ಗೋಣಿಕೊಪ್ಪ ವರದಿ, ಜು. 19: ಬಂಬುಕಾಡು ಹಾಡಿ ಅಭಿವೃದ್ಧಿಗೆ ಬಿಡುಗಡೆಯಾಗಿರುವ ರೂ. 20 ಲಕ್ಷ ಅನುದಾನವನ್ನು ತಕ್ಷಣ ಬಳಕೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್. ಪಂಕಜ ಒತ್ತಾಯಿಸಿದ್ದಾರೆ.
ತಿತಿಮತಿ ಸಮೀಪವಿರುವ ಈ ಹಾಡಿಗೆ ರಸ್ತೆ, ಸೇತುವೆ ನಿರ್ಮಾಣಕ್ಕಾಗಿ ಐಟಿಡಿಪಿ ಇಲಾಖೆಯಿಂದ ರೂ. 20 ಲಕ್ಷ ಅನುದಾನ ಬಿಡುಗಡೆಯಾಗಿದ್ದರೂ ಕೂಡ ಗುತ್ತಿಗೆದಾರ ಸ್ಪಂದಿಸುತ್ತಿಲ್ಲ. ತಕ್ಷಣ ಕಾಮಗಾರಿ ಆರಂಭಿಸದಿದ್ದಲ್ಲಿ 10 ದಿನದಲ್ಲಿ ಪೊನ್ನಂಪೇಟೆಯಲ್ಲಿರುವ ಗಿರಿಜನ ಅಭಿವೃದ್ಧಿ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದ್ದಾರೆ.
ಇದೇ ಅವಧಿಯಲ್ಲಿ ಹಣ ಬಿಡುಗಡೆಯಾಗಿದ್ದ ಹಾಡಿಗಳಾದ ಕಾರೆಕಂಡಿ, ಬೊಗ್ಗನಹಡ್ಲು ವ್ಯಾಪ್ತಿಯಲ್ಲಿ ಕಾಮಗಾರಿ ಅಂತ್ಯಗೊಂಡಿದೆ. ಆದರೆ, ಸಂಬಂಧಪಟ್ಟ ಗುತ್ತಿಗೆದಾರ ಕಾಮಗಾರಿ ಆರಂಭಿಸದೆ ಇರುವುದರಿಂದ ಆ ಭಾಗದ ನಿವಾಸಿಗಳು ಸಂಕಷ್ಟ ದಲ್ಲಿದ್ದಾರೆ. ಕೆಸರಿನಲ್ಲಿ ನಡೆದಾಡಬೇಕಿದೆ ಎಂದು ತಿಳಿಸಿದರು. ಐಟಿಡಿಪಿ ಇಲಾಖೆಯಿಂದ ವಿತರಣೆ ಮಾಡಿರುವ ಪ್ಲಾಸ್ಟಿಕ್ ಹೊದಿಕೆ ಕಳಪೆ ಗುಣಮಟ್ಟದಿಂದ ಕೂಡಿದೆ. ಹೆಚ್ಚು ಗಾತ್ರ ಇಲ್ಲದೆ ಗುಡಿಸಿಲಿನ ಅರ್ಧ ಭಾಗಕ್ಕೆ ಮಾತ್ರ ತಲುಪುತ್ತಿದೆ.
ಇದರಿಂದ ಏನು ಪ್ರಯೋಜನವಾಗದು, ಮುಂದಿನ ದಿನಗಳಲ್ಲಿ ಮನೆಗಳಿಗೆ ಶೀಟ್ ಅಥವಾ ಹೆಂಚು ಹಾಕಲು ಇಲಾಖೆ ಯೋಜನೆ ರೂಪಿಸಿಕೊಳ್ಳಬೇಕು ಎಂದರು. ಇಲಾಖೆ ನೆರವಾಗಿ ಗಿರಿಜನರ ಅಭಿವೃದ್ಧಿಗೆ ಸ್ಪಂದಿಸಲು ಅವಕಾಶ ವಿದ್ದರೂ ಪ್ರಯೋಜನವಾಗುತ್ತಿಲ್ಲ. ಗಿರಿಜನರ ಸಮಸ್ಯೆ ಆಲಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಹಾಡಿ ಸದಸ್ಯ ಮಾರಾ ಮಾತನಾಡಿ, ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿಕೊಟ್ಟಿದೆ. ಇದರ ಹೊರತು ಮನೆ, ವಿದ್ಯುತ್ ಸಮಸ್ಯೆಯಿಂದ ತೊಂದರೆಯಾಗಿದೆ. ಐಟಿಡಿಪಿ ಇಲಾಖೆಯಿಂದ ಯಾವ ಸೌಲಭ್ಯವೂ ನಮಗೆ ಸಿಗುತ್ತಿಲ್ಲ. ಮೂಲಭೂತ ವ್ಯವಸ್ಥೆಗೆ ಸ್ಪಂದಿಸುತ್ತಿಲ್ಲ.
12 ಜನರಿಗೆ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದರೂ, ಅದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡದೆ ಫೌಂಡೇಷನ್ ಹಂತದಲ್ಲಿಯೇ ಉಳಿದಿದೆ. ರಸ್ತೆಯಲ್ಲಿ ನಡೆಯಲು ಆಗುತ್ತಿಲ್ಲ. ವಿದ್ಯುತ್ ಸೌಕರ್ಯವಿಲ್ಲದೆ ಮೊಬೈಲ್ ಬೆಳಕಿನಲ್ಲಿ ರಾತ್ರಿ ಮಕ್ಕಳ ಶಿಕ್ಷಣ ನಡೆಯುತ್ತಿದೆ. ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಶಿವಕುಮಾರ್ ಮತ್ತು ಸದಸ್ಯ ಚುಬ್ರು ಇವರಿಂದ ಪಂಚಾಯಿತಿ ಅನುದಾನ ಮಾತ್ರ ಸಿಗುತ್ತಿದೆ. ಇಲಾಖೆಯಿಂದ ಯಾವುದೇ ಯೋಜನೆಗಳು ಅನುಷ್ಠಾನವಾಗುತ್ತಿಲ್ಲ ಎಂದು ಆರೋಪಿಸಿದರು. ಐಟಿಡಿಪಿ ಇಲಾಖೆ ತಕ್ಷಣ ನಮಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಹಾಡಿ ಅಧ್ಯಕ್ಷ ರಮೇಶ್ ಇದ್ದರು.