ಮಡಿಕೇರಿ, ಜು. 16: ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಆಶಾದಾಯಕವಿದ್ದು; ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸಹಿತ ಹಿಂದಿನ 24 ಗಂಟೆಗಳಲ್ಲಿ ಎಲ್ಲೆಡೆ ಮಳೆ ಗೋಚರಿಸಿದೆ. ಕೊಡಗಿನ ತಲಕಾವೇರಿ ವ್ಯಾಪ್ತಿಯಲ್ಲಿ ಸರಾಸರಿ 5 ಇಂಚು ಮಳೆಯಾಗಿದೆ. ಅಂತೆಯೇ ಪುಷ್ಪಗಿರಿ ತಪ್ಪಲು ಸೇರಿದಂತೆ ಶಾಂತಳ್ಳಿ ವ್ಯಾಪ್ತಿಯಲ್ಲಿ ಇದೇ ಪ್ರಮಾಣದ ಮಳೆ ದಾಖಲಾಗಿದೆ. ಗಾಳಿಬೀಡು, ದಕ್ಷಿಣಕೊಡಗಿನ ಬಿರುನಾಣಿ ಸುತ್ತಮುತ್ತ 3 ಇಂಚು ಮಳೆಯಾಗಿದೆ.ಜಿಲ್ಲಾ ಕೇಂದ್ರ ಮಡಿಕೇರಿ ಸುತ್ತಮುತ್ತ 2.07 ಇಂಚು ಮಳೆಯಾದರೆ, ವೀರಾಜಪೇಟೆ ವ್ಯಾಪ್ತಿಗೆ 1.23 ಇಂಚು ಹಾಗೂ ಸೋಮವಾರ ಪೇಟೆಯಲ್ಲಿ 1 ಇಂಚು ದಾಖಲಾಗಿದೆ. ಜಿಲ್ಲೆಯಲ್ಲಿ ಸರಾಸರಿ 1.43 ಇಂಚು ಬಿದ್ದಿದೆ.ಅಲ್ಲದೆ ಸಂಪಾಜೆ ವ್ಯಾಪ್ತಿಯಲ್ಲಿ 2.53 ಇಂಚು, ನಾಪೋಕ್ಲು 1.96 ಇಂಚು, ಭಾಗಮಂಡಲ 2.56 ಇಂಚು ಮಳೆಯಾಗಿದೆ. ದಕ್ಷಿಣ ಕೊಡಗಿನ ಹುದಿಕೇರಿ 1.43 ಇಂಚು, ಶ್ರೀಮಂಗಲ 1 ಇಂಚು, ಅಮ್ಮತ್ತಿ 1.29 ಇಂಚು, ಬಾಳೆಲೆ 0.74 ಇಂಚು, ಪೊನ್ನಂಪೇಟೆ 0.87 ಇಂಚು ಮಳೆ ದಾಖಲಾಗಿದೆ. ಉತ್ತರ ಕೊಡಗಿನ ಕೊಡ್ಲಿಪೇಟೆ 0.90 ಇಂಚು, ಶನಿವಾರಸಂತೆ 0.74 ಇಂಚು, ಸುಂಟಿಕೊಪ್ಪ 0.99 ಇಂಚು, ಕುಶಾಲನಗರ 0.37 ಇಂಚು ಮಳೆ ದಾಖಲಾಗಿದೆ.
ಒಟ್ಟಿನಲ್ಲಿ ಕೊಡಗಿನ ಗ್ರಾಮೀಣ ಪ್ರದೇಶಗಳಾದ ಪುಷ್ಪಗಿರಿಯಿಂದ ಬ್ರಹ್ಮಗಿರಿ ತಪ್ಪಲಿನ ಎಲ್ಲೆಡೆ ಉತ್ತಮ ಮಳೆಯಾಗಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಸಾಧಾರಣ ಮಳೆಯೊಂದಿಗೆ ಕೃಷಿ ಚಟುವಟಿಕೆಗೆ ಅನುಕೂಲಕರ ವಾತಾವರಣವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೃಷಿ ಪ್ರಗತಿ : ಜಿಲ್ಲೆಯಲ್ಲಿ 1562 ಕ್ವಿಂಟಾಲ್ ಭತ್ತದ ಸಸಿಮಡಿ ಬಿತ್ತನೆಯೊಂದಿಗೆ ಹೈಬ್ರೀಡ್ ತಳಿ 3.50 ಕ್ವಿಂಟಾಲ್ ಸಸಿ ಮಡಿ ಸಿದ್ಧಗೊಂಡಿದ್ದು, 620 ಹೆಕ್ಟೇರ್ ನಾಟಿ ಪೂರ್ಣ ಗೊಂಡಿದೆ. 2430 ಹೆಕ್ಟೇರ್ ಕಾರ್ಯ ಪ್ರಗತಿಯಲ್ಲಿದೆ. ಈಗಿನ ವಾತಾವರಣ ರೈತರಿಗೆ ಕೃಷಿ ಚಟುವಟಿಕೆಗೆ ಪೂರಕವಿದ್ದು, ಯಾವದೇ ಸಮಸ್ಯೆ ಎದುರಾಗಿಲ್ಲ ಎಂದು ಕೃಷಿ ಅಧಿಕಾರಿ ರಾಜು ಮಾಹಿತಿ ನೀಡಿದ್ದಾರೆ.
ಸೋಮವಾರಪೇಟೆ: ಕಳೆದ ವಾರ ಬಿಡುವು ನೀಡಿದ್ದ ಮಳೆ ಮತ್ತೆ ಚುರುಕು ಗೊಂಡಿದ್ದು, ತಾಲೂಕಿನಾದ್ಯಂತ ಕೃಷಿ ಕಾರ್ಯ ಚುರುಕುಗೊಂಡಿದೆ. ಅನ್ನದಾತ ರೈತಾಪಿ ವರ್ಗದವರು ಗದ್ದೆಯತ್ತ ಮುಖ ಮಾಡಿದ್ದು, ಉಳುಮೆ, ಬಿತ್ತನೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಉತ್ತಮ ಮಳೆ ಯಾಗುತ್ತಿರುವ ಹಿನ್ನೆಲೆ ಬಿಡುವಿಲ್ಲದ ಚಟುವಟಿಕೆ ಕಂಡುಬರುತ್ತಿದ್ದು, ಈಗಾಗಲೇ 1800 ಹೆಕ್ಟೇರ್‍ನಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದೆ.
ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಮುಸುಕಿನ ಜೋಳದೊಂದಿಗೆ ಅತೀ ಹೆಚ್ಚು ಭತ್ತ ಬೆಳೆಯಲಾಗುತ್ತಿದ್ದು, ಪುಟ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಾದ್ಯಂತ ಕೃಷಿ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ತಾಲೂಕಿನ ಕೊಡ್ಲಿಪೇಟೆ, ಸೋಮವಾರಪೇಟೆ ಕಸಬಾ, ಶನಿವಾರಸಂತೆ ವ್ಯಾಪ್ತಿಯಲ್ಲಿ ಈಗಾಗಲೇ ಸಸಿಮಡಿ ತಯಾರಿ, ಉಳುಮೆ, ನಾಟಿ ಕಾರ್ಯ ಚುರುಕುಗೊಂಡಿದೆ.
ಪ್ರಸಕ್ತ ವರ್ಷ 10 ಸಾವಿರ ಹೆಕ್ಟೇರ್‍ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, ಈಗಾಗಲೇ 1800 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಪೂರ್ಣಗೊಂಡಿದೆ.
ಸಸಿಮಡಿಗೆ ಬೆಂಕಿ ರೋಗ ಕಂಡುಬಂದರೆ 10 ಲೀಟರ್ ನೀರಿಗೆ 10 ಗ್ರಾಂ. ಬ್ಯಾವೆಸ್ಟಿನ್, 20 ಮಿ.ಲಿ. ಎಕಾಲೆಕ್ಸ್ ಮಿಶ್ರಣ ಮಾಡಿ ಸಿಂಪಡಿಸಬೇಕೆಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ತಿಳಿಸಿದ್ದಾರೆ.
ತಾಲೂಕಿನ ಶಾಂತಳ್ಳಿ ಹೋಬಳಿಯಾದ್ಯಂತ ಕೃಷಿ ಚಟುವಟಿಕೆ ಭರದಿಂದ ಸಾಗಿದೆ. ಹಲವೆಡೆ
ನಾಟಿ ಕಾರ್ಯ ನಡೆಯುತ್ತಿದ್ದರೆ, ಕೆಲವೆಡೆ ಸಸಿಮಡಿ ತಯಾರು ಮಾಡಲಾಗುತ್ತಿದೆ.
(ಮೊದಲ ಪುಟದಿಂದ) ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದಲ್ಲಿ ಉತ್ತಮ ಮಳೆಯಾ ಗುತ್ತಿರುವ ಹಿನ್ನೆಲೆ, ಈ ವ್ಯಾಪ್ತಿಯ ಬೆಟ್ಟದಳ್ಳಿ, ಕುಮಾರಳ್ಳಿ, ಬೀದಳ್ಳಿ, ಹೆಗ್ಗಡಮನೆ, ಕೊತ್ನಳ್ಳಿ, ಬೀಕಳ್ಳಿ, ಹಂಚಿನಳ್ಳಿ, ನಾಡ್ನಳ್ಳಿ, ಕುಡಿಗಾಣ ಪ್ರದೇಶಗಳಲ್ಲಿ ಕೃಷಿಕರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.
ಕೃಷಿ ಇಲಾಖೆಯ ಮಾಹಿತಿ ಪ್ರಕಾರ, ಸೋಮವಾರಪೇಟೆ ತಾಲೂಕಿನಲ್ಲಿ 10ಸಾವಿರ ಹೆಕ್ಟೇರ್ ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. 3.600 ಹೆಕ್ಟೇರ್‍ನಲ್ಲಿ ಮುಸುಕಿನ ಜೋಳ, ಬಾಳೆ, ಶುಂಠಿ ಕೃಷಿ ಮಾಡಲಾಗಿದೆ. ಕಾಫಿ ತೋಟದ ಕೆಲಸಕ್ಕೂ ಉತ್ತಮ ಹವಾಮಾನವಿದೆ. ಅತೀ ಹೆಚ್ಚು ಅರೇಬಿಕಾ ಕಾಫಿ ಬೆಳೆಯುವ ತಾಲೂಕಿನ ತೋಟಗಳಲ್ಲಿ ಔಷಧ ಸಿಂಪಡಣೆ, ರಾಸಾಯನಿಕ ಗೊಬ್ಬರ ಹಾಕುವದು, ಗಿಡಗಳನ್ನು ನೆಡುವದು, ಬಿಳಿಕಾಂಡಕೊರಕಕ್ಕೆ ತುತ್ತಾದ ಗಿಡಗಳನ್ನು ಕಿತ್ತು ಸುಡುವ ಕಾರ್ಯ ನಡೆಯುತ್ತಿದೆ. ಈಗಾಗಲೇ ರೈತ ಸಂಪರ್ಕ ಕೇಂದ್ರದಲ್ಲಿ ಬೀಜದ ಭತ್ತ ವಿತರಣೆ ಮಾಡಲಾಗಿದೆ. ರೈತರು ತಮ್ಮ ಗದ್ದೆಗಳಲ್ಲಿ ನಾಟಿ ಮಾಡುವಾಗ 25-30 ದಿನಗಳ ಸಸಿಯನ್ನು ನಾಟಿ ಮಾಡಬೇಕು. ಒಂದು ಚದರ ಮೀಟರ್‍ಗೆ 50 ಗುಣಿ ಬರುವಂತೆ ಪ್ರತಿ ಗುಣಿಗೆ 2, 3 ಸಸಿಯನ್ನು ಸೇರಿಸಿ 2 ಇಂಚು ಆಳದಲ್ಲಿ ನಾಟಿ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂದು ಡಾ. ರಾಜಶೇಖರ್ ಕೃಷಿಕರಿಗೆ ಮಾಹಿತಿ ನೀಡಿದ್ದಾರೆ.
ಶನಿವಾರಸಂತೆ : ಪಟ್ಟಣ ಹಾಗೂ ಹೋಬಳಿಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದೆ. ಗುರುವಾರ ಉತ್ತಮ ಮಳೆಯಾಗುತ್ತಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಮುಕ್ಕಾಲು ಇಂಚು ಮಳೆಯಾಗಿದ್ದರೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಇಂಚಿಗೂ ಅಧಿಕ ಮಳೆಯಾಗಿದೆ. ಕೃಷಿ ಚಟುವಟಿಕೆ ಚುರುಕಾಗಿದೆ ರೈತರು ನಾಟಿ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಸಕಾಲಕ್ಕೆ ಮುಂಗಾರು ಮಳೆಯಾಗದೆ ಹತಾಶರಾಗಿದ್ದ ರೈತರಲ್ಲಿ ಬುಧವಾರ ಸಂಜೆಯಿಂದ ಸುರಿಯುತ್ತಿರುವ ಉತ್ತಮ ಮಳೆ ಉತ್ಸಾಹ ಮೂಡಿಸಿದೆ. ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದೊಡ್ಡಬಿಳಾಹ, ಕಿರಿಬಿಳಾಹ, ಚೆನ್ನಾಪುರ, ಕಾಜೂರು, ಕೂಜಗೇರಿ ಗ್ರಾಮದಲ್ಲಿ ಕೆಲವು ರೈತರು ನಾಟಿ ಕಾರ್ಯ ಮುಗಿಸಿದರೆ, ಉಳಿದ ರೈತರು ಮುಗಿಸುವ ಸಿದ್ಧತೆಯಲ್ಲಿದ್ದಾರೆ. ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಶಿಡಿಗಳಲೆ ಗ್ರಾಮದ ರೈತರು ನಾಟಿ ಕೆಲಸದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ನೀರು ಏರಿಕೆ
ಸಿದ್ದಾಪುರ: ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ. ಈ ಬಗ್ಗೆ ಶಕ್ತಿಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ನದಿಯಲ್ಲಿ ನೀರಿನ ಮಟ್ಟ ಅಧಿಕ ಏರಿಕೆಯಾದಲ್ಲಿ ನದಿ ತೀರದ ನಿವಾಸಿಗಳಿಗೆ ಆಶ್ರಯ ಪಡೆಯಲು ಈಗಾಗಲೇ ಪರಿಹಾರ ಕೇಂದ್ರವನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.