ಸೋಮವಾರಪೇಟೆ, ಜು. 16: ಪ.ಪಂ. ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಪಟ್ಟಣ ಪಂಚಾಯಿತಿ ಸದಸ್ಯರುಗಳನ್ನು ಒಳಗೊಂಡಂತೆ ಕೊರೊನಾ ನಿಯಂತ್ರಣ ಜಾಗೃತಿ ಉಸ್ತುವಾರಿ ಸಮಿತಿ ರಚಿಸಲಾಯಿತು.ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾಯಿತ ಹಾಗೂ ನಾಮನಿರ್ದೇಶಿತ ಸದಸ್ಯರ ಸಭೆಯಲ್ಲಿ 11 ವಾರ್ಡ್‍ಗಳಿಗೆ ಸಂಬಂಧಿಸಿದಂತೆ ಉಸ್ತುವಾರಿ ಸಮಿತಿಯನ್ನು ನೂತನವಾಗಿ ಅಸ್ತಿತ್ವಕ್ಕೆ ತರಲಾಯಿತು.ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್-19 ವೈರಾಣು ಹರಡದಂತೆ ಮುಂಜಾಗ್ರತೆ ವಹಿಸುವದು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ವಾರ್ಡ್ ಸದಸ್ಯರ ಅಧ್ಯಕ್ಷತೆಯಲ್ಲಿ ಎಂಟು ಜನರನ್ನೊಳ ಗೊಂಡ ಸಮಿತಿಯನ್ನು ರಚಿಸಲಾಯಿತು.ಆಯಾ ವಾರ್ಡಿನ ಸದಸ್ಯರು ಅಧ್ಯಕ್ಷರಾಗಿ, ಬೂತ್ ಮಟ್ಟದ ಅಧಿಕಾರಿ ಸದಸ್ಯ ಕಾರ್ಯದರ್ಶಿ ಯಾಗಿ, ಪಟ್ಟಣ ಪಂಚಾಯಿತಿಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆ ಯರು, ಆಶಾ ಕಾರ್ಯಕರ್ತೆಯರು, ಸ್ವಯಂಸೇವಾ ಸಂಘ, ಸ್ವಸಹಾಯ ಸಂಘ ಹಾಗೂ ಸಮಾಜ ಸೇವಕರನ್ನು ಒಳಗೊಂಡಂತೆ ತಂಡವನ್ನು ರೂಪಿಸಲಾಯಿತು.

(ಮೊದಲ ಪುಟದಿಂದ) ಕೊರೊನಾ ನಿಯಂತ್ರಣ ಹಾಗೂ ಜಾಗೃತಿ ಬಗ್ಗೆ ಅರಿವು ಮೂಡಿಸುವದು. ಪ್ರತಿದಿನ ಸಭೆ ಸೇರಿ ಚರ್ಚೆ ನಡೆಸಿ ವರದಿ ಸಲ್ಲಿಸುವದು. ವಾರ್ಡ್‍ನ ಮನೆಗಳು, ನೀರು ಸಂಸ್ಕರಣ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸುವದು, ವಾರ್ಡ್‍ಗಳಲ್ಲಿ ಜನರು ಗುಂಪು ಸೇರದಂತೆ ನೋಡಿಕೊಳ್ಳುವದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಾಗೃತಿ ವಹಿಸುವದೂ ಸೇರಿದಂತೆ ಇತರ ಜವಾಬ್ದಾರಿಗಳನ್ನು ಸಮಿತಿ ನಿರ್ವಹಿಸಬೇಕಿದೆ ಎಂದು ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದರು.

ಪಟ್ಟಣದ ನಾಗರಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ಮಾಡುವದು, ಭಿತ್ತಿಪತ್ರಗಳನ್ನು ಮಾಡಿ ಮನೆ ಮನೆಗಳಿಗೆ ಹಂಚುವದು, ಅಂಗಡಿಗಳಲ್ಲಿ ಪೋಸ್ಟರ್ ಹಾಕುವದು, ಜಾಗೃತಿ ಸಮಿತಿ ಸದಸ್ಯರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡುವ ಬಗ್ಗೆ ಚರ್ಚೆ ನಡೆಯಿತು. ಸ್ವಸಹಾಯ ಸಂಘದ ಪ್ರತಿನಿಧಿ ಹಾಗೂ ಸಮಾಜ ಸೇವಕರೋರ್ವರನ್ನು ಸಮಿತಿಗೆ ಸೇರಿಸಿಕೊಳ್ಳಲು ಸಮಿತಿಯ ಅಧ್ಯಕ್ಷರಿಗೆ ಅವಕಾಶ ನೀಡಲಾಯಿತು.

ಸಭೆಯಲ್ಲಿ ಸದಸ್ಯರುಗಳಾದ ನಳಿನಿ ಗಣೇಶ್, ಶೀಲಾ ಡಿಸೋಜ, ಬಿ.ಸಿ. ವೆಂಕಟೇಶ್, ಡಿ.ವಿ. ಉದಯಶಂಕರ್, ಪಿ.ಕೆ. ಚಂದ್ರು, ಜೀವನ್, ಶುಭಕರ್, ನಾಗರತ್ನ, ಬಿ.ಆರ್. ಮಹೇಶ್, ಎಸ್. ಮಹೇಶ್, ಎಸ್.ಆರ್. ಸೋಮೇಶ್, ಶರತ್‍ಚಂದ್ರ, ಪಂಚಾಯಿತಿ ಸಿಬ್ಬಂದಿಗಳಾದ ರೂಪಾ ಮಹೇಂದ್ರ ಹಾಗೂ ರಫೀಕ್ ಉಪಸ್ಥಿತರಿದ್ದರು.