ಪ್ಲಾಸ್ಮಾ ದಾನ ಮಾಡಲು ಮನವಿ
ಬೆಂಗಳೂರು, ಜು. 15: ಗುಣಮುಖರಾಗಿರುವ ಕೋವಿಡ್ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡಲು ಸಚಿವ ಸುಧಾಕರ್ ಮನವಿ. ಪ್ಲಾಸ್ಮಾ ದಾನ ಮಾಡುವವರಿಗೆ ಸರ್ಕಾರದಿಂದ ರೂ. 5000 ಪೆÇ್ರೀತ್ಸಾಹಧನ. ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ ಹೆಚ್ಚಿದ್ದು 17,370 ಜನ ಈಗಾಗಲೇ ಗುಣಮುಖರಾಗಿದ್ದಾರೆ. ಐಸಿಯುನಲ್ಲಿ 597 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹವರ ಚಿಕಿತ್ಸೆಗೆ ಗುಣಮುಖರಾದವರ ಪ್ಲಾಸ್ಮಾ ಅತ್ಯಂತ ಪರಿಣಾಮ ಕಾರಿಯಾಗಿದ್ದು, ಪ್ಲಾಸ್ಮಾ ದಾನ ಮಾಡುವಂತೆ ಸಚಿವರು ಮನವಿ ಮಾಡಿದ್ದಾರೆ.
ಕೌಶಲ್ಯವನ್ನು ಹರಿತಗೊಳಿಸಲು ಪ್ರಧಾನಿ ಕರೆ
ನವದೆಹಲಿ, ಜು. 15: ಕೋವಿಡ್-19ನ ಈ ಸಂಕಷ್ಟದ ಸಮಯದಲ್ಲಿ ಮತ್ತು ಯಾವಾಗಲೂ ನಾವು ಪ್ರಸ್ತುತವಾಗಿರಲು ನಮ್ಮಲ್ಲಿರುವ ಕೌಶಲ್ಯಗಳನ್ನು ಹರಿತಗೊಳಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ವಿಶ್ವ ಯುವ ಕೌಶಲ್ಯ ದಿನದ ಅಂಗವಾಗಿ ದೆಹಲಿಯಲ್ಲಿ ಡಿಜಿಟಲ್ ಶೃಂಗವನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್-19 ನಮ್ಮ ಕೆಲಸ-ಕಾರ್ಯಗಳು, ಉದ್ಯೋಗದ ಲಕ್ಷಣಗಳ ಜೊತೆಗೆ ಸಂಸ್ಕೃತಿಯನ್ನು ಕೂಡ ಬದಲಾಯಿಸಿದೆ. ವೇಗವಾಗಿ ತಂತ್ರಜ್ಞಾನ ಬದಲಾಗುತ್ತಿರುವ ಈ ಸಮಯಗಳಲ್ಲಿ ನಮ್ಮ ಮೇಲೆ ಅಗಾಧ ಪ್ರಭಾವ ಬೀರುತ್ತಿದೆ, ಅದಕ್ಕೆ ತಕ್ಕಂತೆ ನಾವು ಆಧುನೀಕರಣವಾಗುತ್ತಿರಬೇಕು ಎಂದರು. ನಾವು ಯಾವಾಗಲೂ, ಯಾವ ಪರಿಸ್ಥಿತಿಗೂ ಪ್ರಸ್ತುತವಾಗಿ ಉಳಿಯಲು ಕೌಶಲ್ಯ, ಮರು ಕೌಶಲ್ಯ, ಹೆಚ್ಚು ಕೌಶಲ್ಯ ಹೊಂದಬೇಕಾಗಿರುವುದು ಯಶಸ್ಸಿನ ಮೂಲ ಮಂತ್ರವಾಗಿದೆ. ಹೊಸ ಕೌಶಲ್ಯಗಳನ್ನು ಕಲಿಯುತ್ತಿರಬೇಕು, ಆ ಮೂಲಕ ನಮ್ಮ ಅಗತ್ಯತೆಯ ಮೌಲ್ಯಗಳನ್ನು ಬೆಳೆಸುತ್ತಾ ಹೋಗಬೇಕು. ನಮ್ಮ ದಿನನಿತ್ಯದ ಜೀವನದಲ್ಲಿ ಕೆಲಸ, ಕೌಶಲ್ಯಗಳ ಜೊತೆ ಹೊಸದನ್ನು ಕಲಿಯುತ್ತಾ ಹೋಗಿ, ಕೌಶಲ್ಯದ ಮಟ್ಟವನ್ನು ಬೆಳೆಸಿಕೊಳ್ಳುತ್ತಾ ಹೋದರೆ ಆಗ ನಾವು ಯಾವ ಕಾಲಕ್ಕೂ ಸಲ್ಲುವವರಾಗಿ, ಯಾವತ್ತಿಗೂ ಪ್ರಸ್ತುತವಾಗುಳಿಯುತ್ತೇವೆ ಎಂದು ಯುವಜನತೆಗೆ ಕಿವಿಮಾತು ಹೇಳಿದರು.
ಕಾಶ್ಮೀರದಲ್ಲಿ ಬಿಜೆಪಿ ಸದಸ್ಯನ ಅಪಹರಣ
ಶ್ರೀನಗರ, ಜು. 15: ಉತ್ತರ ಕಾಶ್ಮೀರದ ಸೊಪೋರ್‍ನಲ್ಲಿ ಬುಧವಾರ ಬೆಳಿಗ್ಗೆ ಬಿಜೆಪಿ ಸದಸ್ಯ ಮತ್ತು ವಾಟರ್‍ಗಮ್ ಮುನ್ಸಿಪಲ್ ಕಮಿಟಿಯ ಉಪಾಧ್ಯಕ್ಷ ಮೆರಾಜ್-ಉದ್-ದಿನ್ ಮಲ್ಲಾ ಅವರನ್ನು ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದಾರೆ. ಮಲ್ಲಾ ಅವರನ್ನು ಪತ್ತೆಹಚ್ಚಲು ಬೃಹತ್ ಪ್ರಮಾಣದ ಶೋಧಕಾರ್ಯ ನಡೆಯುತ್ತಿದೆ. ಹಲವಾರು ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಬಂಡಿಪೋರಾ ಜಿಲ್ಲೆಯಲ್ಲಿ ಬಿಜೆಪಿ ನಾಯಕ ವಾಸಿಮ್ ಬ್ಯಾರಿ, ಅವರ ತಂದೆ ಮತ್ತು ಸಹೋದರನನ್ನು ಭಯೋತ್ಪಾದಕರು ಕೊಂದ ಕೆಲವೇ ದಿನಗಳ ನಂತರ ಈ ಘಟನೆ ನಡೆದಿದೆ. ವಾಸಿಮ್ ಬ್ಯಾರಿ ಅವರ ಕುಟುಂಬ ಸದಸ್ಯರ ಹತ್ಯೆ ಲಷ್ಕರ್-ಎ-ತೋಯಿಬಾ ಸಂಘಟನೆಯ ಒಂದು ಪೂರ್ವ ಯೋಜಿತ ಕೃತ್ಯವೆಂದು ಪೊಲೀಸರು ದೂಷಿಸಿದ್ದರು. ಬಿಜೆಪಿ ಸದಸ್ಯರ ಹತ್ಯೆಯ ನಂತರ, ಅನೇಕ ರಾಜಕೀಯ ಮುಖಂಡರು ಮತ್ತು ಕಾರ್ಯ ಕರ್ತರು ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವವರಿಗೆ ಭದ್ರತೆ ನೀಡುವಂತೆ ಒತ್ತಾಯಿಸಿದ್ದಾರೆ. ಸಧ್ಯ ಅಪಹರಣಕ್ಕೆ ಸಂಬಂಧಿಸಿದ ಸಂಗತಿಗಳು ಮತ್ತು ವಿವರಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸುರೇಶ್‍ಕುಮಾರ್ ಟ್ವಿಟರ್ ಖಾತೆ ನಕಲಿ
ಬೆಂಗಳೂರು, ಜು. 15: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಅವರ ಹೆಸರಿನಲ್ಲಿ ನಕಲಿ ಟ್ವಿಟರ್ ಖಾತೆ ಸೃಷ್ಟಿಸಿ ತಪ್ಪು ಸಂದೇಶವನ್ನು ಹರಿಬಿಟ್ಟಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಲಾಗಿದೆ. ಮಂಗಳವಾರ ಸಚಿವರು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ಫಲಿತಾಂಶ ಘೋಷಣೆ ಮಾಡುತ್ತಿದ್ದ ಸಂದರ್ಭ ಸಚಿವರ ಹೆಸರಿನ ನಕಲಿ ಟ್ವಿಟರ್ ಖಾತೆಯಲ್ಲಿ ‘ಇಂಗ್ಲಿಷ್ ವಿಷಯದಲ್ಲಿ ವಿದ್ಯಾರ್ಥಿಗಳಿಗೆ 26 ಗ್ರೇಸ್ ಅಂಕಗಳನ್ನು ನೀಡುವ ಕುರಿತು ಮೌಲ್ಯಮಾಪಕರಿಗೆ ಸೂಚಿಸಲಾಗಿದೆ ಎಂಬ ಸುಳ್ಳು ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಸೈಬರ್ ಕ್ರೈಂ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಬಾಕಿ ಉಳಿದಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ಪರೀಕ್ಷೆ ಜೂ. 18 ರಂದು ನಡೆದಿದ್ದು, ರಾಜ್ಯದ 20 ಮೌಲ್ಯ ಮಾಪನ ಕೇಂದ್ರದಲ್ಲಿ ಜೂ. 20 ರಿಂದ ಜು. 7 ರವರಗೆ ನಡೆದಿದ್ದು, ಜು. 4 ರಂದು ಫಲಿತಾಂಶ ಪ್ರಕಟಿಸಲಾಗಿದೆ. ದೂರಿನ ಜೊತೆ ನಕಲಿ ಟ್ವಿಟರ್ ಖಾತೆಯಲ್ಲಿ ಹರಿಯಬಿಟ್ಟ ಸಂದೇಶದ ಪ್ರತಿಯನ್ನು ಲಗತ್ತಿಸಿದ್ದು, ಈ ನಕಲಿ ಸಂದೇಶದಿಂದ ರಾಜ್ಯದ ಪಿಯು ವಿದ್ಯಾರ್ಥಿಗಳು, ಪೋಷಕರು, ಇಲಾಖೆಯ ಅಧಿಕಾರಿಗಳಲ್ಲಿ ಆತಂಕ, ಗೊಂದಲಗಳಿಗೆ ಕಾರಣವಾಗಿದ್ದು, ಇದು ಇಲಾಖೆಗೆ ಮುಜುಗರದ ಸನ್ನಿವೇಶವನ್ನು ಸೃಷ್ಟಿಸಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆಯುಷ್ ವೈದ್ಯರ ಸಾಮೂಹಿಕ ರಾಜೀನಾಮೆ
ಬೆಂಗಳೂರು, ಜು. 15: ಗುತ್ತಿಗೆ ಆಯುಷ್ ವೈದ್ಯರುಗಳ ವೇತನ ತಾರತಮ್ಯ, ಸೇವಾ ಭದ್ರತೆ ಹಾಗೂ ಇತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ನಿರ್ಲಕ್ಷ್ಯ ವಹಿಸಿದ ಸರ್ಕಾರಕ್ಕೆ ಆಯುಷ್ ವೈದ್ಯರು ಸಾಮೂಹಿಕ ರಾಜೀನಾಮೆ ಸಲ್ಲಿಸುವ ಮೂಲಕ ಬಿಸಿಮುಟ್ಟಿಸಿದ್ದಾರೆ. ರಾಜ್ಯದ 2000 ಗುತ್ತಿಗೆ ವೈದ್ಯರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದು, ಆಯುಷ್ ವೈದ್ಯರನ್ನು ಬೆಂಬಲಿಸಿ 27000 ಖಾಸಗಿ ವೈದ್ಯರು ತಮ್ಮ ಕ್ಲಿನಿಕ್‍ಗಳನ್ನು ಮುಚ್ಚಿ ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಆಯುಷ್ ವೈದ್ಯಕೀಯ ವಿದ್ಯಾರ್ಥಿಗಳು, ಆಯುಷ್ ಫೆಡರೇಷನ್ ಆಫ್ ಇಂಡಿಯಾ ಸಹ ವೈದ್ಯರ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ತಾ. 5 ರಿಂದಲೇ ಕಪ್ಪು ಪಟ್ಟಿ ಧರಿಸಿ ಹೋರಾಟಕ್ಕಿಳಿದಿದ್ದ ಆಯುಷ್ ವೈದ್ಯರು ಸರ್ಕಾರಕ್ಕೆ 7 ಗಡವು ನೀಡಿದ್ದರು. ತಾ. 14ರ ಸಂಜೆಯವರೆಗೂ ಸರ್ಕಾರ ಬೇಡಿಕೆ ಈಡೇರಿಸದಿದ್ದಲ್ಲಿ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದರು. ನಿನ್ನೆ ಸಂಜೆಯವರೆಗೂ ಸರ್ಕಾರದಿಂದ ಯಾವುದೇ ಆದೇಶ, ಸಂದೇಶ ಹೊರಬೀಳದ ಹಿನ್ನೆಲೆ ಎಲ್ಲಾ 2000 ಗುತ್ತಿಗೆ ಆಯುಷ್ ವೈದ್ಯರು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.
ಮನೆ ಬಾಗಿಲಿಗೆ ಬರಲಿದೆ ಕಷಾಯ !
ಬೆಂಗಳೂರು, ಜು. 15: ಬೆಂಗಳೂರಿನಲ್ಲಿ ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಕಷಾಯ ಕುಡಿಯುವವರ ಸಂಖ್ಯೆ ಹೆಚ್ಚಾಗಿದೆ, ಪೊಲೀಸ್ ಠಾಣೆಗಳಲ್ಲಿ ಪೊಲೀಸರು ಸಹ ಇದನ್ನು ಕುಡಿಯುತ್ತಿದ್ದಾರೆ. ಹೀಗಾಗಿ ಜನರ ಮನೆಬಾಗಿಲಿಗೆ ತಲುಪಿಸಲು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು ಮಸಾಲೆಯುಕ್ತ ಪಾನೀಯವನ್ನು ತಯಾರಿಸಲು ಬೇಕಾದ ಪದಾರ್ಥಗಳನ್ನು ಒಳಗೊಂಡಿರುವ ಪ್ಯಾಕೇಜ್ ತಲುಪಿಸಲು ಇಂಡಿಯಾ ಪೋಸ್ಟ್‍ನೊಂದಿಗೆ ಕೈ ಜೋಡಿಸಿದೆ. ಕಷಾಯ ತಯಾರಿಸಲು ಬೇಕಾದ 7 ಪದಾರ್ಥಕಗಳಾದ 250 ಗ್ರಾಂ ಮೆಣಸು, ಒಣ ಶುಂಠಿ, ಜೀರಿಗೆ, ಲವಂಗ, ಬೆಳ್ಳುಳ್ಳಿ ಮತ್ತು ಅರಿಶಿನ ಜೊತೆಗೆ ಒಂದುವರೆ ಕೆ.ಜಿ. ಬೆಲ್ಲ, ಈ ಕಷಾಯದ ಪುಡಿ ತೂಕ 3 ಕೆ.ಜಿ. ಇದ್ದು ಸುಮಾರು ರೂ. 600 ವೆಚ್ಚ ತಗುಲಲಿದೆ. ಇವೆಲ್ಲಾ ಮಲೆನಾಡು ಭಾಗದ ರೈತರು ಪೂರೈಕೆ ಮಾಡಲಿದ್ದು, ಸ್ವತಃ ಅವರೆ ಬೆಳೆದು ಪೂರೈಸಲಿದ್ದಾರೆ. ಹೀಗಾಗಿ ರೈತರಿಗೆ ಇದೊಂದು ಮಾರಾಟ ಮಾಡಲು ಉತ್ತಮ ವೇದಿಕೆಯಾಗಿದೆ ಎಂದು ಕೆಎಸ್‍ಎಂಡಿಎಂಸಿ ಮ್ಯಾನೇಜಿಂಗ್ ಡೈರೆಕ್ಟರ್ ಸಿ.ಜಿ. ನಾಗರಾಜ್ ಹೇಳಿದ್ದಾರೆ.
ಜಿಯೋ ಸಂಸ್ಥೆಯಲ್ಲಿ ಗೂಗಲ್ ಹೂಡಿಕೆ
ನವದೆಹಲಿ, ಜು. 15: ಜಿಯೋ ಸಂಸ್ಥೆಯಲ್ಲಿ ಗೂಗಲ್ ರೂ. 33,000 ಕೋಟಿ ಹೂಡಿಕೆ ಮಾಡಲಿದ್ದು, ರಿಲಾಯನ್ಸ್ ಇಂಡಸ್ಟ್ರೀಸ್ ಟೆಕ್ನಾಲಜಿಯಲ್ಲಿ ಸಂಸ್ಥೆಯ ಶೇ. 7.7 ರಷ್ಟು ಪಾಲುದಾರಿಕೆ ಪಡೆಯಲಿದೆ ಎಂದು ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. ತಾ. 15 ರಂದು ನಡೆದ ರಿಲಾಯನ್ಸ್‍ನ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ, 2021 ರ ವೇಳೆಗೆ ಗೂಗಲ್ ಸಹಯೋಗದಲ್ಲಿ ಭಾರತದಲ್ಲೇ 5 ಜಿ ನೆಟ್ವರ್ಕ್‍ಗೆ ಬೆಂಬಲಿಸುವ ಸ್ಮಾರ್ಟ್ ಫೋನ್ ಬಿಡುಗಡೆಯನ್ನೂ ಘೋಷಿಸಿದ್ದಾರೆ. ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಹೂಡಿಕೆ ಮಾಡುತ್ತಿರುವ ಗೂಗಲ್‍ನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದೇವೆ ಎಂದು ಅಂಬಾನಿ ತಿಳಿಸಿದ್ದಾರೆ.