ಶನಿವಾರಸಂತೆ, ಜು. 19: ನಾಲ್ಕೈದು ದಿನಗಳ ಕಾಲ ಉತ್ತಮವಾಗಿ ಸುರಿದ ಮಳೆಯಿಂದ ಹೋಬಳಿ ವ್ಯಾಪ್ತಿಯಲ್ಲಿ ಕೆಲವು ಗ್ರಾಮಗಳ ಗದ್ದೆಗಳಲ್ಲಿ ನಾಟಿ ಕಾರ್ಯ ಸುಗಮವಾಗಿ ಸಾಗಿತು. ಆದರೆ ಮತ್ತೆ ಮಳೆ ಪ್ರಮಾಣ ಕಡಿಮೆಯಾಗಿದ್ದು, ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲಿನ ವಾತಾವರಣ ರೈತರಲ್ಲಿ ಮತ್ತೆ ಹತಾಶಾಮನೋಭಾವ ಮೂಡಿಸಿದೆ.
ಶನಿವಾರಸಂತೆ ವ್ಯಾಪ್ತಿಯಲ್ಲಿ ಈವರೆಗೆ 11 ಇಂಚು, ದುಂಡಳ್ಳಿ ಹಾಗೂ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ರಮವಾಗಿ 14, 13 ಇಂಚು ಮಳೆಯಾಗಿದೆ. ಭತ್ತದ ಸಸಿಮಡಿ ಬೆಳೆದು ರೈತರು ನಾಟಿ ಕೆಲಸ ಮುಗಿಸಿದ್ದರೆ ಇನ್ನು ಕೆಲವರು ಮಳೆಯಾಗದಿದ್ದಲ್ಲಿ ಕೊಳವೆ ಬಾವಿ ನೀರು ಹಾಯಿಸಿ ಮುಂದಿನ ವಾರ ನಾಟಿ ಕೆಲಸ ಮುಗಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಶನಿವಾರಸಂತೆ ಹೋಬಳಿ ಜಿಲ್ಲೆಯ ಉತ್ತರ ಗಡಿಭಾಗವಾಗಿರುವ ಕಾರಣ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಮುಂದೆ ಆಶ್ಲೇಷ, ಪುಷ್ಯ ಮಳೆಯಾದರೂ ಚೆನ್ನಾಗಿ ಸುರಿದು ಭೂಮಿ ಶೀತಹಿಡಿದರೆ ಮಾತ್ರ ಭತ್ತ, ಕಾಫಿ, ಕಾಳುಮೆಣಸು ಬೆಳೆಯುವ ರೈತರ ಜೀವನ ಹಸನಾಗುತ್ತದೆ. ಇಲ್ಲವಾದರೆ ಬರಗಾಲದ ಭೀತಿ ಕಾಣಬಹುದು ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.