ಸಿದ್ದಾಪುರ, ಜು. 16: ಕಾಡಾನೆ ಗಳನ್ನು ಕಾಡಿಗೆ ಅಟ್ಟಲು ಪ್ರಯತ್ನಿಸಿದ ಅರಣ್ಯ ಇಲಾಖಾ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿ ಗಳನ್ನು ಕಾಡಾನೆ ಗಳು ಬೆನ್ನಟ್ಟಿದ ಪ್ರಸಂಗ ನಡೆದಿದೆ.

ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೊಳಪಡುವ ಕಳತ್ಮಾಡು, ಹೊಸೂರು, ಬೆಟ್ಟಗೇರಿ, ಹೊಸಕೋಟೆ ಗ್ರಾಮಗಳ ಕಾಫಿ ತೋಟಗಳಲ್ಲಿ ಕಾಡಾನೆಗಳು ಕಾಫಿತೋಟದಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಗುರುವಾರದಂದು ಕಾಫಿ ತೋಟಗಳಲ್ಲಿ ಬೀಡುಬಿಟ್ಟ ಕಾಡಾನೆ ಗಳನ್ನು ಅರಣ್ಯಕ್ಕೆ ಓಡಿಸುವ ಕಾರ್ಯಾ ಚರಣೆಯನ್ನು ಹಮ್ಮಿಕೊಳ್ಳಲಾಯಿತು.ಕಾರ್ಯಾಚರಣೆ ಸಂದರ್ಭ ಕಾಡಾನೆಗಳು ಕಾಡಿಗೆ ತೆರಳದೆ ಕಾರ್ಯಾಚರಣೆಗಿಳಿದ ಸಿಬ್ಬಂದಿ ಗಳನ್ನು ಬೆನ್ನಟ್ಟಿದವು ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ. ಸುರಿಯುವ ಮಳೆಯಲ್ಲಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಸಿಬ್ಬಂದಿಗಳು ಸಾಕಷ್ಟು ಪ್ರಯತ್ನ ಮಾಡಿದರೂ ಕಾಡಾನೆಗಳು ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಲಗ್ಗೆ ಇಡುತ್ತಾ ಅರಣ್ಯ ಸಿಬ್ಬಂದಿಗಳನ್ನು ಹಾಗೂ ಅಧಿಕಾರಿಗಳ ಬೆವರು ಇಳಿಸಿವೆ. ಕೆಸರಿನಲ್ಲಿ ಬಿದ್ದು-ಎದ್ದು ಕಾರ್ಯಾಚರಣೆ ಮಾಡಿದರೂ ಕಾಡಾನೆಗಳು ಮರಿ ಆನೆಗಳೊಂದಿಗೆ ತೋಟವನ್ನು ಬಿಟ್ಟು ಕದಲಲು ಹಿಂದೇಟು ಹಾಕಿವೆ. ಕಾಡಾನೆಗಳು ಅರಣ್ಯ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಬೆನ್ನಟ್ಟಿದ ಸಂದರ್ಭ ದಲ್ಲಿ ಕಾಡಾನೆಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಬಿದ್ದು-ಎದ್ದು ಓಡಿದ ಪ್ರಸಂಗ ಕೂಡ ನಡೆಯಿತು.

ಕಾರ್ಯಾಚರಣೆ ಸಂದರ್ಭ ಮರಿ ಯಾನೆಗಳು ಕೂಡ ಕಂಡು ಬಂದಿವೆ ಎಂದು ವೀರಾಜಪೇಟೆ ಉಪವಲಯ ಅರಣ್ಯಾಧಿಕಾರಿ ಮನೋಜ್ ತಿಳಿಸಿದರು. ಕಾರ್ಯಾ ಚರಣೆಯಲ್ಲಿ 20 ಮಂದಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ವೀರಾಜಪೇಟೆ ವಲಯ ಅರಣ್ಯಾಧಿಕಾರಿ ದಿಲೀಪ್, ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್, ಮನೋಜ್, ಅರಣ್ಯ ರಕ್ಷಕ ಚಂದ್ರಹಾಸ ಹಾಗೂ ಸಿಬ್ಬಂದಿಗಳು, ಆರ್‍ಆರ್‍ಟಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವೀರಾಜಪೇಟೆ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಗೊಳಪಡುವ ಭಾಗದಲ್ಲಿ ಆರು ಕಾಡಾನೆಗಳನ್ನು ಸೆರೆಹಿಡಿಯಲು ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ ಎಂದು ಡಿಸಿಎಫ್ ರೋಶ್ನಿ ತಿಳಿಸಿದ್ದಾರೆ.

-ವರದಿ ವಾಸು