ಮಡಿಕೇರಿ, ಜು. 20: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಯ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೇವೆಗೆ ಅವಶ್ಯವಿರುವ ಔಷಧಿ ವಿತರಕರು, ಶುಶ್ರೂಷಕಿಯರು ಹಾಗೂ ಪ್ರಯೋಗಾಲಯ ತಜ್ಞರ ಹುದ್ದೆಗಳಿಗೆ ಇಂದು ಸಂದರ್ಶನ ನಡೆಸಲು ಕ್ರಮ ಕೈಗೊಳ್ಳಲಾಯಿತು. ಕರ್ನಾಟಕ ಸರಕಾರದ ನಿರ್ದೇಶನ ಮೇರೆಗೆ ಇಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಂದ ನೇಮಕಾತಿ ಸಂಬಂಧ ಅರ್ಜಿ ಆಹ್ವಾನಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕ - ಯುವತಿಯರು ತಮ್ಮ ಸ್ವಪರಿಚಯ ಪತ್ರದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಗೆ ಆಗಮಿಸಿ ಅರ್ಜಿ ಸಲ್ಲಿಸಿದರು.ಪ್ರಸ್ತುತ ಕೋವಿಡ್ - 19 ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಸರಕಾರವು ಆದೇಶ ಹೊರಡಿಸಿ, ಇಲಾಖೆಯಲ್ಲಿ ಇಂತಹ ಖಾಲಿ ಹುದ್ದೆಗಳಿಗೆ ಮುಂದಿನ ಆರು ತಿಂಗಳಿಗೆ ತಾತ್ಕಾಲಿಕ ನೇಮಕಾತಿಯೊಂದಿಗೆ ಹುದ್ದೆಗಳನ್ನು ಭರ್ತಿಗೊಳಿಸುವಂತೆ ಆದೇಶಿಸಿರುವ ಮೇರೆಗೆ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿ ಡಾ. ಕೆ. ಮೋಹನ್ ಸ್ಪಷ್ಟಪಡಿಸಿದರು.
54 ಹುದ್ದೆಗಳು : ಪ್ರಸ್ತುತ ಜಿಲ್ಲೆಯಲ್ಲಿ ಖಾಲಿ ಇರುವ ಔಷಧಿ ವಿತರಕರ 25 ಹುದ್ದೆಗಳು, ಆರೋಗ್ಯ ಕೇಂದ್ರ ಶುಶ್ರೂಷಕಿಯರ 12 ಹುದ್ದೆಗಳು ಹಾಗೂ ಪ್ರಯೋಗಾಲಯ ತಜ್ಞರ 17 ಹುದ್ದೆಗಳಿಗೆ ಈ ಸಂದರ್ಶನ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಆ್ಯಂಬುಲೆನ್ಸ್ ಖರೀದಿ : ಕೊಡಗು ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಕೊಡಗಿನಲ್ಲಿ ತುರ್ತು ಸೇವೆಗೆ ಅವಶ್ಯಕವಿರುವಂತೆ 2018-19ನೇ ಸಾಲಿನ ಅನುದಾನದಿಂದ, ಆರೋಗ್ಯ ಇಲಾಖೆಗೆ ಹೊಸದಾಗಿ 3 ಆ್ಯಂಬುಲೆನ್ಸ್ ವಾಹನಗಳನ್ನು ಖರೀದಿ ಮಾಡಲಾಗಿದೆ ಎಂದು ಡಾ. ಮೋಹನ್ ವಿವರಿಸಿದರು. ನೂತನ ವಾಹನಗಳು ಇನ್ನಷ್ಟೇ ರಸ್ತೆ ಸಾರಿಗೆ ಪ್ರಾಧಿಕಾರದಿಂದ ನೋಂದಾವಣಿ ಆಗಬೇಕಿದ್ದು, ಒಂದು ವಾಹನ ಜಿಲ್ಲಾ ಕೇಂದ್ರ ಸ್ಥಳದಲ್ಲಿ ಸೇವೆಗೆ ನಿಯೋಜನೆಗೊಳಿಸಲಾಗುವದು ಎಂದರು.
ಇನ್ನೆರಡು ವಾಹನಗಳಲ್ಲಿ ಒಂದನ್ನು ಗ್ರಾಮೀಣ ಭಾಗದ ಸೇವೆಯನ್ನು ಗಮನದಲ್ಲಿ ಇರಿಸಿಕೊಂಡು ಮಾದಾಪುರ ಪ್ರಾಥಮಿಕ ಆರೋಗ್ಯ ಆಸ್ಪತ್ರೆಯಲ್ಲಿ ಇರಿಸಲಾಗುವದು ಎಂದು ನುಡಿದರು.
(ಮೊದಲ ಪುಟದಿಂದ) ಮತ್ತೊಂದು ವಾಹನವನ್ನು ಅದೇ ರೀತಿ ಪಾಲಿಬೆಟ್ಟ ಆರೋಗ್ಯ ಕೇಂದ್ರಕ್ಕೆ ನಿಯೋಜಿಸುವದರೊಂದಿಗೆ ತುರ್ತು ಸೇವೆಗೆ ಕ್ರಮಕೈಗೊಳ್ಳಲಾಗುವದು ಎಂದರು. ಈಗಿನ ಪರಿಸ್ಥಿತಿಯಲ್ಲಿ ಆರೋಗ್ಯ ಇಲಾಖೆಯಿಂದ ಸಾರ್ವಜನಿಕರ ಸೇವೆಗೆ ಅವಶ್ಯವಿರುವ ಆ್ಯಂಬುಲೆನ್ಸ್‍ಗಳು ಹಾಗೂ ಆರೋಗ್ಯ ಸಿಬ್ಬಂದಿಯ ನೇಮಕಕ್ಕೆ ಸೂಕ್ತ ಕ್ರಮವನ್ನು ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನದಂತೆ ಕಲ್ಪಿಸಲಾಗುವದು ಎಂದು ಮಾರ್ನುಡಿದರು.