ಸೋಮವಾರಪೇಟೆ, ಜು. 18: ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮರಬಿದ್ದು ಯುವಕನೋರ್ವ ದುರ್ಮರಣಕ್ಕೀಡಾಗಿರುವ ಘಟನೆ ಸಮೀಪದ ಗೋಣಿಮರೂರು-ಯಡುಂಡೆ ಗ್ರಾಮದಲ್ಲಿ ನಡೆದಿದೆ.ಯಡುಂಡೆ ಗ್ರಾಮದ ಚಿಣ್ಣಪ್ಪ ಅವರ ಪುತ್ರ, ಅವಿವಾಹಿತ ಯುವಕ ಸಂತೋಷ್ (36) ಸಾವನ್ನಪ್ಪಿದ ದುರ್ದೈವಿ. ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಲ್ಯಾಂಡ್ರಿ ಸೂಪರ್‍ವೈಸರ್ ಆಗಿದ್ದ ಸಂತೋಷ್, ಲಾಕ್‍ಡೌನ್ ಹಿನ್ನೆಲೆ ಕಳೆದ 2 ತಿಂಗಳ ಹಿಂದೆ ಯಡುಂಡೆ ಗ್ರಾಮಕ್ಕೆ ಆಗಮಿಸಿ, ಚಿಕ್ಕಪ್ಪ ಈರಪ್ಪ ಅವರ ಮನೆಯಲ್ಲಿದ್ದ. ಇಂದು ಬೆಳಿಗ್ಗೆ ಮತ್ತೋರ್ವ ಚಿಕ್ಕಪ್ಪ ಚಂದ್ರಪ್ಪ ಅವರ ಕಾಫಿ ತೋಟದಲ್ಲಿ (ಮೊದಲ ಪುಟದಿಂದ) ಗೊಬ್ಬರ ಹಾಕುವ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ, ಬೆಳಿಗ್ಗೆ 10.30ರ ಸುಮಾರಿಗೆ ಒಣಗಿದ ಬಳಂಜಿ ಮರದ ಕೊಂಬೆ, ಸಂತೋಷ್‍ನ ಬೆನ್ನಿನ ನಡುಭಾಗಕ್ಕೆ ಬಿದ್ದಿದೆ. ಪರಿಣಾಮ ಜೀವನ್ಮರಣ ಸ್ಥಿತಿಗೆ ತಲುಪಿದ ಸಂತೋಷ್‍ನನ್ನು ಸ್ಥಳೀಯರು ತಕ್ಷಣ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ಮುಂದಾಗುತ್ತಿದ್ದಂತೆ ಪ್ರಾಣ ಕಳೆದುಕೊಂಡಿದ್ದಾರೆ.
ಇಲ್ಲಿನ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಸಂತೋಷ್‍ನೊಂದಿಗೆ ಇತರ ಮೂವರು ಮಹಿಳೆಯರು ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.