ಗೋಣಿಕೊಪ್ಪಲು, ಜು. 18: ವನ್ಯ ಪ್ರಾಣಿಗಳಿಂದ ರೈತರ ಜಾನುವಾರುಗಳು ಮೃತಪಟ್ಟ ಸಂದರ್ಭ ಪಶು ವೈದ್ಯಾಧಿಕಾರಿಗಳ ಖುದ್ದು ಪರಿಶೀಲನೆ ನಡೆಸಿದ ತರುವಾಯ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಬಾಳೆಲೆ ಹೋಬಳಿಯ ಪಶು ವೈದ್ಯ ಆಸ್ಪತ್ರೆಯ ಡಾ. ಭವಿಷ್ಯ ಕುಮಾರ್ ಅವರನ್ನು ಭೇಟಿ ಮಾಡಿದ ರೈತ ಮುಖಂಡರು ಜಾನುವಾರುಗಳು ಮೃತಪಟ್ಟ ಸಂದರ್ಭ ಮರಣೊತ್ತರ ಪರೀಕ್ಷೆಯ ವರದಿಯಲ್ಲಿ ಕೆಲವು ನ್ಯೂನತೆಗಳಿಂದ ಹಸುವಿನ ಮಾಲೀಕನಿಗೆ ಸರ್ಕಾರಿಂದ ಸಿಗುವ ಸವಲತ್ತುಗಳು ಸಿಗುತ್ತಿಲ್ಲ. ಹಸುವಿನ ನಿಖರವಾದ ಬೆಲೆ ಹಾಗೂ ಹಸು ನೀಡುತ್ತಿರುವ ಹಾಲಿನ ಮೌಲ್ಯವನ್ನು ಸಂಬಂಧಿಸಿದ ಪಶು ವೈದ್ಯಾಧಿಕಾರಿಗಳೇ ನಿಗದಿಪಡಿಸಬೇಕು. ಹೀಗಾದಲ್ಲಿ ಮಾತ್ರ ರೈತ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ರೈತ ಮುಖಂಡರು ವೈದ್ಯರ ಗಮನ ಸೆಳೆದರು.

ತಾ. 7 ರಂದು ಬಾಳೆಲೆ ಹೋಬಳಿ ಸುಳುಗೋಡು ಗ್ರಾಮದ ಮುದ್ದಿಯಡ ಅಣ್ಣು ನಂಜಪ್ಪ ಅವರ ಕೊಟ್ಟಿಗೆಯಿಂದ ಸುಮಾರು 50 ರಿಂದ 60 ಸಾವಿರ ಬೆಲೆ ಬಾಳುವ 10 ರಿಂದ 12 ಲೀಟರ್ ಹಾಲು ಕೊಡುವ ಹಸುವನ್ನು ಹುಲಿಯು ಕೊಂದು ಹಾಕಿತ್ತು. ಈ ಸಂದರ್ಭ ಮರಣೋತ್ತರ ಪರೀಕ್ಷೆ ನಡೆಸಲು ಪಶು ವೈದ್ಯಾಧಿಕಾರಿಗಳು ಸ್ಥಳದಲ್ಲಿ ಲಭ್ಯವಿರಲಿಲ್ಲ. ಇದರಿಂದ ಹಸುವಿನ ಮೌಲ್ಯ ತಿಳಿಯಲು ಸಾಧ್ಯವಾಗಲಿಲ್ಲ. ವೈದ್ಯಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅರಣ್ಯ ಅಧಿಕಾರಿಗಳು ಹಸುವನ್ನು ಟಿಲ್ಲರ್‍ನಲ್ಲಿ ಕೊಂಡೊಯ್ದು ಗುಂಡಿ ತೋಡಿ ಹೂತು ಹಾಕಿದ್ದಾರೆ.

ನಂತರದ ಬೆಳವಣಿಗೆಯಲ್ಲಿ ಮರಣೋತ್ತರ ದೃಢೀಕರಣ ಪತ್ರ ನೀಡಲಾಗಿದೆ. ಇದರಿಂದ ಅರ್ಹ ರೈತ ಕುಟುಂಬಕ್ಕೆ ಇಲಾಖೆ ವತಿಯಿಂದ ನ್ಯಾಯಯುತ ಪರಿಹಾರವು ಲಭ್ಯವಾಗಿಲ್ಲ. ಇನ್ನು ಮುಂದೆ ನಡೆಯುವ ಇಂತಹ ಘಟನೆಯಲ್ಲಿ ವೈದ್ಯರು ಸ್ಥಳಕ್ಕೆ ಆಗಮಿಸಿ ನಂತರವಷ್ಟೆ ಮರಣೋತ್ತರ ಪರೀಕ್ಷೆಯ ದೃಢೀಕರಣ ಪತ್ರ ಸಂಬಂಧಪಟ್ಟವರಿಗೆ ನೀಡುವಂತೆ ಆಗ್ರಹಿಸಿದರು. ರೈತ ಮುಖಂಡರ ಪ್ರಶ್ನೆಗೆ ಉತ್ತರಿಸಿದ ಬಾಳೆಲೆ ಪಶು ವೈದ್ಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಭವಿಷ್ಯಕುಮಾರ್, ಸುಳುಗೋಡು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ನ್ಯೂನತೆ ನಡೆದು ಹೋಗಿದೆ. ಅಂದು ತಾವು ಕಾರ್ಯನಿಮಿತ್ತ ಕಚೇರಿಯಲ್ಲಿ ಲಭ್ಯವಿಲ್ಲದ ಕಾರಣ ಘಟನಾ ಸ್ಥಳಕ್ಕೆ ಆಗಮಿಸಲು ಸಾಧ್ಯವಾಗಲಿಲ್ಲ. ಇನ್ನು ಮುಂದಿನ ದಿನಗಳಲ್ಲಿ ವ್ಯತ್ಯಾಸಗಳು ಆಗದ ರೀತಿಯಲ್ಲಿ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಭೇಟಿಯ ವೇಳೆ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಮಾಯಮುಡಿ ಪಂಚಾಯಿತಿ ಸಂಚಾಲಕ ಪುಚ್ಚಿಮಾಡ ರಾಯ್ ಮಾದಪ್ಪ, ಟಿ. ಶೆಟ್ಟಿಗೇರಿ ರೈತ ಮುಖಂಡರಾದ ಅಪ್ಪಚಂಗಡ ಮೋಟಯ್ಯ, ಬಾಳೆಲೆಯ ರೈತ ಮುಖಂಡರಾದ ಮೇಚಂಡ ಕಿಶ, ತಾಣಚ್ಚೀರ ಲೆಹರ್ ಬಿದ್ದಪ್ಪ, ಬಿರುನಾಣಿಯ ಕರ್ತಮಾಡ ಸುಜು ಮಾದಪ್ಪ, ಕಳ್ಳಿಚಂಡ ಗೌತಮ್, ಮುದ್ದಿಯಡ ಅಣ್ಣು ನಂಜಪ್ಪ, ಕಾಂಡೇರ ರಘು, ಚೆಪ್ಪುಡೀರ ರೋಷನ್, ಪವನ್ ಬೆಳ್ಳಿಯಪ್ಪ, ಮುಂತಾದವರು ಉಪಸ್ಥಿತರಿದ್ದರು.