ಶೇ. 63 ರಷ್ಟು ಮಂದಿ ಗುಣಮುಖ
ನವದೆಹಲಿ, ಜು. 16: ಮಹಾಮಾರಿ ಕೊರೊನಾಗೆ ತುತ್ತಾಗಿರುವವರ ಪೈಕಿ ಶೇ. 63 ರಷ್ಟು ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಅಂಕಿ ಅಂಶಗಳನ್ನು ನೀಡಿದೆ. ಭಾರತದಲ್ಲಿ ಒಟ್ಟಾರೆ 9.68 ಲಕ್ಷ ಮಂದಿ ಕೊರೊನಾಗೆ ತುತ್ತಾಗಿದ್ದು ಈ ಪೈಕಿ 3,31,146 ಪ್ರಕರಣಗಳು ಮಾತ್ರ ಸಕ್ರಿಯವಾಗಿದೆ. ಇದು ದೇಶದ ಒಟ್ಟು ಮೊತ್ತದ ಮೂರನೇ ಒಂದು ಭಾಗವಾಗಿ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ದೇಶದಲ್ಲಿ ಗುರುವಾರ ದಾಖಲೆಯ 32,695 ಪ್ರಕರಣಗಳು ಪತ್ತೆಯಾಗಿತ್ತು. ಜೂನ್ ಮಧ್ಯಭಾಗದಲ್ಲಿ ಚೇತರಿಕೆಯ ಪ್ರಮಾಣವು ಶೇ. 50ಕ್ಕೆ ಏರಿದೆ. ಅಲ್ಲಿಂದ ಚೇತರಿಕೆ ಪ್ರಮಾಣ ಸ್ಥಿರವಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ ಎಂದು ಸಚಿವಾಲಯ ಹೇಳಿದೆ. ಒಟ್ಟು ಕೋವಿಡ್-19 ಪ್ರಕರಣಗಳಲ್ಲಿ ಇದುವರೆಗೆ ಶೇ. 63.25 ಚೇತರಿಕೆ ಕಂಡಿವೆ. ಅದೇ ಸಮಯದಲ್ಲಿ, ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರವಾದ ಕುಸಿತ ಕಂಡುಬಂದಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 20,783 ಜನರು ಚೇತರಿಸಿಕೊಂಡಿದ್ದಾರೆ. ಇದು ಒಂದು ದಿನದಲ್ಲಿ ಅತಿ ಹೆಚ್ಚು ಚೇತರಿಕೆ ಪ್ರಮಾಣವಾಗಿದೆ. ಒಟ್ಟು ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆಯನ್ನು 6,12,814ಕ್ಕೆ ಏರಿಕೆಯಾಗಿದೆ.
ತಮಿಳುನಾಡಿನಲ್ಲಿ ಸೋಂಕು ತೀವ್ರ
ಚೆನ್ನೈ, ಜು. 16: ತಮಿಳುನಾಡಿನಲ್ಲಿ ಮಾರಕ ಕೊರೊನಾ ವೈರಸ್ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 4,549 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ತಮಿಳುನಾಡಿನಲ್ಲಿ ಇಂದು 4,549 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಆ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,56,369ಕ್ಕೆ ಏರಿಕೆಯಾಗಿದೆ. ಈ ಪೈಕಿ 1,07,416 ಮಂದಿ ಸೋಂಕಿತರು ಗುಣಮುಖರಾಗಿದ್ದು, 46,714 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತೆಯೇ ಇಂದು ತಮಿಳುನಾಡಿನಲ್ಲಿ 69 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಆ ರಾಜ್ಯದಲ್ಲಿ ಕೊರೊನಾ ವೈರಸ್‍ಗೆ ಬಲಿಯಾದವರ ಸಂಖ್ಯೆ 2,236 ಕ್ಕೆ ಏರಿಕೆಯಾಗಿದೆ ಎಂದು ತಮಿಳುನಾಡು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಉನ್ನತ ಅಧಿಕಾರಿಗಳೊಂದಿಗೆ ಮೋದಿ ಸಭೆ
ನವದೆಹಲಿ, ಜು. 16: ಪ್ರಧಾನಿ ನರೇಂದ್ರ ಮೋದಿ ಆರ್ಥಿಕತೆಗೆ ಸಂಬಂಧಿಸಿದಂತೆ 50 ಉನ್ನತ ಅಧಿಕಾರಿಗಳೊಂದಿಗೆ ಮೋದಿ ಸಭೆ ನಡೆಸಲಿದ್ದಾರೆ. ಹಣಕಾಸು, ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ಮೋದಿ ಅವರೊಂದಿಗಿನ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗಿಯಾಗಲಿದ್ದು, ಆರ್ಥಿಕ ಸ್ಥಿತಿಗತಿಗಳು ಹಾಗೂ ಅದರ ಚೇತರಿಕೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಪ್ರಸ್ತುತಿ ನೀಡಿ ವಿವರಿಸಲಿದ್ದಾರೆ. ಕೋವಿಡ್-19 ದೇಶದ ಆರ್ಥಿಕತೆಯ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ಈ ಸಭೆಯಲ್ಲಿ ವಿಶ್ಲೇಷಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾದ ಪರಿಣಾಮವಾಗಿ ಇತ್ತೀಚಿನ ತ್ರೈಮಾಸಿಕಗಳಲ್ಲಿ ಕುಸಿಯುತ್ತಿರುವ ಗ್ರಾಹಕ ಬೇಡಿಕೆಯ ಪರಿಣಾಮವಾಗಿ ಆರ್ಥಿಕತೆ ಸಹ ಕುಸಿತ ಕಾಣುತ್ತಿದೆ. ಈ ಪರಿಸ್ಥಿತಿಯ ಸುಧಾರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಗಮನ ಕೇಂದ್ರೀಕರಿಸಲಿದ್ದಾರೆ.
ವಿವಾದ ಸೃಷ್ಟಿಸಿದ ಶ್ರೀರಾಮುಲು ಮಾತು
ಬೆಂಗಳೂರು, ಜು. 16: ದಿನದಿಂದ ದಿನಕ್ಕೆ ಆತಂಕಕಾರಿಯಾಗಿ ಹೆಚ್ಚಾಗುತ್ತಿರುವ ರಾಜ್ಯವನ್ನು ಕೋವಿಡ್-19 ಸಾಂಕ್ರಾಮಿಕ ರೋಗದಿಂದ ದೇವರೇ ಕಾಪಾಡಬೇಕು ಎಂಬ ಆರೋಗ್ಯ ಸಚಿವ ಶ್ರೀರಾಮುಲು ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ. ಆರೋಗ್ಯ ಸಚಿವರ ಹೇಳಿಕೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯವನ್ನು ದೇವರೇ ಕಾಪಾಡಬೇಕು ಎಂದು ಆರೋಗ್ಯ ಸಚಿವರು ಹೇಳುತ್ತಿರುವುದು ಕೋವಿಡ್ ಬಿಕ್ಕಟ್ಟು ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರದ ವೈಫಲ್ಯವನ್ನು ತೋರಿಸುತ್ತಿದೆ. ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಆಗದಿದ್ದರೆ ಇಂತಹ ಸರ್ಕಾರ ನಮ್ಮಗೆ ಏಕೆ ಬೇಕು ಎಂದು ಪ್ರಶ್ನಿಸಿದ್ದಾರೆ. ಈ ಸರ್ಕಾರದ ಅಸಮರ್ಥತೆಯು ನಾಗರಿಕರನ್ನು ದೇವರ ಕರುಣೆಗೆ ಬಿಟ್ಟಿದೆ ಎಂದು ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಗಡಿಯಲ್ಲಿ ನಿರಂತರ ನಿಗಾ ಅಗತ್ಯ
ನವದೆಹಲಿ, ಜು. 16: ಪೂರ್ವ ಲಡಾಖ್‍ನ ವಾಸ್ತವ ಗಡಿ ನಿಯಂತ್ರಣ (ಎಲ್‍ಎಸಿ) ರೇಖೆಯಿಂದ ಸೇನೆಯನ್ನು ಸಂಪೂರ್ಣ ಹಿಂದಕ್ಕೆ ಪಡೆದುಕೊಳ್ಳುವುದಕ್ಕೆ ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ. ಆದರೆ ಪಿಎಲ್‍ಎಯಿಂದ ಚೀನಾ ಹಿಂದಕ್ಕೆ ಸರಿಯುವ ಕುರಿತು ನಿರಂತರ ಪರಿಶೀಲನೆಯ ಅಗತ್ಯವಿದೆ ಎಂದು ಭಾರತೀಯ ಸೇನೆ ಒತ್ತಿ ಹೇಳಿದೆ. ಸಂಘರ್ಷದಿಂದ ಸಂಪೂರ್ಣ ಹಿಂದೆ ಸರಿಯುವ ಉದ್ದೇಶಕ್ಕೆ ಎರಡೂ ಕಡೆಯವರು ಬದ್ಧರಾಗಿರುತ್ತಾರೆ. ಆದರೆ ಸೇನೆ ಹಿಂಪಡೆಯುವ ಪ್ರಕ್ರಿಯೆಯು ಸಂಕೀರ್ಣವಾಗಿದ್ದು, ನಿರಂತರ ಪರಿಶೀಲನೆಯ ಅಗತ್ಯವಿದೆ ಎಂದು ಭಾರತೀಯ ಸೇನೆ ಹೇಳಿದೆ. ಎಲ್‍ಎಸಿಯಲ್ಲಿ ಉಂಟಾಗಿರುವ ಪ್ರಕ್ಷುಬ್ಧ ವಾತಾವರಣದ ಸುಧಾರಣೆಗಾಗಿ ನಡೆದ ಕಮಾಂಡರ್ ಮಟ್ಟದ ನಾಲ್ಕನೇ ಮಾತುಕತೆಯಲ್ಲಿ, ಈಗಿನ ಸ್ಥಳದಿಂದ ಪೂರ್ವನಿರ್ಧರಿತ ದೂರಕ್ಕೆ ಸೈನ್ಯವನ್ನು ಹಿಂತಿರುಗಿಸಲು ಎರಡೂ ಕಡೆಯವರು ನಿರ್ಧರಿಸಿದ್ದಾರೆ.
ಕಾಸರಗೋಡಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ
ಕಾಸರಗೋಡು, ಜು. 16: ಕಾಸರಗೋಡಿನಲ್ಲೂ ಮತ್ತೆ ಕೊರೊನಾ ಹಾವಳಿ ಜೋರಾಗಿದ್ದು, ಮೂರನೇ ಹಂತದ ಹರಡುವಿಕೆಯಲ್ಲಿ 590 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 768 ಜನರಿಗೆ ಸೋಂಕು ತಗುಲಿದೆ. ಸದ್ಯ ಜಿಲ್ಲೆಯಲ್ಲಿ ಕೋವಿಡ್-19 ಪ್ರಸ್ತುತ ಪರಿಸ್ಥಿತಿ ಗಂಭೀರವಾಗಿದೆ ಮತ್ತು ಜಿಲ್ಲೆಯಲ್ಲಿ ಸಂಪರ್ಕದ ಮೂಲಕ ಹೆಚ್ಚಿನ ಜನರು ಸೋಂಕಿಗೆ ಒಳಗಾಗುತ್ತಿರುವುದು ಖಚಿತವಾಗುತ್ತಿರುವುದರಿಂದ ರೋಗ ಹರಡುವಿಕೆ ಹೆಚ್ಚುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಹೇಳಿದರು.
ಹಲವೆಡೆ ರೆಡ್ ಅಲರ್ಟ್ ಘೋಷಣೆ
ಮುಂಬೈ, ಜು. 16: ಕೊರೊನಾ ಅಟ್ಟಹಾಸಕ್ಕೆ ಸಿಕ್ಕು ನಲುಗಿರುವ ದೇಶದ ವಾಣಿಜ್ಯ ರಾಜಧಾನಿ, ಮುಂಬೈನಲ್ಲಿ ಮಳೆ ಆಘಾತ ನೀಡುತ್ತಿದೆ. ಮುಂದಿನ ಆರು ಗಂಟೆಗಳಲ್ಲಿ ನಗರದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂಬೈ, ಥಾಣೆ ಮತ್ತು ಪಾಲ್ಗರ್ ಪ್ರದೇಶದಲ್ಲಿ ಈ ವಾರಪೂರ್ತಿ ಮಳೆಯಾಗಲಿದ್ದು, ಗುರುವಾರ ಕೂಡಾ ಧಾರಾಕಾರ ಮಳೆ ಸುರಿಯುವ ಸಾಧ್ಯತೆಯಿದೆ. ಈ ಹಿನ್ನೆಲೆ ಮೂರು ಪ್ರದೇಶಗಳಲ್ಲಿ ಯಲ್ಲೋ ಅಲರ್ಟ್ ಬದಲಾಗಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂಬೈನ ಸಾಕಷ್ಟು ಕಡೆ ರಸ್ತೆಗಳಲ್ಲಿ ನೀರು ತುಂಬಿಕೊಂಡು, ವಾಹನ ಸಂಚಾರ ಅಸ್ತವ್ಯಸ್ತವಾಗಿವೆ. ಮುಂಬೈ ಮಹಾನಗರ ಪಾಲಿಕೆಯು ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ರಸ್ತೆಗಿಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮುಂಬೈನ ಬಂದ್ರಾ, ಬಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಪೂರ್ವ), ಸಂತಾಕ್ರಜ್, ಕೊಲಬಾ, ಮಹಾಲಕ್ಷ್ಮೀ, ರಾಮಮಂದಿರ ಮತ್ತು ಎನ್‍ಎಸ್‍ಸಿ ಸ್ಟೇಷನ್ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದೆ. ಇದುವರೆಗೂ 10 ಸೆಂಟಿ ಮೀಟರ್ ನಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆ. 1 ರಿಂದ ಶೂಟರ್‍ಗಳ ಶಿಬಿರ ಆರಂಭ
ನವದೆಹಲಿ, ಜು. 16: ಮುಂಬರುವ ಟೋಕಿಯೊ ಒಲಿಂಪಿಕ್ಸ್‍ಗೆ ಪ್ರಕಟಿಸಲಾಗಿರುವ 34 ಭಾರತೀಯ ಶೂಟರ್‍ಗಳ ಸಂಭಾವ್ಯ ತಂಡವು ಆ. 1 ರಿಂದ ಅಭ್ಯಾಸ ಶಿಬಿರವನ್ನು ಪುನರಾರಂಭಿಸಲಿದೆ. ಮುಂದಿನ ತಿಂಗಳಿನಿಂದ ಎಚ್ಚರಿಕೆ ಮತ್ತು ಹಂತ ಹಂತವಾಗಿ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸುವ ಉದ್ದೇಶದಿಂದ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ರೈಫಲ್ಸ್ ಸಂಸ್ಥೆ (ಎನ್‍ಆರ್‍ಎಐ) ಗುರುವಾರ ಪ್ರಕಟಿಸಿದೆ. ಪ್ರಕಟಣೆಯಲ್ಲಿ ವಿಸ್ತೃತ ವಿವರ ನೀಡಿರುವ ಎನ್‍ಆರ್‍ಎಐ, ಕೋವಿಡ್-19 ಹರಡುವುದನ್ನು ತಡೆಗಟ್ಟಲು ಸುರಕ್ಷತೆಯ ಕ್ರಮಗಳೊಂದಿಗೆ ಆಡಳಿತ ಮಂಡಳಿ, ಅಭ್ಯಾಸ ಶಿಬಿರವನ್ನು ಪುನರಾರಂಭಿಸುವ ನಿರ್ಧಾರ ಕೈಗೊಂಡಿದೆ. ರಾಷ್ಟ್ರ ರಾಜಧಾನಿ ಡಾ. ಕರ್ಣಿ ಸಿಂಗ್ ಶೂಟಿಂಗ್ ರೇಂಜ್‍ನಲ್ಲಿ ಈ ಶಿಬಿರ ನಡೆಯಲಿದೆ.