ಕರಿಕೆ, ಜು. 18: ಕಳೆದ ನಾಲ್ಕು ತಿಂಗಳಿಂದ ಇಡೀ ಪ್ರಪಂಚವನ್ನು ಕೊರೊನಾ ಕಾಡುತ್ತಿದ್ದು, ಈ ಸಂಬಂಧ ಲಾಕ್‍ಡೌನ್ ಆಗಿದ್ದು, ಗಡಿ ಗ್ರಾಮ ಕರಿಕೆಯ ಜನರನ್ನು ನರಕ ಯಾತನೆಯ ಜೀವನಸಾಗಿಸುವಂತೆ ಮಾಡಿದೆ.ಜಿಲ್ಲಾ ಕೇಂದ್ರದಿಂದ ಎಪ್ಪತ್ತು ಕಿ.ಮಿ. ದೂರದಲ್ಲಿ ಅತ್ತ ಕೇರಳ ರಾಜ್ಯದ ಗಡಿ ಇತ್ತ ದ.ಕ.ಜಿಲ್ಲೆಗೆ ಹೊಂದಿಕೊಂಡು ಸುತ್ತಲೂ ಪಟ್ಟಿಘಾಟ್ ಮೀಸಲು ಅರಣ್ಯ ಹಾಗೂ ತಲಕಾವೇರಿ ಅಭಯಾರಣ್ಯದ ದಟ್ಟ ಕಾನನದ ಬೆಟ್ಟ ಗುಡ್ಡಗಳ ನಡುವೆ ಹೊಂದಿ ಕೊಂಡಿರುವ ಕರಿಕೆಯ ಜನರ ಗೋಳು ಕೇಳುವವರಿಲ್ಲ. ಕಳೆದ ಮಾರ್ಚ್ ತಿಂಗಳಲ್ಲಿ ಸರಕಾರದ ಆದೇಶದನ್ವಯ ಜಿಲ್ಲಾಡಳಿತ ಕರ್ನಾಟಕ -ಕೇರಳ ಗಡಿ ಚೆಂಬೇರಿಯಲ್ಲಿ ಮಣ್ಣು ಸುರಿದು ಅಂತರ್ ಜಿಲ್ಲಾ ರಸ್ತೆಯನ್ನು ಬಂದ್ ಮಾಡಿದ್ದು ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅದನ್ನು ತೆರವುಮಾಡಲು ಸರಕಾರ ಇನ್ನೂ ಕೂಡ ಆದೇಶ ಹೊರಡಿಸಿಲ್ಲ. ಇದರಿಂದಾಗಿ ಇಲ್ಲಿನ ಶೇ. 80 ರಷ್ಟು ಜನ ನೆರೆಯ ಕೇರಳ ರಾಜ್ಯದ ಪಾಣತ್ತೂರನ್ನು ಅವಲಂಬಿಸಿ ಬದುಕುತ್ತಿರುವ ಗ್ರಾಮದ ಜನರು ತಮ್ಮ ದೈನಂದಿನ ಚಟುವಟಿಕೆಗಳಿಗೆ ತೆರಳಲೂ ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ, ಅನಾರೋಗ್ಯ ಪೀಡಿತರನ್ನು ಕುರ್ಚಿಯಲ್ಲಿ ಹೊತ್ತು ಮಣ್ಣಿನ ರಾಶಿಯಮೇಲೆ ಪರದಾಡುತ್ತಾ ದಾಟಿಸುತ್ತಿದ್ದು ರೋಗಿಗಳು ನರಕಯಾತನೆ ಪಡುತ್ತಿದ್ದಾರೆ. ವಾಸ್ತವವಾಗಿ ಕರಿಕೆ ಕೊಡಗು ಜಿಲ್ಲೆಗೆ ಸೇರಿದ್ದರೂ ಗ್ರಾಮದಲ್ಲಿ ಒಂದು ಆರೋಗ್ಯ ವಿಸ್ತರಣಾ ಕೇಂದ್ರ, ಪ್ರಾಥಮಿಕ ಶಾಲೆ, ಒಂದು ಪ್ರೌಢ ಶಾಲೆ, ಅಂಚೆ ಕಚೇರಿಯನ್ನು ಮಾತ್ರ ಹೊಂದಿದ್ದು ಗ್ರಾಮದ ಜನತೆ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಲು ಹಾಗೂ ತಮ್ಮ ಕೃಷಿ ಉತ್ಪನ್ನಗಳ ಮಾರಾಟ, ಹಾಲಿನ ಡೈರಿ , ದಿನಸಿ ಸಾಮಗ್ರಿ, ಪಶು ವೈದ್ಯಕೀಯ ಸೇವೆ ಇಟ್ಟಿಗೆ ಸಿಮೆಂಟು ಸೇರಿದಂತೆ ಇತರ ಗೃಹಬಳಕೆಯ ವಸ್ತುಗಳನ್ನು ಕೊಳ್ಳಲು ಪನತ್ತಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಈ ಪಾಣತ್ತೂರು ಪಟ್ಟಣವನ್ನು ಅವಲಂಬಿಸಿದ್ದು, ಇದೀಗ ಕೊಡಗಿನಲ್ಲಿ ದಿನೆ ದಿನೆ ಕೊರೊನಾ ಪ್ರಕರಣ ಹೆಚ್ಚಿದ ಹಿನ್ನೆಲೆಯಲ್ಲಿ ಕೇರಳ ಪೆÇಲೀಸ್ ಇಲಾಖೆ,ಹಾಗೂ ಅಲ್ಲಿನ ಗ್ರಾಮ ಪಂಚಾಯತಿ ಪಾಣತ್ತೂರಿಗೆ ತೆರಳಲು ಕರಿಕೆ ಜನತೆಗೆ ತಡೆಯೊಡ್ಡುತ್ತಿದ್ದಾರೆ.
ಇದರಿಂದಾಗಿ ಇತ್ತ 25 ಕಿ.ಮೀ.ದೂರದ ಭಾಗಮಂಡಲಕ್ಕೆ ತೆರಳಲು ಬಸ್ ಸೌಕರ್ಯವಿಲ್ಲದೆ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ತೆರಳಲು 90 ಕಿ.ಮೀ. ಮಾರ್ಗದ ಬದಲಿಗೆ 200 ಕಿ.ಮೀ. ಸುತ್ತು ಬಳಸಿ ಮಡಿಕೇರಿ ಮಾರ್ಗವಾಗಿ ತೆರಳಬೇಕಿದೆ. ಒಂದು ಆ್ಯಂಬುಲೆನ್ಸ್ ಒದಗಿಸಲು ಗ್ರಾಮಸ್ಥರು ಹತ್ತು ಹಲವು ಬಾರಿ ಮನವಿ ಮಾಡಿದರೂ ಇದುವರೆಗೂ ಸರಕಾರ ತುರ್ತು ಚಿಕಿತ್ಸಾ ವಾಹನ ಒದಗಿಸುವ ಗೋಜಿಗೆ ಹೋಗಿಲ್ಲ ಆದುದರಿಂದ ಸರಕಾರ, ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಗ್ರಾಮದ ಜನರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಊರಿನ ಗ್ರಾಮಸ್ಥರು 'ಶಕ್ತಿ'ಯ ಮೂಲಕ ಆಗ್ರಹಿಸಿದ್ದಾರೆ. -ಸುಧೀರ್ ಹೊದ್ದೆಟ್ಟಿ