ಸಿದ್ದಾಪುರ, ಜು. 15: ಸಿದ್ದಾಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಸಿದ್ದಾಪುರದಲ್ಲಿ ಶನಿವಾರ ಹಾಗೂ ಭಾನುವಾರದಂದು ವರ್ತಕರು ಲಾಕ್ಡೌನ್ ಮಾಡಲು ನಿರ್ಧರಿಸಿದ್ದಾರೆ ಎಂದು ಸಿದ್ದಾಪುರ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಕೆ ಶ್ರೀನಿವಾಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಿದ್ದಾಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಸಿದ್ದಾಪುರದಲ್ಲಿ ಭಾನುವಾರ ಸಂತೆಯನ್ನು ರದ್ದುಪಡಿಸಿರುವುದರಿಂದ ಸೋಮವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 6 ರಿಂದ ಅಪರಾಹ್ನ 2 ಗಂಟೆ ತನಕ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಇದಲ್ಲದೆ ಭಾನುವಾರ ಸಂತೆಯನ್ನು ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಸಿದ್ದಾಪುರ ಸುತ್ತಮುತ್ತ ಕಾರ್ಮಿಕರು ಅಧಿಕ ಇರುವ ಕಾರಣ ಅವರಿಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸುವ ನಿಟ್ಟಿನಲ್ಲಿ ಸೋಮವಾರದಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ವರ್ತಕರು ಅಂಗಡಿ ತೆರೆಯಲು ತೀರ್ಮಾನಿಸಿದ್ದಾರೆ ಎಂದು ಮಾಹಿತಿ ನೀಡಿದರು. ಅಂಗಡಿಯಲ್ಲಿ ಎಲ್ಲಾ ವರ್ತಕರು ಸ್ಯಾನಿಟೈಜರ್ ಬಳಸುವಂತೆ ಹಾಗೂ ಗ್ರಾಹಕರು ಕೂಡ ಮಾಸ್ಕ್ ಧರಿಸಿಕೊಂಡು ಬರುವಂತೆ ಕೋರಿದರು. ಪಟ್ಟಣದ ಸುತ್ತಮುತ್ತಲ ಎಲ್ಲಾ ವರ್ತಕರು ತಮ್ಮೊಂದಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು.

ಈ ಸಂಬಂಧ ಶ್ರೀ ನಾರಾಯಣ ಗುರುಗಳ ಸಭಾಂಗಣದಲ್ಲಿ ವರ್ತಕರ ಸಭೆ ನಡೆಸಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಶ್ರೀನಿವಾಸ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸ್ಥಾನೀಯ ಸಮಿತಿ ಉಪಾಧ್ಯಕ್ಷ ರಹೂಫ್ ಹಾಜಿ, ಕಾರ್ಯದರ್ಶಿ ರೋಹಿತ್, ಜಿಲ್ಲಾ ನಿರ್ದೇಶಕ ಜೋಸೆಫ್ ಸ್ಯಾಮ್ ಹಾಜರಿದ್ದರು.