ಸೋಮವಾರಪೇಟೆ, ಜು. 17: ಜಿಲ್ಲೆಯಲ್ಲಿ ಮಳೆ ಬಿರುಸುಗೊಳ್ಳುತ್ತಿದ್ದು, ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಅಧಿಕಗೊಳ್ಳುತ್ತಿರುವದರಿಂದ ನದಿ ತೀರದಲ್ಲಿ ವಾಸವಿರುವ ನಿವಾಸಿಗಳನ್ನು ತಕ್ಷಣ ಸ್ಥಳಾಂತರಿಸಲು ಕ್ರಮ ವಹಿಸುವಂತೆ ನಿರ್ಣಯ ಅಂಗೀಕರಿಸಿ, ಜಿಲ್ಲಾಡಳಿತದ ಗಮನ ಸೆಳೆಯಲು ತಾ.ಪಂ. ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.ತಾ.ಪಂ. ಅಧ್ಯಕ್ಷೆ ಪುಷ್ಪಾ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ತಾಲೂಕಿನ ನೆಲ್ಲಿಹುದಿಕೇರಿ ಸೇರಿದಂತೆ ಇತರ ಪ್ರದೇಶದಲ್ಲಿ ನದಿ ಪಾತ್ರದಲ್ಲೇ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಇವರುಗಳಲ್ಲಿ ಹಲವಷ್ಟು ಮಂದಿಗೆ ಬದಲಿ ವ್ಯವಸ್ಥೆ ಕಲ್ಪಿಸಿದ್ದರೂ ಪುನರ್ವಸತಿ ಕೇಂದ್ರಕ್ಕೆ ತೆರಳದೇ ಮತ್ತದೇ ಸ್ಥಳದಲ್ಲಿ ವಾಸ ಮಾಡುತ್ತಿರುವ ಬಗ್ಗೆ ಚರ್ಚೆ ನಡೆಯಿತು.

ನದಿ ಪಾತ್ರದಲ್ಲಿ ದಂಧೆ: ಕಾವೇರಿ ನದಿ ಪಾತ್ರದಲ್ಲಿರುವ ಕೆಲವರು ಪುನರ್ವಸತಿ ಕೇಂದ್ರಕ್ಕೆ ತೆರಳುತ್ತಿಲ್ಲ. ನದಿಯ ಸಮೀಪದಲ್ಲೇ ಹೋಂ ಸ್ಟೇ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಅಕ್ರಮ ಮರಳು ದಂಧೆ, ಮರ ಸಾಗಾಟ, ಪ್ರಾಣಿಗಳ ಮಾಂಸ-ಚರ್ಮ ಸಾಗಾಟಕ್ಕೆ ನದಿಯನ್ನು ಬಳಸಿ ಕೊಳ್ಳುತ್ತಿದ್ದು, ಯಾವದೇ ಕಾರಣಕ್ಕೂ ಇಲ್ಲಿಂದ ಕದಲುತ್ತಿಲ್ಲ. ಈ ಹಿನ್ನೆಲೆ ಜಿಲ್ಲಾಡಳಿತ ತಕ್ಷಣ ಕ್ರಮ ವಹಿಸಬೇಕು ಎಂದು ಆಗ್ರಹಿಸಿ, ಪತ್ರ ಬರೆಯಲು ತೀರ್ಮಾನಿಸಲಾಯಿತು.

ನದಿ ಪಾತ್ರದಲ್ಲಿ ವಾಸಿಸುತ್ತಿರುವ ಮಂದಿಗೆ ಎಚ್ಚರಿಕೆ ನೀಡಿದರೂ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆ ಮತ್ತೊಮ್ಮೆ ಪ್ರವಾಹ ಬಂದು ಸಂತ್ರಸ್ತರಾದರೆ ಸ್ಥಳೀಯರೇ ಹೊಣೆಯಾಗುತ್ತಾರೆ. ಇಂತಹವರಿಗೆ ಸರ್ಕಾರದಿಂದ ಯಾವದೇ ಸೌಲಭ್ಯ ನೀಡದಂತೆ ಜಿಲ್ಲಾಡಳಿತ ಕ್ರಮ ವಹಿಸಬೇಕೆಂದು ಸಭೆಯಲ್ಲಿ ಅಭಿಪ್ರಾಯ ಕೇಳಿಬಂತು.

ಇದರೊಂದಿಗೆ ತಾಲೂಕಿನಾ ದ್ಯಂತ ಹಲವಷ್ಟು ಕಡೆಗಳಲ್ಲಿ ನದಿಗಳ ಪಕ್ಕದಲ್ಲೇ ಮನೆ, ಕಟ್ಟಡ ನಿರ್ಮಿಸಿಕೊಂಡಿದ್ದು, ಇಂತಹ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿಗಳ ಗಮನ ಸೆಳೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೋವಿಡ್ ಜಟಾಪಟಿ: ಸಭೆಯ ಪ್ರಾರಂಭದಲ್ಲೇ ಕೋವಿಡ್ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸದಸ್ಯರು ಮಾಹಿತಿ ಬಯಸಿದರು. ಸೋಂಕಿತರ ಗಂಟಲ ದ್ರವವನ್ನು ತೆಗೆದ ನಂತರ 10 ದಿನಗಳ ತರುವಾಯ ವರದಿ ನೀಡುತ್ತಿದ್ದು, ಇದು ಅವೈಜ್ಞಾನಿಕ ಕ್ರಮ ಎಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಹೇಳಿದರು.

ಇದಕ್ಕೆ ಬಹುತೇಕ ಸದಸ್ಯರು ದನಿಗೂಡಿಸಿ,

(ಮೊದಲ ಪುಟದಿಂದ) ಗಂಟಲು ದ್ರವ ತೆಗೆದ ನಂತರ ಆರೋಗ್ಯ ಇಲಾಖೆಯಿಂದ ಯಾವದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುತ್ತಿಲ್ಲ. ಪರಿಣಾಮ ಗಂಟಲು ದ್ರವ ನೀಡಿದ ವ್ಯಕ್ತಿಗಳು ಸಾಮಾನ್ಯರಂತೆ ಓಡಾಡುತ್ತಿದ್ದು, ಕೆಲ ದಿನಗಳ ನಂತರ ಪಾಸಿಟಿವ್ ವರದಿಯ ಆಧಾರದ ಮೇರೆ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಈ ಮಧ್ಯೆ ಅವರುಗಳು ಸಾಕಷ್ಟು ಮಂದಿಯ ಸಂಪರ್ಕ ಸಾಧಿಸುತ್ತಿದ್ದು, ಪರೋಕ್ಷವಾಗಿ ಆರೋಗ್ಯ ಇಲಾಖೆಯೇ ಕೋವಿಡ್ ಹೆಚ್ಚಲು ಕಾರಣವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್, ಉನ್ನತ ಮಟ್ಟದ ಸಮಿತಿಯ ಮಾರ್ಗದರ್ಶನದಂತೆ ಕೆಲಸ ನಿರ್ವಹಿಸಲಾಗುತ್ತಿದೆ. ಆರೋಗ್ಯ ಇಲಾಖಾ ಸಿಬ್ಬಂದಿಗಳು ಕಳೆದ 3 ತಿಂಗಳಿನಿಂದ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದಾರೆ. ನಾವುಗಳು 3 ತಿಂಗಳಿನಿಂದ ಮನೆಗೆ ಹೋಗಿಲ್ಲ. ಆದ್ರೂ ಆರೋಗ್ಯ ಇಲಾಖೆ ಏನ್ ಮಾಡ್ತಿದೆ? ಎಂದು ಪ್ರಶ್ನಿಸುತ್ತೀರಾ? ಎಂದು ಸದಸ್ಯರುಗಳ ವಿರುದ್ಧ ಗರಂ ಆದರು.

ಈ ಸಂದರ್ಭ ತಾ.ಪಂ. ಸದಸ್ಯರು ಅಧಿಕಾರಿಯ ವಿರುದ್ಧ ಮುಗಿಬಿದ್ದರು. ಜನರಲ್ಲಿ ಮೂಡುವ ಗೊಂದಲ ನಿವಾರಿಸುವ ಬದಲು ಸಭೆಯಲ್ಲಿ ಉಡಾಫೆಯ ಉತ್ತರ ನೀಡುತ್ತೀರಾ ಎಂದು ಸದಸ್ಯರುಗಳಾದ ಸತೀಶ್, ಅನಂತ್‍ಕುಮಾರ್ ಸೇರಿದಂತೆ ಇತರರು ತರಾಟೆಗೆ ತೆಗೆದುಕೊಂಡರು. ಇದೇ ವಿಷಯದ ಬಗ್ಗೆ ಅರ್ಧ ಗಂಟೆಗೂ ಅಧಿಕ ಕಾಲ ಚರ್ಚೆ ನಡೆಯಿತೇ ಹೊರತು ಅಂತಿಮವಾಗಿ ಗೊಂದಲಗಳಿಗೆ ಪರಿಹಾರ ಕಾಣಲಿಲ್ಲ.

ಕೊಡಗಿನಲ್ಲಿ ಮೂರು ತಿಂಗಳ ಕಾಲ ಲಾಕ್‍ಡೌನ್ ಮಾಡಿದ್ದಿದ್ದರೆ ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಹರಡುತ್ತಿರಲಿಲ್ಲ. ಪ್ರವಾಸೋದ್ಯಮವನ್ನು ನಿರ್ಬಂಧಿಸದೇ ಇದ್ದುದು ಇಷ್ಟಕ್ಕೆಲ್ಲಾ ಕಾರಣ ಎಂದು ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅಭಿಪ್ರಾಯಿಸಿದರು.

ಕೇರ್ ಸೆಂಟರ್ ಇಲ್ಲ: ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವ ಬಗ್ಗೆ ಸಾರ್ವಜನಿಕ ವಲಯಲ್ಲಿ ಚರ್ಚೆಯಾಗುತ್ತಿದ್ದು, ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ ಹೃದಯ ಭಾಗದಲ್ಲಿರುವ ಆಸ್ಪತ್ರೆಯಲ್ಲಿ ಕೇರ್ ಸೆಂಟರ್ ತೆರೆಯಬಾರದು ಎಂದು ಅಭಿಮನ್ಯುಕುಮಾರ್ ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ್, ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯುವ ಪ್ರಸ್ತಾಪ ಇಲ್ಲ. ಅಗತ್ಯ ಬಿದ್ದಲ್ಲಿ ಹೊರ ವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗುವದು ಎಂದರು.

ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಲ್ಯಾಬ್‍ನ್ನು ಉದ್ದೇಶಪೂರ್ವಕವಾಗಿ ಬಂದ್ ಮಾಡಿ, ಖಾಸಗಿ ಲ್ಯಾಬ್‍ಗಳಿಗೆ ಕಳುಹಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಗಮನ ಹರಿಸುವಂತೆ ಸಭೆಯಲ್ಲಿ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಯಿತು. ಶವಾಗಾರದ ಆವರಣ ಅಶುಚಿತ್ವದಿಂದ ಕೂಡಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಪ್ರದೇಶದಲ್ಲಿ ಶುಚಿತ್ವ ಕಾರ್ಯ ಕೈಗೊಳ್ಳುವಂತೆ ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ ತಿಳಿಸಿದರು.

144 ಸೆಕ್ಷನ್ ಹಾಕಿ: ಸೋಮವಾರಪೇಟೆಯಲ್ಲಿ ಸಂತೆಯನ್ನು ರದ್ದುಗೊಳಿಸಿದ್ದರೂ ಸೋಮವಾರದಂದು ರಸ್ತೆ ಬದಿಯಲ್ಲಿ, ಚರಂಡಿಯ ಮೇಲೆ, ಅನೈರ್ಮಲ್ಯ ಸ್ಥಳಗಳಲ್ಲಿ ತರಕಾರಿ, ದಿನಸಿ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಪ.ಪಂ. ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಉಪಾಧ್ಯಕ್ಷ ಅಭಿಮನ್ಯುಕುಮಾರ್ ದೂರಿದರು.

ಇದರೊಂದಿಗೆ ಸೋಮವಾರದಂದು ಅನಗತ್ಯವಾಗಿ ವಾಹನಗಳ ಓಡಾಟವಿದ್ದು, ಸಂಚಾರ ದಟ್ಟಣೆ ಅಧಿಕವಾಗುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ವಹಿಸಬೇಕೆಂದು ಸಭೆಯಲ್ಲಿ ಉಪಸ್ಥಿತರಿದ್ದ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರಿಗೆ ತಿಳಿಸಲಾಯಿತು.

ಸೋಮವಾರದಂದು ಜನದಟ್ಟಣೆ ಅಧಿಕವಾಗುವದನ್ನು ತಪ್ಪಿಸಲು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೋಮವಾರಪೇಟೆಯಲ್ಲಿ 144 ಸೆಕ್ಷನ್ ಹೇರಲು ಕ್ರಮ ವಹಿಸುವಂತೆ ವೃತ್ತ ನಿರೀಕ್ಷಕರು, ತಾ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಲಾಯಿತು. ಇದರೊಂದಿಗೆ ಬೀದಿ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದಂತೆ ಪ.ಪಂ. ಅಧಿಕಾರಿಗಳಿಗೆ ಸೂಚಿಸಲಾಯಿತು.

ಪಟ್ಟಣದಲ್ಲಿ ಸ್ಥಗಿತಗೊಂಡಿರುವ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ ಎಂದು ಸದಸ್ಯ ಬಿ.ಬಿ. ಸತೀಶ್ ಒತ್ತಾಯಿಸಿದರೆ, ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರ ಮಾಹಿತಿ ನೀಡುವಂತೆ ಅಭಿಮನ್ಯುಕುಮಾರ್ ಸೂಚಿಸಿದರು.

ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯ: ಪಟ್ಟಣದ ಬಸವೇಶ್ವರ ರಸ್ತೆಯ ಬಾಣಾವರ ರಸ್ತೆ ಜಂಕ್ಷನ್‍ನಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಹಕರಿಗೆ ಅನ್ಯಾಯವಾಗುತ್ತಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್‍ಕುಮಾರ್ ಅವರಿಗೆ ಸೂಚಿಸಲಾಯಿತು.

ಕೊಡಗು ಜಿಲ್ಲೆಯ ಲ್ಯಾಂಪ್ ಸೊಸೈಟಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದರೂ ತಾ.ಪಂ.ನಿಂದ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದ ಮಣಿ ಉತ್ತಪ್ಪ ಅವರು, ಈ ಬಗ್ಗೆ ಸಮಗ್ರ ತನಿಖೆಗೆ ಆಗ್ರಹಿಸಿದರು.

ಉಳಿದಂತೆ ವಿವಿಧ ಇಲಾಖಾಧಿಕಾರಿಗಳು ತಮ್ಮ ಇಲಾಖಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು.