ಸಿದ್ದಾಪುರ, ಜು. 17: ವೀರಾಜಪೇಟೆ ತಾಲೂಕಿನ ಸಿದ್ದಾಪುರದಲ್ಲಿ ಪತ್ತೆಯಾಗಿರುವ ಕೊರೊನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಇದುವರೆಗೂ ಯಾವುದೇ ಪ್ರಕರಣ ವರದಿಯಾಗದ ಸಿದ್ದಾಪುರದಲ್ಲಿ ಮಂಗಳವಾರ ಒಂದೇ ದಿನ ನಾಲ್ಕು ಪ್ರಕರಣಗಳು ವರದಿಯಾಗಿದೆ. ಈ ಪೈಕಿ ಎರಡು ಪ್ರಕರಣಗಳ ಬಗ್ಗೆ ಸೋಂಕಿತರ ಸಂಬಂಧಿಕರು ಹಾಗೂ ಸಾರ್ವಜನಿಕರು ಸಂಶಯವನ್ನು ವ್ಯಕ್ತಪಡಿಸಿದ್ದಾರೆ.
ಪ್ರಕರಣ 1: ಸಿದ್ದಾಪುರ ಪಟ್ಟಣದ ಪ್ರಮುಖ ಬಟ್ಟೆ ಅಂಗಡಿಯ ಮಾಲೀಕರು ಜೂನ್ 22 ರಂದು ಹೊರ ರಾಜ್ಯದಿಂದ ಸಿದ್ದಾಪುರಕ್ಕೆ ಬಂದಿದ್ದು, 14 ದಿನಗಳ ಕಾಲ ಮನೆ ಸಂಪರ್ಕ ತಡೆಯಲ್ಲಿದ್ದರು. ಪ್ರತಿ ದಿನ ಕಂದಾಯ ಇಲಾಖೆಯ ಸಿಬ್ಬಂದಿಗಳು ಮನೆಗೆ ಬಂದು ಪರಿಶೀಲನೆ ನಡೆಸುತ್ತಿದ್ದರು. ಜೊತೆಗೆ ಆಶಾ ಕಾರ್ಯಕರ್ತರು ಕೂಡಾ ಭೇಟಿ ನೀಡುತ್ತಿದ್ದರು.
14 ದಿನಗಳ ಕ್ವಾರಂಟೈನ್ ಬಳಿಕ ಯಾವುದೇ ರೋಗ ಲಕ್ಷಣಗಳು ಕಂಡುಬಾರದ ಹಿನ್ನೆಲೆ ಮನೆಯಿಂದ ಹೊರ ಬರುವುದಕ್ಕೆ ಯಾವುದೇ ತೊಡಕು ಇಲ್ಲವೆಂದು ಸಿಬ್ಬಂದಿಗಳು ತಿಳಿಸಿದ ಮೇರೆಗೆ ಇವರು ಜುಲೈ 6 ರಂದು ಸಿದ್ದಾಪುರ ಬಸ್ ನಿಲ್ದಾಣದಲ್ಲಿರುವ ತಮ್ಮ ಅಂಗಡಿಗೆ ತೆರಳಿದ್ದಾರೆ. ಎರಡು ದಿನಗಳ ನಂತರ ಮೊಬೈಲ್ ಕರೆ ಮಾಡಿದ ಆರೋಗ್ಯ ಇಲಾಖೆಯವರು ತಕ್ಷಣ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ತಿಳಿಸಿದ ಮೇರೆಗೆ ಇವರು ಕೋವಿಡ್ ಪರೀಕ್ಷೆಗೆ ಮುಂದಾಗಿದ್ದರು.
ಬಳಿಕ ಪ್ರತಿದಿನ ಬಟ್ಟೆ ಅಂಗಡಿಗೆ ಬಂದು ವ್ಯಾಪಾರದಲ್ಲಿ ತೊಡಗಿಕೊಂಡಿದ್ದರು. ಜುಲೈ 13 ರ ರಾತ್ರಿ ಇವರಿಗೆ ಸೋಂಕು ದೃಢಪಟ್ಟಿರುವ ಬಗ್ಗೆ ಆರೋಗ್ಯ ಇಲಾಖೆ ಮೊಬೈಲ್ ಕರೆ ಮೂಲಕ ಮಾಹಿತಿ ನೀಡಿದ್ದಾರೆ. ಈ ನಡುವೆ ಸೋಂಕಿತ ವ್ಯಕ್ತಿ ಸರಕಾರಿ ಕಚೇರಿ, ಜನಜಂಗುಳಿ ಪ್ರದೇಶಗಳು ಸೇರಿದಂತೆ ಹಲವೆಡೆ ಭೇಟಿ ನೀಡಿದ್ದಾರೆ. ಅಲ್ಲದೆ ಈತನ ಅಂಗಡಿಗೆ ಪ್ರತಿದಿನ ಬಟ್ಟೆ ಖರೀದಿಗಾಗಿ ಹಲವಾರು ಮಂದಿ ಬಂದು ಹೋಗಿದ್ದಾರೆ.
ಪ್ರಕರಣ 2: ಹೊರ ರಾಜ್ಯದಿಂದ ಜೂನ್ 24 ರಂದು ಸಿದ್ದಾಪುರಕ್ಕೆ ಮರಳಿದ ತಾಯಿ ಮತ್ತು ಇಬ್ಬರು ಮಕ್ಕಳು 14 ದಿನಗಳ ಕಾಲ ಮನೆ ಸಂಪರ್ಕದಲ್ಲಿದ್ದ ನಂತರ ಕ್ವಾರಂಟೈನ್ ಅವಧಿ ಮುಗಿದಿರುವುದರಿಂದ ಮನೆಯಿಂದ ಹೊರ ಬರಲು ಸಮಸ್ಯೆ ಇಲ್ಲವೆಂದು ಕಂದಾಯ ಇಲಾಖೆಯ ಸಿಬ್ಬಂದಿಗಳು ಸೂಚಿಸಿದ ಮೇರೆಗೆ ಈ ಕುಟುಂಬ ಮನೆಯಿಂದ ಹೊರ ಬಂದಿದ್ದರು.
ಬಳಿಕ ಕುಟುಂಬದ ಮೂರು ಮಂದಿಗೂ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ಆರೋಗ್ಯ ಇಲಾಖೆ ತಿಳಿಸಿದ ಮೇರೆಗೆ ಮೂರು ಮಂದಿಯೂ ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು. ಬಳಿಕ ಜುಲೈ 14 ರಂದು ಕುಟುಂಬದ ಪೈಕಿ ಮಹಿಳೆಗೆ ಸೋಂಕು ತಗುಲಿರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದಾರೆ. ಫಲಿತಾಂಶದ ಒಂದು ದಿನದ ಹಿಂದೆ ಸೋಂಕಿತ ಮಹಿಳೆ ಸಿದ್ದಾಪುರದಲ್ಲಿ ಮರಣ ಹೊಂದಿದ್ದ ವ್ಯಕ್ತಿಯ ಮನೆಗೆ ತೆರಳಿ ಅಂತಿಮ ದರ್ಶನ ಪಡೆದಿದ್ದಾರೆ.
ಈ ಎರಡೂ ಪ್ರಕರಣಗಳಲ್ಲಿ ಆರೋಗ್ಯ ಇಲಾಖೆಯ ಕಾರ್ಯದ ಬಗ್ಗೆ ಜನ ಅಸಮಾಧಾನಗೊಂಡಿದ್ದಾರೆ. ಮನೆ ಸಂಪರ್ಕ ತಡೆಯಲ್ಲಿದ್ದ ಸಂದರ್ಭದಲ್ಲಿ ಇವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸದೆ ಕ್ವಾರಂಟೈನ್ ಅವಧಿ ಮುಗಿದ ನಂತರ ಮನೆಯಿಂದ ಹೊರ ಬರಲು ಅವಕಾಶ ಮಾಡಿಕೊಟ್ಟ ನಂತರ ಕೋವಿಡ್ ಪರೀಕ್ಷೆಗೆ ಹಾಜರಾಗುವಂತೆ ಆದೇಶ ಮಾಡಿದವರು ಇವರನ್ನು ಕ್ವಾರಂಟೈನ್ ಸಮಯದಲ್ಲಿ ಯಾಕೆ ಪರೀಕ್ಷೆ ನಡೆಸುವಂತೆ ಸೂಚಿಸಲಿಲ್ಲ? ಮನೆಯಿಂದ ಹೊರ ಬಂದ ನಂತರ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ಪರೀಕ್ಷೆಗೆ ಒಳಪಡಿಸಲು ಕಾರಣ ಏನು? ಸಂಶಯದ ಮೇರೆಗೆ ಪರೀಕ್ಷೆಗೆ ಒಳಪಡಿಸಿದ್ದೆ ಆಗಿದ್ದಲ್ಲಿ ಕೋವಿಡ್ ಪರೀಕ್ಷೆ ನಡೆಸಿದ ನಂತರವಾದರೂ ಇವರಿಗೆ ಮನೆಯಲ್ಲೇ ಇರುವಂತೆ ಯಾಕೆ ಸೂಚಿಸಲಿಲ್ಲ? ವಿದೇಶ, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯ ಪ್ರಯಾಣದ ಇತಿಹಾಸವಿರುವ ಬಹಳಷ್ಟು ಜನರು ಕ್ವಾರಂಟೈನ್ ಅವಧಿ ಮುಗಿದು ಸಾರ್ವಜನಿಕವಾಗಿ ಓಡಾಡುತ್ತಿದ್ದರೂ ಇಂತವರನ್ನು ಯಾಕೆ ಕೋವಿಡ್ ಪರೀಕ್ಷೆಗೆ ಒಳಪಡಿಸುತ್ತಿಲ್ಲ? ಆರೋಗ್ಯ ಇಲಾಖೆಯ ನಿಧಾನ ನಿರ್ಧಾರದಿಂದಾಗಿ ಸಿದ್ದಾಪುರ ಸುತ್ತಮುತ್ತಲಿನ ಜನರು ಆತಂಕದಲ್ಲಿದ್ದಾರೆ.
-ಮುಸ್ತಫ, ಸಿದ್ದಾಪುರ