ಸೋಮವಾರಪೇಟೆ, ಜು. 17: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ರಸ್ತೆಯಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಹಕರಿಗೆ ಅನ್ಯಾಯವಾಗುತ್ತಿದ್ದು, ತೂಕ ಮತ್ತು ಅಳತೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಗ್ರಾಹಕರು, ತಾಲೂಕು ತಹಶೀಲ್ದಾರರಿಗೆ ದೂರು ಸಲ್ಲಿಸಿದರು.

ಕೊರೊನಾ ಸೋಂಕು ವ್ಯಾಪಿಸುತ್ತಿರುವ ಸಂದರ್ಭದಲ್ಲೂ ಕಾರ್ಡ್‍ದಾರರಿಂದ ಹೆಚ್ಚುವರಿ 20 ರೂ.ಗಳನ್ನು ವಸೂಲಿ ಮಾಡಲಾಗುತ್ತಿದೆ. ಅಂಗಡಿಯಿರುವ ಮಳಿಗೆ ಸೋರುತ್ತಿದ್ದು, ಅಕ್ಕಿಯನ್ನು ನೆಲಕ್ಕೆ ಸುರಿದು, ನಂತರ ಕಸಕಡ್ಡಿ ಸಹಿತ ತೂಕ ಮಾಡಿ ಗ್ರಾಹಕರಿಗೆ ವಿತರಿಸಲಾಗುತ್ತಿದೆ ಎಂದು ಆರೋಪಿಸಿದರು.

ಹೆಚ್ಚುವರಿ ಹಣ ವಸೂಲಾತಿ ಮತ್ತು ಕಸಕಡ್ಡಿ ಮಿಶ್ರಿತ ಅಕ್ಕಿ ನೀಡುತ್ತಿರುವ ಬಗ್ಗೆ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿಯನ್ನು ಪ್ರಶ್ನಿಸಿದರೆ, ನಿಮ್ಮ ಕಾರ್ಡ್ ರದ್ದುಪಡಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳ ಮಾತಿಗೂ ಬೆಲೆ ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಬೆಲೆ ಅಂಗಡಿಯ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ, ಸಿಬ್ಬಂದಿಯ ವಿಚಾರಣೆ ನಡೆಸಿ ಕ್ರಮಕೈಗೊಳ್ಳುವಂತೆ ಆಹಾರ ನಿರೀಕ್ಷಕ ಮಂಜುನಾಥ್ ಅವರಿಗೆ ತಹಶೀಲ್ದಾರ್ ಸೂಚಿಸಿದರು. ಸ್ಥಳೀಯರಾದ ಸಂತೋಷ್, ಯೋಗೇಶ್, ಓಹಿಲೇಶ್, ಜಯಂತ್, ಶೇಖರ್ ಸೇರಿದಂತೆ ಇತರರು ಈ ಸಂದರ್ಭ ಉಪಸ್ಥಿತರಿದ್ದರು.