*ಸಿದ್ದಾಪುರ, ಜು.17: ಅಭ್ಯತ್ಮಂಗಲ ಗ್ರಾಮದ ಜ್ಯೋತಿನಗರದ ನಿವಾಸಿ 55 ವರ್ಷದ ಪುರುಷರೊಬ್ಬರಲ್ಲಿ ಕೋವಿಡ್ ದೃಢಪಟ್ಟಿದ್ದು, ಸಿದ್ದಾಪುರ ಸರ್ಕಾರಿ ಆಸ್ಪತ್ರೆಯ ವೈದ್ಯರ ಕಾರ್ಯ ವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಬಾಳೆಲೆಯಲ್ಲಿ ಮರ ಕಸಿ ಕೆಲಸ ಮಾಡುತ್ತಿದ್ದ ವ್ಯಕ್ತಿ ತೀವ್ರ ಜ್ವರದಿಂದ ಸಿದ್ದಾಪುರ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಟೈಫೈಡ್ ಆಗಿದೆ ಎಂದು ಆಸ್ಪತ್ರೆಯ ವೈದ್ಯರು ಸುಮಾರು 10 ದಿನಗಳಿಂದ ಆಸ್ಪತ್ರೆಯಲ್ಲೇ ದಾಖಲಿಸಿಕೊಂಡಿದ್ದರು. ಇದೀಗ ಸೋಂಕು ದೃಢಪಟ್ಟಿದೆ ಎಂದು ತಡವಾಗಿ ವರದಿ ಬಂದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಇತರ ರೋಗಿಗಳಲ್ಲಿ ಆತಂಕ ಮೂಡಿದೆ.
ಅಲ್ಲದೆ ಚಿಕಿತ್ಸೆ ನೀಡಿದ ವೈದ್ಯರ ಬಗ್ಗೆಯೂ ಆರೋಗ್ಯ ಇಲಾಖೆ ನಿಗಾ ವಹಿಸಬೇಕು ಮತ್ತು ಪರೀಕ್ಷೆಗೆ ಒಳಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜ್ಯೋತಿ ನಗರ ಹಾಗೂ ಸಿದ್ದಾಪುರ ಆಸ್ಪತ್ರೆಯನ್ನು ಸೀಲ್ಡೌನ್ ಮಾಡಲಾಗಿದೆ. ಆದರೆ ಸಂಬಂಧಿಸಿದ ವೈದ್ಯರು ತಮ್ಮ ಕ್ಲಿನಿಕ್ ಅಥವಾ ಮನೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡದಂತೆ ಆರೋಗ್ಯ ಅಧಿಕಾರಿಗಳು ಸೂಚನೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜ್ಯೋತಿ ನಗರದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಸೀಲ್ಡೌನ್ ಮಾಡಿರುವುದರಿಂದ ಸಂಕಷ್ಟ ಎದುರಾಗಿದೆ. ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಬೇಕೆಂದು ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದಾರೆ.