ಕುಶಾಲನಗರ, ಜು. 19: ಯಾರು ಕೂಡ ಮನೆಯಿಂದ ಹೊರಬಾರದೇ ಕೊರೊನಾ ಸೋಂಕುಮುಕ್ತ ಗ್ರಾಮ ಮಾಡುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಖೇಶ್ ಹೇಳಿದರು.
ಇಲ್ಲಿನ ಪಂಚಾಯಿತಿಯ ಸ್ವಚ್ಛತಾ ಸಿಬ್ಬಂದಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿದೆ ಎಂಬ ವೈದ್ಯಕೀಯ ವರದಿಯ ಹಿನ್ನೆಲೆ ಈ ಸಿಬ್ಬಂದಿಯು ಊರಿನ ವಿವಿಧೆಡೆ ಒಡಾಡಿಕೊಂಡಿದ್ದ ಎಂಬ ಮಾಹಿತಿ ಆಧರಿಸಿ ಪಂಚಾಯಿತಿ ವತಿಯಿಂದ ಸೋಂಕು ನಿವಾರಕ ಔಷಧಿಯನ್ನು ಸಿಂಪಡಿಸಲಾಯಿತು. ಇಲ್ಲಿನ ಬಸ್ ನಿಲ್ದಾಣ, ಕೆನರಾ ಬ್ಯಾಂಕ್ ಒಳಭಾಗ, ಸ.ಮಾ.ಪ್ರಾ. ಶಾಲೆ ಮತ್ತು ಪಂಚಾಯಿತಿ ಕಚೇರಿ ಎಲ್ಲೆಡೆ ಔಷಧಿಯನ್ನು ಸಿಂಪಡಿಸಲಾಯಿತು.
ಇದೇ ಸಂದರ್ಭ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಒಳ ಮತ್ತು ಹೊರಭಾಗದ 100 ಮೀಟರ್ ವ್ಯಾಪ್ತಿಯೊಳಗೂ ಔಷಧಿಯನ್ನು ಸಿಂಪಡಿಸಲಾಯಿತು. ಈ ಸಂದರ್ಭ ಹೆಬ್ಬಾಲೆ ಸಿ.ಆರ್.ಪಿ. ಗಿರೀಶ್ ಹಾಗೂ ಇತರರು ಪಾಲ್ಗೊಂಡಿದ್ದರು. ಪಂಚಾಯಿತಿ ದಿನಗೂಲಿ ಸಿಬ್ಬಂದಿ ಪುರಂದರ ಮತ್ತು ಪ್ರಕಾಶ್ ಸ್ಯಾನಿಟೈಸರ್ ಸಿಂಪಡಿಸಿದರು.