ಕಣಿವೆ, ಜು. 13: ನಾಡಿನ ಕಾವೇರಿ ಕಣಿವೆ ಅಚ್ಚುಕಟ್ಟು ವ್ಯಾಪ್ತಿ ಯಲ್ಲಿನ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹುಲುಗುಂದ ಬಳಿಯಿ ರುವ ಹಾರಂಗಿ ಜಲಾಶಯ ಹೊರ ಜಿಲ್ಲೆಯ ರೈತರಿಗೆ ಕಾಮಧೇನು ವಾಗಿದ್ದು ಜಿಲ್ಲೆಯ ರೈತರಿಗೆ ಮಾತ್ರ ಇದ್ದೂ ಇಲ್ಲದಂತಿದೆ. ಅಂದರೆ ಈ ಜಲಾಶಯವನ್ನು ನಿರ್ಮಿಸಲು ಸುಮಾರು ಹನ್ನೊಂದು ಗ್ರಾಮಗಳ ಸಾವಿರಾರು ರೈತರು ಮನೆ ಮಠ, ಆಸ್ತಿ ಪಾಸ್ತಿಯನ್ನು ತ್ಯಾಗ ಮಾಡಿದ್ದಾರೆ. ಸರಿಸುಮಾರು 162 ಚದರ ಮೈಲಿಗಳಷ್ಟು ವಿಶಾಲವಾದ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಜಲಾಶಯ 8500 ದಶಲಕ್ಷ ಘನ ಅಡಿಗಳ ನೀರಿನ ಶೇಖರಣಾ ಸಾಮಥ್ರ್ಯ ಹೊಂದಿದೆ. ನದಿಯ ತಳಮಟ್ಟ ಸಮುದ್ರದ ಮಟ್ಟದಿಂದ 2715 ಅಡಿಗಳಿದ್ದು, ಪೂರ್ಣ ಜಲಾಶಯದ ಮಟ್ಟ ಸಮುದ್ರ ಮಟ್ಟದಿಂದ 2859 ಅಡಿಗಳಿದೆ. ಗರಿಷ್ಠ ಮಟ್ಟ 2869 ಅಡಿಗಳು. ಈ ಜಲಾಶಯವನ್ನು ನಿರ್ಮಿಸಲು ಮುಳುಗಡೆಯಾದ ಭೂ ಪ್ರದೇಶ ಒಟ್ಟು 4717 ಎಕರೆ. ಅಂದರೆ ನಾಕೂರು, ಹರದೂರು, ಬೆಟಗೇರಿ, ಅಂಜನಗೇರಿ, ಯಡವಾರೆ, ಹುಲುಗುಂದ, ಹಾರಂಗಿ, ಜಂಬೂರು, ಸಜ್ಜಳ್ಳಿ ಮೊದಲಾದ ಹನ್ನೊಂದು ಗ್ರಾಮಗಳ ಜನ ತಮ್ಮ ಬದುಕನ್ನೇ ತ್ಯಾಗ ಮಾಡಿದ್ದಾರೆ. ಅಂದರೆ ಈ ಜನರ ಅಪಾರ ಆಸ್ತಿ ಪಾಸ್ತಿ , ಫಲವತ್ತಾದ ಕೃಷಿ ಭೂಮಿ ಎಲ್ಲವನ್ನು ಸ್ವಾಧೀನಪಡಿಸಿಕೊಂಡ ಸರ್ಕಾರ ಜಲಾಶಯದ ಎಡ ಹಾಗೂ ಬಲ ದಂಡೆಯಲ್ಲಿನ ಯಡವನಾಡು ಮತ್ತು ಅತ್ತೂರು ಎಂಬ ಗ್ರಾಮಗಳಲ್ಲಿ ಬದಲೀ ವ್ಯವಸ್ಥೆ ಕಲ್ಪಿಸಿತ್ತು. ಅತ್ತೂರು ಗ್ರಾಮ ನಿರ್ಮಾಣಕ್ಕೆ 1300 ಎಕರೆ ಅರಣ್ಯ ಪ್ರದೇಶವನ್ನು ಯಡವನಾಡು ಗ್ರಾಮ ನಿರ್ಮಾಣಕ್ಕೆ 1300 ಎಕರೆ ಅರಣ್ಯವನ್ನು ಕಡಿದು ಅಷ್ಟೂ ಗ್ರಾಮಗಳ ನಿರ್ಗತಿಕರಿಗೆ ಮನೆ ಕಟ್ಟಿಕೊಳ್ಳಲು ಮತ್ತು ಕೃಷಿ ಮಾಡಲು ಭೂಮಿಯನ್ನು ಒದಗಿಸಿತ್ತು. ಆದರೆ ಈ ಮಂದಿಯ ಅತ್ತೂರು ಹಾಗೂ ಯಡವನಾಡು ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಮಾರ್ಪಡಿಸುವಲ್ಲಿ ಸರ್ಕಾರಗಳು ತೆಗೆದುಕೊಂಡ ಅವಧಿ ಬರೋಬ್ಬರಿ 48 ವರ್ಷಗಳು. ಅಂದರೆ ಶಾಸಕ ರಂಜನ್ ಅವರ ಇಪ್ಪತ್ತು ವರ್ಷಗಳ ಹೋರಾಟದ ಫಲವಾಗಿ ಕಳೆದ ಎರಡು ವರ್ಷಗಳ ಹಿಂದಷ್ಟೇ 2018 ರಲ್ಲಿ ಸಿದ್ದರಾಮಯ್ಯ ಸರ್ಕಾರ ಈ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಅಧಿಕೃತಗೊಳಿಸಿತ್ತು. ಅಲ್ಲಿಯವರೆಗೂ ಈ ಮಂದಿಗೆ ಸರ್ಕಾರದ ಸೌಲಭ್ಯಗಳು ಮರೀಚಿಕೆಯೇ ಆಗಿದ್ದವು. ಆದಾಗ್ಯೂ ಈಗಲೂ ಸುತ್ತಲ ಸುಂದರನಗರ, ಯಡವನಾಡು, ಅತ್ತೂರು, ಬೆಂಡೇಬೆಟ್ಟ ಅರಣ್ಯಗಳ ನಡುವೆ ಈ ಗ್ರಾಮಗಳನ್ನು ನಿರ್ಮಾಣ ಮಾಡಿದ್ದು ಹಿಂದಿನಿಂದಲೂ ಮತ್ತು ಇಂದಿಗೂ ಕಾಡಾನೆಗಳ ಕಾಟದಿಂದ ಈ ಜನ ಬೇಸತ್ತು ಹೋಗಿದ್ದಾರೆ. ಹಾರಂಗಿ ಜಲಾಶಯದಿಂದ ಇಂತಹ ತ್ಯಾಗಿಗಳಿಗೆ ಯಾವುದೇ ಅನುಕೂಲ ಈಗಲೂ ಇಲ್ಲ. ಆದರೆ, ಹಾಸನ ಮತ್ತು ಮೈಸೂರು ನೆರೆ ಜಿಲ್ಲೆಗಳ ರೈತರಿಗೆ ವರದಾನವಾಗಿದೆ ಈ ಜಲಾಶಯ.
ಜಲಾಶಯಕ್ಕೆ ಭೂಮಿ ಪೂಜೆ : ಜಲಾಶಯ ನಿರ್ಮಾಣಕ್ಕಾಗಿ ಕಳೆದ 50 ವರ್ಷಗಳ ಹಿಂದೆ 1969ರಲ್ಲಿ ಭೂಮಿ ಪೂಜೆಯನ್ನು ಹುಲುಗುಂದ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರು ಭೂಮಿ ಪೂಜೆಗೆ ನೆರವೇರಿಸಬೇಕಾದ ಕ್ಷಣವದು. (ಅಂದು ಶುಭ) ಶುಕ್ರವಾರವಾಗಿತ್ತು. ಅಷ್ಟರಲ್ಲೇ ಸ್ಥಳೀಯರ ತಂಡವೊಂದು ಭೂಮಿ ಪೂಜೆಗೆ ಅಣಿಯಾಗಿದ್ದ ಸ್ಥಳಕ್ಕೆ ಏಕಾಏಕಿ ಧಾವಿಸಿ ಬಂದು, ಇಲ್ಲಿ ಯಾವ ಕಾರಣಕ್ಕೂ ಜಲಾಶಯ ನಿರ್ಮಾಣ ಆಗಕೂಡದು ಎಂದು ವಿರೋಧ ವ್ಯಕ್ತಪಡಿಸಿತಲ್ಲದೇ ಭೂಮಿ ಪೂಜೆಗೆ ಸಿದ್ದಪಡಿಸಿದ್ದ ಕಲಶವನ್ನು ಕಾಲಿನಿಂದ ಒದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಆದರೆ ತಾವು ಬಂದ ಕೆಲಸ ಮಾಡಿಯೇ ತೀರುವುದಾಗಿ ವೀರೇಂದ್ರಪಾಟೀಲ್ ಪಣತೊಟ್ಟರು. ಭವಿಷ್ಯದ ರೈತರ ಆಶಾಕಿರಣವಾಗಬೇಕಾದ ಜಲಾಶಯ ನಿರ್ಮಾಣ ಕಾಮಗಾರಿಗೆ ಅಡ್ಡಿಪಡಿಸುವುದೇ ಆದರೆ ನನ್ನ ಎದೆಗೆ ಗುಂಡು ಹಾಕಿ ಎಂದು ನೀಳಕಾಯದ ದೇಹಕ್ಕೆ ಹೊದಿಕೆಯಾಗಿದ್ದ ಕಪ್ಪು ಕೋಟನ್ನು ಬಿಚ್ಚಿದ ಪಾಟೀಲರು ಪ್ರತಿಭಟನಾಕಾರರ ಎದುರು ಎದೆಯೊಡ್ಡಿ ನಿಂತರಂತೆ. ಬಳಿಕ ಪೆÇೀಲೀಸರು ಪ್ರತಿಭಟನಾಕಾರರನ್ನು ಸ್ಥಳದಿಂದ ಚದುರಿಸಿ ಭೂಮಿ ಪೂಜೆಗಿದ್ದ ಅಡ್ಡಿಯನ್ನು ನಿವಾರಿಸಿದರಂತೆ. ಹಾಗಾಗಿ ಇಂದು ರಾಜ್ಯದ ದಕ್ಷಿಣ ಭಾಗದಲ್ಲಿ ನಿರ್ಮಾಣಗೊಳ್ಳುವ ಮೂಲಕ ನಾಡಿನ ಜನ ಹಾಗೂ ಜೀವಕೋಟಿಯ ದಣಿವನ್ನಾರಿಸುತ್ತಿರುವ ಹೇಮಾವತಿ, ಕಬಿನಿ ಹಾಗೂ ಹಾರಂಗಿ ಜಲಾಶಯಗಳ ನೀರಿನ ಪ್ರಯೋಜನ ಪಡೆಯುವ ರೈತರ ಮನೆ-ಮನಗಳಲ್ಲಿ ಆ ಗಟ್ಟಿ ಧ್ವನಿಯ ಧಣಿ ವೀರೇಂದ್ರ ಪಾಟೀಲರ ಸ್ಮರಣೆ ಇದೆ.
ಜಲಾಶಯದ ಪ್ರಯೋಜನ : 2859 ಅಡಿ ನೀರು ಸಂಗ್ರಹ ಸಾಮಥ್ರ್ಯ ಜಲಾಶಯದ ಶೇ. 90 ರಷ್ಟು ನೀರಿನ ಪ್ರಯೋಜನವನ್ನು ಪಡೆವ ಜಿಲ್ಲೆಗಳು ಮೈಸೂರು, ಹಾಸನ ಹಾಗೂ ಕೊಡಗು ಜಿಲ್ಲೆಯ ಕೇವಲ ಮೂರು ಗ್ರಾಮ ಪಂಚಾಯತಿಗಳ 5400 ಎಕರೆ ಭೂ ಪ್ರದೇಶಕ್ಕೆ ಮಾತ್ರ ಜಲಾಶಯದ ನೀರಿನ ಅನುಕೂಲವಿದೆ. ಆದರೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ 12382 ಎಕರೆ ಭೂಮಿಗೆ ನೀರುಣಿಸಿದರೆ, ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ 66800 ಎಕರೆ ಭೂಪ್ರದೇಶಕ್ಕೆ ನೀರುಣಿಸುತ್ತಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ 19800 ಎಕರೆಗೆ, ಇನ್ನು ಕೆಆರ್ ನಗರ ತಾಲೂಕಿನ 5695 ಎಕರೆ ಭೂಮಿಗೆ ನೀರುಣಿಸುತ್ತಿದೆ. ಇಷ್ಟೂ ಭೂಪ್ರದೇಶದಿಂದ ವಾರ್ಷಿಕ 42,670 ಟನ್ ಭತ್ತವನ್ನು ಉತ್ಪಾದಿಸುವ ಗುರಿಯನ್ನು ನೀರಾವರಿ ಇಲಾಖೆ ಹೊಂದಿದೆ. ಆದರೆ 50 ವರ್ಷಗಳ ಹಿಂದೆ ನಿರ್ಮಾಣಗೊಂಡ ಜಲಾಶಯ ಯೋಜನೆ ಇದೀಗ ಅಷ್ಟೇ ವೈಫಲ್ಯತೆ ಗಳನ್ನು ಹೊಂದಿದೆ. ರೈತರ ಉಪಯೋಗಕ್ಕೆ ಹಾಗೂ ಅನುಕೂಲಕ್ಕೆ ತನ್ನನ್ನು ತೆರೆದುಕೊಳ್ಳಬೇಕಾದ ಜಲಾಶಯ ಯೋಜನೆ ಇಂದು ರಾಜಕಾರಣಿಗಳು, ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಉದ್ಧಾರಕ್ಕಾಗಿ ಮಾತ್ರ ಎಂಬಂತಾಗಿರು ವುದು ದುರ್ದೈವದ ಸಂಗತಿ. -ಕೆ.ಎಸ್. ಮೂರ್ತಿ