ಗೋಣಿಕೊಪ್ಪ ವರದಿ, ಜು. 20: ಸೋಮವಾರ ಗೋಣಿಕೊಪ್ಪದಲ್ಲಿ ‘ಟ್ರಾಫಿಕ್ ಜಾಂ’ ಉಂಟಾಯಿತು. ಪೊನ್ನಂಪೇಟೆ ರಸ್ತೆಯಲ್ಲಿ ಸುಮಾರು 1. ಕಿ. ಮೀ. ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಎರಡು ದಿನಗಳ ಲಾಕ್ಡೌನ್ ಹಿನ್ನೆಲೆ ಹೆಚ್ಚು ವಾಹನಗಳ ಓಡಾಟದಿಂದ ಸಮಸ್ಯೆಯಾಯಿತು. ಬೈಪಾಸ್ ರಸ್ತೆ ಜಂಕ್ಷನ್ನಿಂದ ಪೊನ್ನಂಪೇಟೆ ರಸ್ತೆಯಲ್ಲಿನ ಸರ್ವದೈವತಾ ಶಾಲೆವರೆಗೂ ವಾಹನಗಳು ಸಾಲಾಗಿ ನಿಂತಿದ್ದವು. ಬೆಳಿಗ್ಗೆ 11 ಗಂಟೆಯಿಂದ ಮ. 12 ಗಂಟೆವರೆಗೆ ಮುಂದುವರಿದು, ನಂತರ ಯಥಾಸ್ಥಿತಿಗೆ ಬಂತು.
ನಿಯಂತ್ರಿಸಲು ಪೊಲೀಸರು ಹರಸಹಾಸ ಪಟ್ಟರು. ಹೆಚ್ಚಿನ ಸಿಬ್ಬಂದಿ ವಾಹನ ನಿಯಂತ್ರಣದಲ್ಲಿ ತೊಡಗಿಕೊಂಡರು.
ಏಕಮುಖ ಸಂಚಾರವಿದ್ದ ಮುಖ್ಯ ರಸ್ತೆಯನ್ನು ವಾಹನ ನಿಯಂತ್ರಿಸಲು ದ್ವಿಮುಖ ರಸ್ತೆಯಾಗಿ ಕೆಲವೊಂದು ಸಮಯ ಅವಕಾಶ ನೀಡಲಾಯಿತು. ತಿತಿಮತಿ ರಸ್ತೆ ಕಡೆಯಿಂದ ಬರುವ ವಾಹನಗಳಲ್ಲಿ ಪೊನ್ನಂಪೇಟೆ ರಸ್ತೆ ಜಂಕ್ಷನ್ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದು, ಸಮಸ್ಯೆಗೆ ಕಾರಣವಾಯಿತು. ಪೊನ್ನಂಪೇಟೆ ರಸ್ತೆ, ತಿತಿಮತಿ ರಸ್ತೆ ವಾಹನಗಳನ್ನು ತಡೆದು ಬಿಟ್ಟ ಕಾರಣ ಬೈಪಾಸ್ ರಸ್ತೆ ಜಂಕ್ಷನ್ನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು.