೂರುವರೆ ತಿಂಗಳಿಂದ ಕೊರೊನಾ ಮತ್ತು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಆದರೆ ಅಗತ್ಯತೆಗಿಂತ ಹೆಚ್ಚಿನ ಸುದ್ದಿ ಬಿತ್ತರಿಸುತ್ತಿರುವ ಮಾಧ್ಯಮಗಳಿಗೂ ಲಾಕ್ ಡೌನ್ ಬೇಕಾಗಿದೆ, ಅತಿಯಾದ ಸುದ್ದಿಯಿಂದ ಸಾರ್ವಜನಿಕರ ಕುತೂಹಲ ಮತ್ತಷ್ಚು ಹೆಚ್ಚುತ್ತದೆ. ವಿಕಾಸ್ ದುಬೆ ಹೊರತುಪಡಿಸಿ ಮಾಧ್ಯಮಗಳಲ್ಲಿ ಕೋವಿಡ್ ಹೊರತುಪಡಿಸಿ ಬೇರೆ ಯಾವುದೇ ಸುದ್ದಿ ಬಂದಿಲ್ಲ. ಹಾಗಾಗಿ ಸಮತೋಲನ ಅಗತ್ಯ ಎಂದು ನಿಮ್ಹಾನ್ಸ್ ನಿರ್ದೇಶಕ ಡಾ.ಗಂಗಾಧರ್ ಅಭಿಪ್ರಾಯಪಟ್ಟಿದ್ದಾರೆ. ಕೋವಿಡ್ ಎಲ್ಲರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿರುವ ಅವರು ಮನೆಯ ಪರಿಕಲ್ಪನೆಯು ಕಳೆದುಹೋಗಿದೆ ಏಕೆಂದರೆ ಮನೆ ಒಂದು ಕುಟುಂಬಕ್ಕೆ ಕೆಲಸದ ಸ್ಥಳ, ಜಿಮ್ ಮತ್ತು ಶಾಲೆಯಾಗಿ ಮಾರ್ಪಟ್ಟಿದೆ. ಮಾಧ್ಯಮದವರು ಕೂಡ ಒತ್ತಡದಲ್ಲಿದ್ದಾರೆ ಎಂದು ಹೇಳಿದ್ದಾರೆ.
ದಾಖಲೆ ಸಹಿತÀ ಸಮರ್ಥಿಸಿಕೊಳ್ಳಲಿ
ಬೆಂಗಳೂರು, ಜು. 20: ಕೊರೊನಾ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ಕುರಿತು ತಾವು ಮಾಡಿರುವ ಆರೋಪಗಳ ಬಗ್ಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಸ್ಪಷ್ಟನೆಗೆ ತಿರುಗೇಟು ನೀಡಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಾಯಿ ಮಾತಿನ ಲೆಕ್ಕವನ್ನು ಒಪ್ಪುವುದಿಲ್ಲ. ದಾಖಲೆ ಸಮೇತ ಸಮರ್ಥಿಸಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಪರಿಕರಗಳ ಖರೀದಿ ವಿಚಾರದಲ್ಲಿ ಸ್ಪಷ್ಟನೆ ಇಲ್ಲ. ಏನೇನು ಖರೀದಿ ಮಾಡಲಾಗಿದೆ ಎಷ್ಟೆಷ್ಟು ಖರ್ಚು ಮಾಡಲಾಗಿದೆ ಎಂಬ ಲೆಕ್ಕ ನೀಡಬೇಕು. ಸುಮ್ಮನೆ ಇವರು ಬಾಯಿ ಮಾತಲ್ಲಿ ಹೇಳಿದರೆ ಹೇಗೆ?. ಇದಕ್ಕೆ ತಕ್ಕ ದಾಖಲೆಗಳನ್ನು ತೋರಿಸಬೇಕು ಎಂದರು. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಾವೇದ್ ಅಕ್ತರ್ ಅವರು ತಮಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಅವ್ಯವಹಾರ ಆರೋಪ ಸಾಬೀತುಪಡಿಸಿದರೆ ರಾಜೀನಾಮೆ ನೀಡುತ್ತೇನೆಂದು ಬಾಯಿ ಮಾತಿನಲ್ಲಿ ಕೇಳಿರುವುದು ಸರಿಯಲ್ಲ. ರಾಜೀನಾಮೆ ಕೊಡಬೇಕಾದರೆ ಮಂತ್ರಿಯಾಗಿ ಯಾಕೆ ಮುಂದುವರೆದಿದ್ದಾರೆ. ನಮಗೆ ದಾಖಲೆಗಳ ಸಮೇತ ಲೆಕ್ಕ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ರಾಜೀನಾಮೆ ಸವಾಲು ಹಾಕಿದ ಶ್ರೀರಾಮುಲು
ಬೆಂಗಳೂರು, ಜು. 20: ಕೋವಿಡ್-19 ಉಪಕರಣ, ಸಾಮಗ್ರಿಗಳು, ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮ, ಅವ್ಯವಹಾರಗಳು ನಡೆದಿದ್ದರೆ ಕೂಡಲೇ ರಾಜೀನಾಮೆ ನೀಡುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಸವಾಲು ಹಾಕಿದ್ದಾರೆ. ವಿಕಾಸ ಸೌಧದಲ್ಲಿಂದು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಜೊತೆ ಜಂಟಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆಕಾಶ ಭೂಮಿಗೆ ಎಷ್ಟು ದೂರ ಅಂತರ ಇದೆಯೋ ಅಷ್ಟೇ ಅಂತರದ ಸುಳ್ಳನ್ನು ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ. ಒಂದು ವೇಳೆ ಅವ್ಯವಹಾರ ನಡೆಸಿರುವುದನ್ನು ಸಾಬೀತು ಮಾಡಿದರೆ ಒಂದು ಕ್ಷಣವು ಸಚಿವ ಸ್ಥಾನದಲ್ಲಿ ಮುಂದುವರೆಯುವುದಿಲ್ಲ. ರಾಜೀನಾಮೆ ಕೊಟ್ಟು ಹೋಗುತ್ತೇನೆ ಎಂದು ಬಿ ಶ್ರೀರಾಮುಲು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು. ವೆಂಟಿಲೇಟರ್ ತಾಂತ್ರಿಕ ಅಂಶಗಳ ಆಧಾರದ ಮೇಲೆ ಖರೀದಿ ಮಾಡಬೇಕಾಗುತ್ತದೆ. ಸುಮಾರು 4 ಲಕ್ಷ ರೂ ಮೌಲ್ಯದ ವೆಂಟಿಲೇಟರ್ ಗಳಿಂದ 50-60 ಲಕ್ಷ ರೂ.ಮೌಲ್ಯದ ವೆಂಟಿಲೇಟರ್‍ಗಳನ್ನು ಖರೀದಿ ಮಾಡಲಾಗಿದೆ. ಬರೀ ನಾಲ್ಕು ಲಕ್ಷದ ಬೆಲೆ ಆಧಾರದ ಮೇಲೆ ಮಾತ್ರ ವೆಂಟಿಲೇಟರ್ ಖರೀದಿ ಮಾಡಿಲ್ಲ. ಹಾಗೆಯೇ ಕೇವಲ ಐಸಿಯುನಲ್ಲಿ ಬಳಕೆಯಾಗುವ ವೆಂಟಿಲೇಟರ್‍ಗೆ 18 ಲಕ್ಷ ರೂ. ವೆಚ್ಚ ತಗುಲಿದೆ. ಉಪಯೋಗಗಳನ್ನು ಆಧರಿಸಿ ವೆಂಟಿಲೇಟರ್ ಗಳ ಬೆಲೆ ನಿರ್ಧಾರ ವಾಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಡ್ರೋನ್ ಪ್ರತಾಪ್ ಪೊಲೀಸ್ ವಶ
ಬೆಂಗಳೂರು, ಜು. 20: ಕ್ವಾರಂಟೈನ್ ಮಾರ್ಗಸೂಚಿ ಉಲ್ಲಂಘಿಸಿ ತಲೆತಪ್ಪಿಸಿಕೊಂಡಿದ್ದ ಡ್ರೋನ್ ಪ್ರತಾಪ್ ಮೈಸೂರಿನಲ್ಲಿ ಪೊಲೀಸರಿಗೆ ಸೆರೆಸಿಕ್ಕಿದ್ದು, ಬೆಂಗಳೂರಿಗೆ ಕರೆತರಲಾಗಿದೆ. ಕೊರೊನಾ ಸಂಬಂಧ ಹೋಂ ಕ್ವಾರಂಟೈನ್‍ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪ್ರತಾಪ್ ವಿರುದ್ಧ ಎಫ್‍ಐಆರ್‍ದಾಖಲಾಗಿತ್ತು. ತಲಘಟ್ಟಪುರ ಪೊಲೀಸರು ಆತನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ. ಹೈದ್ರಾಬಾದ್ ನಿಂದ ವಾಪಸ್ಸಾಗಿದ್ದ ಪ್ರತಾಪ್, ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಜು.16ರಂದು ಸುದ್ದಿ ವಾಹಿನಿಯೊಂದರ ಸಂದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ. ನಂತರ ನಿಯಮ ಉಲ್ಲಂಘಿಸಿದ್ದ ಅವರು ಮನೆಯಲ್ಲಿರದೇ ಮೊಬೈಲ್ ಸ್ವಚ್ಛ ಆಫ್ ಮಾಡಿಕೊಂಡಿದ್ದರು. ಹೀಗಾಗಿ ಪಶುವೈದ್ಯ ಮತ್ತು ವಿಧಿವಿಜ್ಞಾನ ತಜ್ಞ ಡಾ. ಎಚ್.ಎಸ್. ಪ್ರಯಾಗ್‍ಅವರು ತಲಘಟ್ಟಪುರ ಠಾಣೆಗೆ ದೂರು ನೀಡಿದ್ದರು. ನಂತರ ಮೂರು ತಂಡಗಳನ್ನು ರಚಿಸಿ ಪ್ರತಾಪ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಪ್ರತಾಪ್ ಸಾಧನೆ ಬಗ್ಗೆಯೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಮೈಸೂರಿನ ಸಂಬಂಧಿಕರೊಬ್ಬರ ಮನೆಯಲ್ಲಿ ಪ್ರತಾಪ್ ತಂಗಿದ್ದ. ಪ್ರತಾಪ್‍ಅವರನ್ನು ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಿ, ನಂತರವೇ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಲಾಕ್‍ಡೌನ್ ಇಲ್ಲ
ಬೆಂಗಳೂರು, ಜು. 20: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಾಕ್‍ಡೌನ್ ವಿಸ್ತರಿಸದೇ ಇರಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನ ಕೊರೊನಾ ನಿಯಂತ್ರಣ ಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು ಭಾನುವಾರ ಕಫ್ರ್ಯೂ ಇರುತ್ತದೆ, ಇದರ ಜೊತೆ ರಾತ್ರಿ ಕಫ್ರ್ಯೂ ಇರುತ್ತದೆ. ಬುಧವಾರದಿಂದ ಲಾಕ್ ಡೌನ್ ಇರುವುದಿಲ್ಲ ಎಂದು ತಿಳಿಸಿದರು. ಲಾಕ್ ಡೌನ್ ವಿಸ್ತರಣೆ ಬಗ್ಗೆ ಮೊನ್ನೆಯೂ ಬೇಡ ಎಂದು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಪದೇ ಪದೇ ಆ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದು ಹೇಳಿದ್ದಾರೆ. ವಲಯಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನಹರಿಸಿ. ಟ್ರೇಸಿಂಗ್, ಟೆಸ್ಟಿಂಗ್ ಬಗ್ಗೆ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಸಚಿವರಿಗೆ ಸಿಎಂ ಬಿಎಸ್‍ವೈ ಖಡಕ್ ಸೂಚನೆ ನೀಡಿದ್ದಾರೆ. ಸಭೆಯ ಬಳಿಕ ಮಾತನಾಡಿದ ಸೋಮಣ್ಣ, ಲಾಕ್‍ಡೌನ್ ವಿಸ್ತರಣೆ ಬೇಡ, ವಿಸ್ತರಣೆ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಯಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ ಎಂದರು.
ಕೊರೊನಾ ಗೆದ್ದ ಜನಾರ್ದನ ಪೂಜಾರಿ
ಮಂಗಳೂರು, ಜು. 20: ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರು ಕೊರೊನಾ ಎಂಬ ಮಹಾಮಾರಿ ವೈರಸನ್ನು ಗೆದ್ದು ಬಂದಿದ್ದು, ಉತ್ತಮ ಪೌಷ್ಠಿಕ ಆಹಾರ, ಕಷಾಯ ಸೇವನೆ ಮಾಡಿ ಎಂದು ಸಲಹೆ ನೀಡಿದ್ದಾರೆ. 83ರ ಹರೆಯದ ಜನಾರ್ಧನ ಪೂಜಾರಿ ಅವರಿಗೆ ಜುಲೈ 4ರಂದು ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಕೇವಲ ಪೂಜಾರಿ ಮಾತ್ರವಲ್ಲದೆ ಅವರ ಕುಟುಂಬಕ್ಕೂ ಕೊರೊನಾ ಅಂಟಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಎಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡಗಡೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜನಾರ್ದನ ಪೂಜಾರಿ ನಿವಾಸವಿದ್ದು, ಮನೆಯ ಕೆಲಸದಾಕೆಯಿಂದ ಪೂಜಾರಿ ಕುಟುಂಬಕ್ಕೆ ಕೊರೊನಾ ಸೋಂಕು ಹರಡಿತ್ತು. ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಜನಾರ್ದನ ಪೂಜಾರಿ, ನನ್ನ ಆರೋಗ್ಯಕ್ಕಾಗಿ ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.