ಸಿದ್ದಾಪುರ, ಜು. 15: ಹಾಡಹಗಲೇ ಕಾಡಾನೆಗಳು ಕಾಫಿ ತೋಟದಿಂದ ಇನ್ನೊಂದು ಕಾಫಿ ತೋಟಕ್ಕೆ ಲಗ್ಗೆಯಿಟ್ಟ ದೃಶ್ಯ ಕಂಡುಬಂದಿತು. ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪದಲ್ಲಿರುವ ಕಾಫಿತೋಟ ಒಂದರಿಂದ ಇನ್ನೊಂದು ಕಾಫಿ ತೋಟಕ್ಕೆ ಮರಿಯಾನೆಗಳು ಸೇರಿದಂತೆ 8ಕ್ಕೂ ಅಧಿಕ ಕಾಡಾನೆಗಳ ಹಿಂಡು ಸಾರ್ವಜನಿಕ ರಸ್ತೆಯ ಮೂಲಕ ತೆರಳುತ್ತಿರುವುದು ಕಂಡುಬಂದಿತು.(ಮೊದಲ ಪುಟದಿಂದ) ಕೆಲಸಕ್ಕೆ ತೆರಳುವ ಕಾರ್ಮಿಕರು ಭಯಭೀತರಾದರು ಅದೃಷ್ಟವಶಾತ್ ಲಾಕ್‍ಡೌನ್ ಆಗಿರುವ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇರುವ ಕಾರಣ ಮಕ್ಕಳು ಯಾರೂ ಕೂಡ ಬಾರದಿರುವದರಿಂದ ಅಪಾಯ ತಪ್ಪಿದಂತಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಕಾಡಾನೆಗಳು ತೆರಳುವ ಸಂದರ್ಭ ನಾಯಿ ಒಂದು ಕಾಡಾನೆಗಳನ್ನು ಕಂಡು ಬೊಗಳುವ ಸಂದರ್ಭದಲ್ಲಿ ರೋಷಗೊಂಡ ಕಾಡಾನೆಗಳು ನಾಯಿಯನ್ನು ತುಳಿದು ಸಾಯಿಸಿದೆ ಎಂದು ಗ್ರಾಮದ ನಿವಾಸಿ ಸುರೇಶ್ ತಿಳಿಸಿದ್ದಾರೆ. ಇದೀಗ ಸಿದ್ದಾಪುರ ಸುತ್ತಮುತ್ತಲಿನಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿದೆ. ಕಾಫಿತೋಟದಲ್ಲಿ ಬೀಡುಬಿಟ್ಟ ಕಾಡಾನೆಗಳು ದಾಂಧಲೆ ನಡೆಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮಿತಿಮೀರಿದ ಕಾಡಾನೆಗಳ ಉಪಟಳದಿಂದ ಕಾರ್ಮಿಕರು ಹಾಗೂ ಬೆಳೆಗಾರರು ಭಯಭೀತರಾಗಿದ್ದಾರೆ. -ವಾಸು