ಸೋಮವಾರಪೇಟೆ,ಜು.20: ಸೋಮವಾರಪೇಟೆ ಪಟ್ಟಣದಿಂದ ಶಾಂತಳ್ಳಿ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ, ಪಟ್ಟಣದ ವಿವೇಕಾನಂದ ವೃತ್ತದಿಂದ ಆಲೇಕಟ್ಟೆವರೆಗೆ ಕಾಂಕ್ರಿಟ್ ಕಾಮಗಾರಿ ಪ್ರಗತಿಯಲ್ಲಿರುವದರಿಂದ ಮುಂದಿನ 15 ದಿನಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.ಬೆಂಗಳೂರು-ಜಾಲ್ಸೂರು ರಾಜ್ಯ ಹೆದ್ದಾರಿಯ ಪಟ್ಟಣದ ವಿವೇಕಾನಂದ ಸರ್ಕಲ್‍ನಿಂದ ಶಾಂತಳ್ಳಿ ಮಾರ್ಗದ ರಸ್ತೆಯಲ್ಲಿ ಕಾಂಕ್ರಿಟೀಕರಣ ಕಾಮಗಾರಿ ಪ್ರಾರಂಭವಾಗಿದ್ದು, ಮುಂದಿನ 15 ದಿನಗಳ ವರೆಗೆ ಕಾಮಗಾರಿ ನಡೆಯಲಿದೆ.
ವಿವೇಕಾನಂದ ಸರ್ಕಲ್‍ನಿಂದ 500 ಮೀಟರ್ ರಸ್ತೆಯ ಕಾಮಗಾರಿ ನಡೆಯುತ್ತಿರುವದರಿಂದ ತಾ.21ರಿಂದ(ಇಂದಿನಿಂದ) ಆ.6ರ ತನಕ ರಸ್ತೆಯಲ್ಲಿ ವಾಹನ ಸಂಚಾರವಿರುವದಿಲ್ಲ. ಶಾಂತಳ್ಳಿ, ಕುಂದಳ್ಳಿ, ಮಲ್ಲಳ್ಳಿ ಹಾಗೂ ತೋಳೂರುಶೆಟ್ಟಳ್ಳಿ, ಕೂತಿ, ಸಕಲೇಶಪುರಕ್ಕೆ ತೆರಳುವವರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಚೌಡ್ಲು, ಆಲೇಕಟ್ಟೆ ರಸ್ತೆ ಹಾಗೂ ಕಕ್ಕೆಹೊಳೆ, ಹಾನಗಲ್ಲು ಕೆರೆ, ಹಾನಗಲ್ಲು ಶೆಟ್ಟಳ್ಳಿ, ಬಿ.ಟಿ.ಸಿ.ಜಿ. ಕಾಲೇಜು ಮೂಲಕ ಪರ್ಯಾಯ ರಸ್ತೆಯಲ್ಲಿ ಸಂಚರಿಸಬಹುದಾಗಿದೆ.