ಕೂಡಿಗೆ, ಜು. 19: ಜಿಲ್ಲೆಯ ಪ್ರಮುಖ ಅಣೆಕಟ್ಟೆ ಹಾರಂಗಿ ಮುಂಭಾಗದ ಬೃಂದಾವನಕ್ಕೆ ಹೊಂದಿಕೊಂಡಂತೆ ಇರುವ ಹಾರಂಗಿ ನದಿಗೆ ಅಡ್ಡಲಾಗಿ ತೂಗುಸೇತುವೆಯನ್ನು ನಿರ್ಮಿಸುವಂತೆ ಸಾರ್ವಜನಿಕರ ಆಗ್ರಹವಾಗಿದೆ.
ಅಣೆಕಟ್ಟೆಯ ಬಲಭಾಗದಲ್ಲಿ ನಿರ್ಮಾಣ ಮಾಡಿರುವ ಬೃಂದಾವನದ ಎಡ ಭಾಗದಲ್ಲಿರುವ ಜಾಗದಲ್ಲಿ ಉದ್ಯಾನವನ ನಿರ್ಮಾಣದ ಚಿಂತನೆಯನ್ನು ನೀರಾವರಿ ಇಲಾಖೆ ಹಮ್ಮಿಕೊಂಡಿದೆ. ಇಲ್ಲಿ ತೂಗುಸೇತುವೆ ನಿರ್ಮಿಸುವುದರಿಂದ ಬಲ ಭಾಗದಿಂದ ಎಡಭಾಗದ ಉದ್ಯಾನವನದ ಕಡೆಗೆ ಹೋಗಲು ಅನುಕೂಲ ಕಲ್ಪಿಸಿದಂತೆ ಆಗುತ್ತದೆ. ಉದ್ಯಾನವನವನ್ನು ಅಭಿವೃದ್ಧಿ ಪಡಿಸುತ್ತಿರುವುದರಿಂದ ಪ್ರವಾಸಿಗರಿಗೆ ಮತ್ತು ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲು ತೂಗುಸೇತುವೆಯನ್ನು ನಿರ್ಮಿಸಬೇಕೆಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಬಾಸ್ಕರ್ ನಾಯಕ್ ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.