ಮಡಿಕೇರಿ, ಜು. 17: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಕೊರೊನಾ ಕಾರಣದಿಂದಾಗಿ ವಿಳಂಬವಾಗಿ ಜರುಗಿದ್ದು, ಇದೀಗ ನಡೆಯುತ್ತಿರುವ ಮೌಲ್ಯಮಾಪನ ಕಾರ್ಯ ವ್ಯವಸ್ಥಿತವಾಗಿ ಜರುಗುತ್ತಿದೆ.ಕೊಡಗು ಜಿಲ್ಲೆಯಲ್ಲಿ ಮಡಿಕೇರಿಯ ಸಂತ ಮೈಕಲರ ಶಾಲೆಯಲ್ಲಿ ಇದಕ್ಕಾಗಿ ನಿಯೋಜಿತ ರಾಗಿರುವ ಶಿಕ್ಷಕರು ಈ ಕೆಲಸದಲ್ಲಿ ನಿರತರಾಗಿದ್ದರೆ. ಕಳೆದ ಸೋಮವಾರ ದಿಂದ ಈ ಪ್ರಕ್ರಿಯೆ ಆರಂಭ ಗೊಂಡಿದ್ದು, ಸೂಕ್ತ ಮುನ್ನೆಚ್ಚರಿಕಾ ಕ್ರಮ ಹಾಗೂ ಪೊಲೀಸ್ ಭದ್ರತೆಯೊಂದಿಗೆ ಮೌಲ್ಯಮಾಪನ ಭರದಿಂದ ಸಾಗಿದೆ. ಕೊಡಗು ಜಿಲ್ಲೆಗೆ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಪಠ್ಯಕ್ಕೆ ಸಂಬಂಧಿಸಿ 9 ಸಾವಿರ ಉತ್ತರ ಪತ್ರಿಕೆಗಳು ಹಾಗೂ ಭಾಷಾ ಪಠ್ಯ ಕ್ರಮವಾದ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯ 11 ಸಾವಿರ ಉತ್ತರ ಪತ್ರಿಕೆಗಳನ್ನು ನೀಡ ಲಾಗಿದೆ. ಕೊಡಗಿನಲ್ಲಿ ನಡೆಯುತ್ತಿ ರುವದು ಬೇರೆ ಜಿಲ್ಲೆಗೆ ಸಂಬಂಧಿಸಿದ ಉತ್ತರ ಪತ್ರಿಕೆಯ ಮೌಲ್ಯಮಾಪನ ವಾಗಿದ್ದು, ಈಗಾಗಲೇ ಗಣಿತದ ಮೌಲ್ಯಮಾಪನ ಮುಕ್ತಾಯವಾಗಿದೆ. ಉಳಿದ ಪತ್ರಿಕೆಗಳ ಕಾರ್ಯ ಮುಂದಿನ ಮಂಗಳವಾರಕ್ಕೆ ಮುಕ್ತಾಯವಾಗಲಿದೆ ಎಂದು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಚಾಡೋ ಅವರು ತಿಳಿಸಿದ್ದಾರೆ. ಮೌಲ್ಯಮಾಪನಕ್ಕೆ ಒಟ್ಟು 789 ಶಿಕ್ಷಕರು ನೋಂದಾಯಿತ ರಾಗಿದ್ದರು. ಇವರಲ್ಲಿ 629 ಮಂದಿ ಕರ್ತವ್ಯ ನಿರತರಾಗಿದ್ದು, ಶೇ. 78 ರಷ್ಟು ಹಾಜರಾತಿಯಿದೆ. 169 ಮಂದಿ ಗೈರಾಗಿದ್ದು, ಇದಕ್ಕೆ ವಿವಿಧ ಆರೋಗ್ಯ ಸಮಸ್ಯೆ, ಗರ್ಭಿಣಿಯರು ಇತ್ಯಾದಿ ಕಾರಣಗಳಿವೆ. ಅಲ್ಲದೆ 55 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ ಕರ್ತವ್ಯದಿಂದ ವಿನಾಯಿತಿ ನೀಡಲಾಗಿದೆ ಎಂದು ಮಚ್ಚಾಡೋ ಅವರು ಮಾಹಿತಿ ನೀಡಿದ್ದಾರೆ.