ಗೋಣಿಕೊಪ್ಪಲು, ಜು. 17: ಗೋಣಿಕೊಪ್ಪ ನಗರದ ಕೆಲವು ಭಾಗಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟ ಹಿನ್ನೆಲೆ ಅಂತಹ ವಲಯಗಳನ್ನು ಜಿಲ್ಲಾಡಳಿತದ ಸೂಚನೆ ಮೇರೆಗೆ ತಾಲೂಕು ಆಡಳಿತವು ಕಂಟೈನ್ಮೆಂಟ್ ವಲಯಗಳನ್ನಾಗಿ ಮಾರ್ಪಡಿಸಿ ಜನರು ಯಾರು ಕೂಡ ಹೊರಬಾರ ದಂತೆ ಸೂಚನೆ ನೀಡಿದ್ದರು.
ಜಿಲ್ಲಾಡಳಿತದ ಸೂಚನೆಯನ್ನು ಪಾಲಿಸದ ಕಂಟೈನ್ಮೆಂಟ್ ವಲಯದ ಕೆಲವು ಮಂದಿ ರಾಜಾರೋಷವಾಗಿ ಮನೆಯಿಂದ ಹೊರ ಬರುವುದು, ಸಮೀಪದ ಅಂಗಡಿಗೆ ತೆರಳುವುದು ತೆರೆಮರೆಯಲ್ಲಿ ನಡೆಯುತಿತ್ತು. ಇದನ್ನು ಗಮನಿಸಿದ ಪೊನ್ನಂಪೇಟೆ ಗಿರಿಜನ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಹಾಗೂ ಕೋವಿಡ್-19ನ ನೋಡಲ್ ಅಧಿಕಾರಿ ಗುರುಶಾಂತಪ್ಪ ಶುಕ್ರವಾರ ಮುಂಜಾನೆ ಮಳೆಯನ್ನು ಲೆಕ್ಕಿಸದೆ ಕಂಟೈನ್ಮೆಂಟ್ ವಲಯಗಳಲ್ಲಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ನಿರ್ಭಂದಿತ ವಲಯದಿಂದ ಕೆಲವು ನಾಗರಿಕರು ಹೊರ ಹೋಗುವುದನ್ನು ಪತ್ತೆ ಹಚ್ಚಿದರು. ಕೂಡಲೇ ಸ್ಥಳದಿಂದ ಪೊಲೀಸ್ ವೃತ್ತ ನಿರೀಕ್ಷಕ ರಾಮರೆಡ್ಡಿ ಹಾಗೂ ಪಂಚಾಯಿತಿ ಪಿಡಿಒ ಶ್ರೀನಿವಾಸ್ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕೂಡಲೇ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ನಾಗರಿಕರು ಸರ್ಕಾರದ ನಿಯಮವನ್ನು ಮೀರಿ ಹೊರ ಬರುವ ಪ್ರಯತ್ನ ನಡೆಸಿದರೆ ಕಾನೂನಿನ ಪ್ರಕಾರ ಕೇಸ್ ದಾಖಲಿಸಲಾಗುವುದೆಂದು ಎಚ್ಚರಿಸಿದರು. ಮನೆಯಿಂದ ಹೊರ ಬಂದವರನ್ನು ವಾಪಸ್ಸು ಕಳುಹಿಸಿದರು. ನಗರದ 5 ವಿಭಾಗದ ಹರಿಶ್ಚಂದ್ರಪುರದ ಒಂದು ಭಾಗ ಹಾಗೂ ಅಚ್ಚಪ್ಪ ಬಡಾವಣೆಯ ಒಂದು ಭಾಗದ ವಲಯವನ್ನು ಕಂಟೈನ್ಮೆಂಟ್ ವಲಯಗಳನ್ನಾಗಿ ಈ ಹಿಂದೆ ಘೋಷಣೆ ಮಾಡಲಾಗಿತ್ತು. ಆದರೆ ಈ ಭಾಗದ ಜನತೆ ಯಾರ ಗಮನಕ್ಕೂ ಬಾರದ ರೀತಿಯಲ್ಲಿ ಮುಂಜಾನೆ ಹಾಗೂ ರಾತ್ರಿಯ ವೇಳೆಯಲ್ಲಿ ಸಂಚಾರ ನಡೆಸುತ್ತಿದ್ದಾರೆಂದು ನಾಗರಿಕರು ದೂರು ನೀಡಿದ್ದರು.
ಗೋಣಿಕೊಪ್ಪಲು ಗ್ರಾಮ ಪಂಚಾಯಿತಿಯ ಪಿಡಿಒ ಶ್ರೀನಿವಾಸ್ ಕಂಟೈನ್ಮೆಂಟ್ ವಲಯಗಳಲ್ಲಿ ಪಂಚಾಯಿತಿ ಸಿಬ್ಬಂದಿಗಳಿಂದ ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಿ ಯಾರು ಕೂಡ ಮನೆಯಿಂದ ಹೊರ ಬರುವ ಪ್ರಯತ್ನ ಮಾಡಬಾರದು ಎಂದು ಪ್ರಚಾರ ನಡೆಸಿ ತಿಳಿಹೇಳಿದರು. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.