ಲಡಾಖ್‍ಗೆ ರಕ್ಷಣಾ ಸಚಿವರ ಭೇಟಿ

ನವದೆಹಲಿ, ಜು. 17: ಭಾರತವು ಪೂರ್ವ ಲಡಾಕ್ ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಗೌರವಿಸುತ್ತದೆ ಎಂದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿಶ್ವದ ಯಾವುದೇ ಶಕ್ತಿಯು ಭಾರತದ ಭೂ ಪ್ರದೇಶವನ್ನು ಮುಟ್ಟಲಾಗುವುದಿಲ್ಲ ಎಂದು ರಾಷ್ಟ್ರಕ್ಕೆ ಭರವಸೆ ನೀಡಿದ್ದಾರೆ. ಲಡಾಖ್ ಮತ್ತು ಶ್ರೀನಗರಕ್ಕೆ 2 ದಿನಗಳ ಭೇಟಿಯಲ್ಲಿರುವ ಸಚಿವರು ಇಂದು ಲೇಹ್‍ಗೆ ಆಗಮಿಸಿದ್ದು, ಟಿ-90 ಟ್ಯಾಂಕ್‍ಗಳು ಮತ್ತು ಯುದ್ಧ ವಾಹನಗಳ ವ್ಯಾಯಾಮ, ಕಸರತ್ತನ್ನು ಲೇಹ್‍ನ ಸ್ಟಕ್ನಾದಲ್ಲಿ ವೀಕ್ಷಿಸಿದರು. ಲುಕುಂಗ್ ಫಾರ್ವರ್ಡ್ ಬೇಸ್‍ನಲ್ಲಿರುವ ಭಾರತೀಯ ಸೇನೆ, ಭಾರತೀಯ ವಾಯುಪಡೆ ಮತ್ತು ಐಟಿಬಿಪಿಯ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ಗಡಿ ವಿವಾದವನ್ನು ಬಗೆಹರಿಸಲು ಮಾತುಕತೆ ನಡೆಯುತ್ತಿದೆ ಆದರೆ ಅದನ್ನು ಎಷ್ಟರ ಮಟ್ಟಿಗೆ ಪರಿಹರಿಸಬಹುದೆಂದು ನಾನು ಖಾತರಿಪಡಿಸುವುದಿಲ್ಲ. ನಾನು ನಿಮಗೆ ಭರವಸೆ ನೀಡಬಲ್ಲೆ, ನಮ್ಮ ಭೂಮಿಯ ಒಂದು ಇಂಚು ಸಹ ಜಗತ್ತಿನ ಯಾವುದೇ ಶಕ್ತಿಯಿಂದ ಕಸಿದುಕೊಳ್ಳಲಾಗುವುದಿಲ್ಲ. ಮಾತುಕತೆಯಿಂದ ಪರಿಹಾರವನ್ನು ಕಂಡು ಹಿಡಿಯಬಹುದಾದರೆ, ಇದಕ್ಕಿಂತ ಉತ್ತಮವಾದದ್ದೇನೂ ಇಲ್ಲ ಎಂದು ಹೇಳಿದ್ದಾರೆ. ಭಾರತ ಮತ್ತು ಚೀನಾದ ಸೈನಿಕರ ನಡುವಿನ ಗಲ್ವಾನ್ ಕಣಿವೆಯ ಘರ್ಷಣೆಯ ಕುರಿತು ಪ್ರಸ್ತಾಪಿಸಿದ ರಾಜನಾಥ್ ಸಿಂಗ್, ಹುತಾತ್ಮ ಸೈನಿಕರಿಗೆ ಗೌರವ ಸಲ್ಲಿಸಿದರು.

ಮೊಬೈಲ್ ಟೆಸ್ಟಿಂಗ್ ವ್ಯವಸ್ಥೆ ಆರಂಭ

ಬೆಂಗಳೂರು, ಜು. 17: ಬೆಂಗಳೂರು ನಗರದಲ್ಲಿ ಲಾಕ್‍ಡೌನ್ ಘೋಷಣೆಯಾಗಿರುವುದರಿಂದ ಹಿರಿಯ ನಾಗರಿಕರು, ಮಕ್ಕಳೂ ಮತ್ತು ಸೋಂಕಿನ ಲಕ್ಷಣವುಳ್ಳವರಿಗೆ ತಪಾಸಣೆಗಾಗಿ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸಲು ಆರೋಗ್ಯ ಇಲಾಖೆ ಮೊಬೈಲ್ ಟೆಸ್ಟಿಂಗ್ ಯೋಜನೆ ಆರಂಭಿಸಿದೆ. ಜೊತೆಗೆ, ಗಂಟಲು ದ್ರವ (ಸ್ವ್ಯಾಬ್) ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಯಾವುದೇ ವ್ಯಕ್ತಿ ಫಲಿತಾಂಶ ಲಭ್ಯವಾಗುವವರೆಗೆ ಮನೆಯಲ್ಲೇ ಪ್ರತ್ಯೇಕತೆ ಕಾಯ್ದುಕೊಳ್ಳಬೇಕು. ಈ ನಿಯಮ ಉಲ್ಲಂಘಿಸಿದರೆ ಅವರಿಗೆ ಸಾಂಕ್ರಾಮಿಕ ರೋಗ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

ಕೋವಿಡ್ ಲಸಿಕೆ ಪ್ರಯೋಗ ಆರಂಭ

ನವದೆಹಲಿ, ಜು. 17: ಭಾರತ್ ಬಯೋಟಿಕ್ ಕಂಡುಹಿಡಿದಿರುವ ಕೋವಿಡ್-19 ಲಸಿಕೆ “ಕೋವಾಕ್ಸಿನ್”ನ ಮಾನವ ಪ್ರಯೋಗವನ್ನು ರೊಹ್ಟಕ್‍ನ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಇಂದು ಪ್ರಾರಂಭಿಸಲಾಯಿತು ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿ.ಜಿ. ಟ್ವೀಟ್ ಮಾಡಿದ್ದಾರೆ. ಮೂರು ವಿಷಯಗಳು ಇಂದು ದಾಖಲಾಗಿವೆ. ಲಸಿಕೆ ಅತ್ಯುತ್ತಮವಾಗಿದ್ದು ಎಲ್ಲರೂ ಸಹಿಸಿಕೊಂಡಿದ್ದಾರೆ. ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ ಎಂದು ಹರಿಯಾಣ ಗೃಹ ಮತ್ತು ವಿಜ್ಞಾನ, ತಂತ್ರಜ್ಞಾನ ಸಚಿವರೂ ಆಗಿರುವ ಅನಿಲ್ ವಿಜಿ ತಿಳಿಸಿದ್ದಾರೆ. ಕೊರೊನಾ ಲಸಿಕೆ ಕೋವಾಕ್ಸಿನ್‍ನ ಕ್ಲಿನಿಕಲ್ ಪ್ರಯೋಗ ಆರಂಭಕ್ಕೆ ಇತ್ತೀಚಿಗೆ ದೇಶದ ಔಷಧ ನಿಯಂತ್ರಕರಿಂದ ಭಾರತ್ ಬಯೋಟೆಕ್ ಅನುಮೋದನೆ ಪಡೆದುಕೊಂಡಿತ್ತು.

ಲಾಕ್‍ಡೌನ್ ವಿಸ್ತರಣೆ ಇಲ್ಲ

ಬೆಂಗಳೂರು ಜು.17 : ಲಾಕ್‍ಡೌನ್ ವಿಸ್ತರಣೆ ಬಗ್ಗೆ ಚರ್ಚೆ ಸಾಕು. ಕೊರೊನಾ ನಿಯಂತ್ರಣಕ್ಕೆ ಲಾಕ್‍ಡೌನ್ ಪರಿಹಾರವಲ್ಲ, ಬೇರೆ ಮಾರ್ಗಗಳ ಬಗ್ಗೆ ಆಲೋಚಿಸಿ ಎಂದು ನಗರದ ವಲಯ ಉಸ್ತುವಾರಿಗಳಿಗೆ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲಹೆ ನೀಡಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರು, ಬೆಂಗಳೂರು ಲಾಕ್‍ಡೌನ್ ಕುರಿತ ಸ್ಥಿತಿಗತಿ ಚರ್ಚೆ ವೇಳೆ ಬಹುತೇಕ ಸಚಿವರು ಲಾಕ್‍ಡೌನ್ ವಿಸ್ತರಣೆ ಬಗ್ಗೆ ಒಲವು ವ್ಯಕ್ತಪಡಿಸಿದರು. ಒಂದು ವಾರದ ಲಾಕ್‍ಡೌನ್‍ನಿಂದ ಕೊರೊನಾ ಹರಡುವಿಕೆ ನಿಯಂತ್ರಣ ಕಷ್ಟ, ಇನ್ನಷ್ಟು ದಿನಗಳ ಕಾಲ ವಿಸ್ತರಣೆ ಅಗತ್ಯವಿದೆ ಎಂದರು. ಇದಕ್ಕೆ ಮತ್ತೆ ಕೆಲ ಸಚಿವರು ದನಿಗೂಡಿಸಿದರು. ಕೊರೊನಾ ಕೇಸ್‍ಗಳ ಸಂಖ್ಯೆ ಲಾಕ್‍ಡೌನ್ ನಂತರದ ದಿನಗಳಲ್ಲಿಯೂ ಹೆಚ್ಚಾಗುತ್ತಲೇ ಇದೆ. ಲಾಕ್‍ಡೌನ್ ಮುಗಿಯುವ ವೇಳೆಗೆ ಸಂಖ್ಯೆಯಲ್ಲಿ ಕಡಿಮೆಯಾಗಬಹುದು. ಆಗ ಲಾಕ್‍ಡೌನ್ ತೆರವು ಗೊಳಿಸಿದರೆ ಮತ್ತೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಹಾಗಾಗಿ ಲಾಕ್‍ಡೌನ್ ಮತ್ತೊಂದು ವಾರ ವಿಸ್ತರಣೆ ಮಾಡಿದರೆ ಒಳಿತು ಎನ್ನುವ ಅಭಿಪ್ರಾಯವನ್ನು ವಲಯ ಉಸ್ತುವಾರಿ ಸಚಿವರು ವ್ಯಕ್ತಪಡಿಸಿದರು ಎನ್ನಲಾಗಿದೆ.

ರೋಗ ಲಕ್ಷಣವಿಲ್ಲದವರು ಆಸ್ಪತ್ರೆಯಲ್ಲಿರಬಾರದು

ಬೆಂಗಳೂರು, ಜು. 17: ಕೋವಿಡ್-19 ರೋಗ ಲಕ್ಷಣವಿಲ್ಲದ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಇಟ್ಟುಕೊಳ್ಳುವ ಹಾಗಿಲ್ಲ, ಕೂಡಲೇ ಇಂತಹ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು, ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಲಿದ್ದಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಬೆಂಗಳೂರು ಉಸ್ತುವಾರಿಗಳ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಸಭೆ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಗ ಲಕ್ಷಣ ಇಲ್ಲದ ಕೊರೊನಾ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಅದೂ ಪ್ಯಾಕೇಜ್ ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ ಎಂಬ ವಿಷಯ ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.

ಪೆರಿಯಾರ್ ಪ್ರತಿಮೆ ವಿರೂಪ

ಕೊಯಮತ್ತೂರು, ಜು. 17: ಇಲ್ಲಿನ ಸುಂದರಪುರಂನಲ್ಲಿನ ದ್ರಾವಿಡ ಕಳಗಂ ಸ್ಥಾಪಕ ಮತ್ತು ವಿಚಾರವಾದಿ ಪೆರಿಯಾರ್ ಇ.ವಿ. ರಾಮಸ್ವಾಮಿ ಅವರ ಪ್ರತಿಮೆಗೆ ಕೇಸರಿ ಬಣ್ಣ ಬಳಿಯುವುದರ ಮೂಲಕ ಅಪವಿತ್ರ ಗೊಳಿಸಿರುವ ಹಿನ್ನೆಲೆ ಜವಳಿನಗರಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ವಾಗಿದೆ. ಇಂದು ಬೆಳಗಿನ ಜಾವ 5.30ಕ್ಕೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರತಿಮೆಗೆ ಬಳಿಯಲಾಗಿದ್ದ ಬಣ್ಣವು ಮಳೆಗೆ ಬಹುತೇಕ ತೊಳೆದುಹೋಗಿದ್ದರೂ ಉಳಿದ ಬಣ್ಣವನ್ನು ಅಳಸಿ, ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ. ಪ್ರತಿಮೆ ವಿರೂಪಗೊಳಿಸಿದ ಸುದ್ದಿ ಹರಡುತ್ತಿದ್ದಂತೆ ಪ್ರತಿಭಟನೆಗೆ ಇಳಿದ ಪೆರಿಯಾರ್ ಅನುಯಾಯಿಗಳು, ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.

ಅಮೆರಿಕದಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ

ವಾಷಿಂಗ್ಟನ್, ಜು. 17: ಅಮೇರಿಕಾದಲ್ಲಿ ಕೇವಲ ಒಂದು ದಿನದಲ್ಲಿ 77 ಸಾವಿರಕ್ಕೂ ಹೆಚ್ಚು ಹೊಸ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಪರಿಸ್ಥಿತಿ ಕೈ ಮೀರುತ್ತಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಜಾನ್ಸ್ ಹಾಪ್‍ಕಿನ್ಸ್ ವಿಶ್ವವಿದ್ಯಾಲಯವು ಶುಕ್ರವಾರ ಬಿಡುಗಡೆ ಮಾಡಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಒಂದೇ ದಿನದಲ್ಲಿ 77 ಸಾವಿರಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಹೊಸದಾಗಿ 974 ಜನರು ಸೋಂಕಿಗೆ ಬಲಿಯಾಗಿದ್ದು, ಈವರೆಗೆ ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 1 ಲಕ್ಷದ 38,201 ಕ್ಕೆ ಏರಿಕೆಯಾಗಿದೆ. ದೇಶದ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶವಾಗಿರುವ ಫ್ಲೋರಿಡಾ ರಾಜ್ಯದಲ್ಲಿ ಗುರುವಾರ ದಾಖಲೆಯ 156 ಸಾವಿನ ಪ್ರಕರಣ ದಾಖಲಾಗಿದ್ದು, 14,ಸಾವಿರ ಹೊಸ ಪ್ರಕರಣಗಳು ವರದಿಯಾಗಿದೆ.

ಅರಣ್ಯ ಜನವಸತಿ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ

ಬೆಂಗಳೂರು, ಜು. 17: ಅರಣ್ಯದೊಳಗಿನ ಹಾಗೂ ಅರಣ್ಯದಂಚಿನ ಗ್ರಾಮಗಳಲ್ಲಿ ಹಾಗೂ ಜನವಸತಿ ಪ್ರದೇಶಗಳಲ್ಲಿ ಅರಣ್ಯ ಹಕ್ಕು ಅಧಿನಿಯಮದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಅನುಮತಿ ನೀಡಲು ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. ವಿಕಾಸಸೌಧದಲ್ಲಿ ಅರಣ್ಯ ಹಕ್ಕು ಅಧಿನಿಯಮ ಅನುಷ್ಠಾನ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅರಣ್ಯ ಹಕ್ಕಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಕ್ರಮಕೈಗೊಳ್ಳಬೇಕು. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಾಕಿ ಇರುವ ಸಮುದಾಯ ಅರಣ್ಯ ಹಕ್ಕು ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.