ಕೂಡಿಗೆ, ಜು.16: ತೊರೆನೂರಿನಲ್ಲಿ ವೃದ್ಧ ಮಹಿಳೆಯೊಬ್ಬರು ಮೃತಪಟ್ಟಿದ್ದು ಅವರ ಅಂತ್ಯಸಂಸ್ಕಾರ ವಿಚಾರವಾಗಿ ಗೊಂದಲ ಉಂಟಾದ ಘಟನೆ ನಡೆದಿದೆ. ಗ್ರಾಮದ ಮಹಿಳೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.
ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಅಣಿಯಾಗುವ ಸಂದರ್ಭ ಸ್ಥಳಕ್ಕೆ ಭೇಟಿ ನೀಡಿ ಗ್ರಾಪಂ ಪಿಡಿಒ ಮೃತದೇಹವನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಈ ಸಂದರ್ಭ ಮೃತ ವೃದ್ಧೆಗೆ ಕೊರೊನಾ ಸೋಂಕು ಇರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿಗೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಬೇಕೆಂದು ತಿಳಿಸಿದ ಕಾರಣ ಮೃತರ ಸಂಬಂಧಿಕರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.ಮೃತ ಮಹಿಳೆ 82 ವರ್ಷದ ವಯೋವೃದ್ಧರಾಗಿದ್ದು, ಮನೆಯಿಂದ ಹೊರಗೆ ತೆರಳಲಿಲ್ಲ. ಯಾರೂ ಕೂಡ ಇವರನ್ನು ಸಂಪರ್ಕ ಮಾಡಿಲ್ಲ. ಆದರೂ ಕೊರೊನಾ ಹೇಗೆ ಬರಲು ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆ ಬಳಿಕ ಗ್ರಾಮದ ಮುಖಂಡರುಗಳ ಸಮ್ಮುಖದಲ್ಲಿ ಮಾತುಕತೆ ನಡೆಸಿ, ಸಂಬಂಧಿಕರನ್ನು ಸಮಾಧಾನಪಡಿಸಿ ಮೃತದೇಹವನ್ನು ಮಡಿಕೇರಿಗೆ ಕೊಂಡೊಯ್ದು, ಕೋವಿಡ್ ನಿಯಮಾನುಸಾರ ಶವ ಸಂಸ್ಕಾರ ನೆರವೇರಿಸಲಾಯಿತು.
ಗ್ರಾಮದಲ್ಲಿ ಶವಸಂಸ್ಕಾರ ಮಾಡಲು ಗುಂಡಿಯನ್ನು ತೆಗೆಯಲಾಗಿತ್ತು. ಆದರೆ ಜಿಲ್ಲಾ ಮಟ್ಟದ ಅಧಿಕಾರಿ ವರ್ಗದವರು ಅವಕಾಶ ನೀಡದ ಕಾರಣ ಶವಸಂಸ್ಕಾರಕ್ಕೆ ತೆಗೆದ ಗುಂಡಿಗೆ ಶವಸಂಸ್ಕಾರ ಮಾದರಿಯಲ್ಲಿ ಸಾಂಪ್ರದಾಯಿಕವಾಗಿ ಪೂಜೆ ಮಾಡಿ ಮುಚ್ಚಲಾಯಿತು.