ಪದ್ಮನಾಭ ದೇವಾಲಯ ರಾಜಮನೆತನಕ್ಕೆ

ನವದೆಹಲಿ, ಜು. 13: ಕೇರಳ ರಾಜ್ಯದ ತಿರುವನಂತಪುರದಲ್ಲಿರುವ ಪ್ರಖ್ಯಾತ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತದ ಹಕ್ಕು ತಿರುವಾಂಕೂರು ರಾಜಮನೆತನಕ್ಕೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಮಲ್ಹೋತ್ರಾ ಮತ್ತು ಯುಯು ಲಲಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಇಂದು ಈ ತೀರ್ಪನ್ನು ಪ್ರಕಟಿಸಿದ್ದು, ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಆಡಳಿತಾತ್ಮಕ ಸಮಿತಿ ದೇವಸ್ಥಾನದ ಆಡಳಿತ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ ಎಂದು ಹೇಳಿದೆ. ಕೇರಳ ಹೈಕೋರ್ಟ್ 2011ರ ಜನವರಿ 31ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ತಿರುವಾಂಕೂರು ರಾಜ ಮನೆತನದ ಕಾನೂನು ಪ್ರತಿನಿಧಿಗಳು ಸೇರಿದಂತೆ ಹಲವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ.

ಸಿಬಿಎಸ್‍ಇ ಪರೀಕ್ಷೆಯಲ್ಲಿ ಶೇ.88.78 ತೇರ್ಗಡೆ

ನವದೆಹಲಿ, ಜು.13 : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‍ಇ)ಯ 12ನೇ ತರಗತಿ ಫಲಿತಾಂಶ ಪ್ರಕಟಗೊಂಡಿದೆ. ಒಟ್ಟಾರೆ ಶೇಕಡಾ 88.78ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷಕ್ಕಿಂತ ವಿದ್ಯಾರ್ಥಿಗಳ ತೇರ್ಗಡೆ ಫಲಿತಾಂಶ ಶೇಕಡಾ 5.38ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಒಟ್ಟಾರೆ ಫಲಿತಾಂಶ ಶೇಕಡಾ 83.40ರಷ್ಟಾಗಿತ್ತು. ಕೇರಳದ ತಿರುವನಂತಪುರ ವಲಯದಲ್ಲಿ ಅತಿಹೆಚ್ಚು ತೇರ್ಗಡೆ ಫಲಿತಾಂಶ ಶೇಕಡಾ 97.67 ದಾಖಲಾಗಿದೆ. ಪಾಟ್ನಾದಲ್ಲಿ ಅತಿ ಕಡಿಮೆ ಫಲಿತಾಂಶ ಶೇಕಡಾ 74.57 ದಾಖಲಾಗಿದೆ. ಬೆಂಗಳೂರು ವಲಯದಲ್ಲಿ ಶೇಕಡಾ 97.05ರಷ್ಟು ಫಲಿತಾಂಶ ಬಂದಿದ್ದು ಅದು ದೇಶದ ಒಟ್ಟಾರೆ ಫಲಿತಾಂಶ ಶೇಕಡಾ 88.78ಕ್ಕಿಂತ ಹೆಚ್ಚಾಗಿದೆ. ದೇಶದ ಒಟ್ಟಾರೆ 16 ವಲಯಗಳಲ್ಲಿ ತಿರುವನಂತಪುರದ ನಂತರ ಬೆಂಗಳೂರು ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಚೆನ್ನೈ ಪಶ್ಚಿಮ ಮತ್ತು ಪೂರ್ವ ವಲಯಗಳು ಇವೆ. ಪ್ರಸಕ್ತ ಸಾಲಿನಲ್ಲಿ 12 ಲಕ್ಷದ 3 ಸಾವಿರದ 595 ಮಂದಿ ಪರೀಕ್ಷೆಗೆ ದಾಖಲಾತಿ ಪಡೆದುಕೊಂಡು 11 ಲಕ್ಷದ 92 ಸಾವಿರದ 961 ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ಕೋವಿಡ್ ಚಿಕಿತ್ಸಾ ಲಸಿಕೆಗೆ ಅನುಮತಿ

ಬೆಂಗಳೂರು, ಜು.13 : ಬೆಂಗಳೂರು ಮೂಲದ ಬಯೋಫಾರ್ಮಾಟಿಕಲ್ ವಲಯದ ಪ್ರಸಿದ್ಧ ಬಯೋಕಾನ್ ಸಂಸ್ಥೆಯು ಸಿದ್ಧಪಡಿಸಿರುವ “ಇಟೋಲಿಝುಮಬ್” ಲಸಿಕೆಯನ್ನು ಮಧ್ಯಮ ಹಾಗೂ ತೀವ್ರ ಭಾದಿತ ಕೊರೊನಾ ವೈರಸ್ ಸೋಂಕಿತರ ಚಿಕಿತ್ಸೆಗೆ ಬಳಸುವುದಕ್ಕೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ. 25ಎಂಜಿಯ 5 ಎಂಎಲ್ ಇಂಜೆಕ್ಷನ್ ನಿಂದ ಕೋವಿಡ್-19 ನಿಂದ ತೀವ್ರ ಹಾಗೂ ಮಧ್ಯಮ ಭಾದಿತ ರೋಗಿಗಳಿಗೆ ಚಿಕಿತ್ಸೆ ನೀಡಬಹುದಾಗಿದೆ. ಪ್ರತಿ ಬಾಟಲಿ ಬೆಲೆ 8 ಸಾವಿರ ರೂ.ಆಗಿರುತ್ತದೆ. ಇಂತಹ ನಾಲ್ಕು ಬಾಟಲಿಗಳನ್ನು ನೀಡಬೇಕಾಗುತ್ತದೆ. ಮಧ್ಯಮ ಹಾಗೂ ತೀವ್ರ ಕೋವಿಡ್-19 ಭಾದಿತ ರೋಗಿಗಳ ಚಿಕಿತ್ಸೆಗಾಗಿ ಮೊದಲ ನೋವಾಲ್ ಬಯೋಲಾಜಿಕಲ್ ಥೆರಪಿಯನ್ನುನೀಡಲು ಡಿಸಿಐಜಿ ಅನುಮೋದನೆ ನೀಡಿದ್ದು, “ಇಟೋಲಿಝುಮಬ್” ಹಲವರ ಜೀವವನ್ನು ಉಳಿಸಿದೆ. ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಡಿಸಿಜಿಐ ಅನುಮತಿ ನೀಡಿದೆ ಎಂದು ಬಯೋಕಾನ್ ಸಂಸ್ಥೆಯ ಎಕ್ಸಿಕ್ಯೂಟಿವ್ ಚೇರ್ ಪರ್ಸನ್ ಕಿರಣ್ ಮಜುಂದಾರ್ ಷಾ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಜು.31ರ ವರೆಗೆ ಬಸ್‍ಗಳಿಲ್ಲ

ಚೆನ್ನೈ, ಜು.13 : ತಮಿಳುನಾಡು ಸರ್ಕಾರ ರಾಜ್ಯದಲ್ಲಿನ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರದ ಮೇಲಿನ ನಿರ್ಬಂಧವನ್ನು ಜು.31ರ ವರೆಗೆ ವಿಸ್ತರಿಸಿ ಸೋಮವಾರ ಆದೇಶ ಹೊರಡಿಸಿದೆ. ಕೊರೊನಾ ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಯುವುದಕ್ಕಾಗಿ ತಮಿಳುನಾಡಿನಲ್ಲಿ ಜುಲೈ 15ರ ವರೆಗೆ ಸರ್ಕಾರಿ ಮತ್ತು ಖಾಸಗಿ ಬಸ್ ಸಂಚಾರವನ್ನು ನಿಷೇಧಿಸಲಾಗಿತ್ತು. ಇದೀಗ ಅದನ್ನು ಜುಲೈ 31ರ ವರೆಗೆ ವಿಸ್ತರಿಸಲಾಗಿದೆ. ಕ್ಯಾಬ್ ಮತ್ತು ಆಟೋ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ತಮಿಳುನಾಡು ಸರ್ಕಾರ ಮನವಿ ಮಾಡಿದೆ. ತಮಿಳುನಾಡಿನಲ್ಲಿ ಮಹಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಸೋಮವಾರ ಒಂದೇ ಬರೋಬ್ಬರಿ 4,328 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,42,798ಕ್ಕೆ ಏರಿಕೆಯಾಗಿದೆ.

ಖಾಸಗಿ ಆಸ್ಪತ್ರೆಗಳ ಲೈಸೆನ್ಸ್ ರದ್ದು !

ಬೆಂಗಳೂರು, ಜು.13 : ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚುವರಿ ಹಾಸಿಗೆಗಳ ಮೀಸಲು ವಿಚಾರದಲ್ಲಿ ಸರ್ಕಾರ ಹಾಗೂ ಖಾಸಗಿ ಆಡಳಿತ ಮಂಡಳಿಗಳ ನಡುವಣ ಇನ್ನೂ ಒಮ್ಮತ ಮೂಡಿದಂತೆ ಕಾಣುತ್ತಿಲ್ಲ. ಶೇ. 50 ರಷ್ಟು ಹಾಸಿಗೆಗಳನ್ನು ಮೀಸಲು ಇಡದ ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳ ಲೈಸೆನ್ಸ್ ರದ್ದುಪಡಿಸುವಂತೆ ಉಪಮುಖ್ಯಮಂತ್ರಿ ಡಾ.ಅಶ್ವತ್ ನಾರಾಯಣ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ. ಕೋವಿಡ್-19 ಚಿಕಿತ್ಸೆ ಸಾಮಥ್ರ್ಯ ಹಾಗೂ ಸೌಲಭ್ಯ ಹೊಂದಿರುವ ಎಲ್ಲ ಖಾಸಗಿ ಆಸ್ಪತ್ರೆಗಳು ಶೇ. 50 ಹಾಸಿಗೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರ್‍ಆಗಿ ಬರುವ ಸೋಂಕಿತರಿಗೆ ಮೀಸಲಿಡಬೇಕೆಂದು ಸರ್ಕಾರ ಅದೇಶ ಹೊರಡಿಸಿದೆ. ಕೆಪಿಎಂಇ ಕಾಯ್ದೆಯಡಿ ನೋಂದಣಿಯಾದ ಆಸ್ಪತ್ರೆಗಳು, ಕೋವಿಡ್-19 ವಾರ್ಡ್‍ಆರಂಭಿಸುವುದು ಕಡ್ಡಾಯವಾಗಿದೆ. ಆದರೆ,ಈ ಆದೇಶಕ್ಕೆ ಖಾಸಗಿ ಆಸ್ಪತ್ರೆಗಳು ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ.

ಅಶೋಕ್ ಗೆಹ್ಲೋಟ್ ನಾಯಕತ್ವಕ್ಕೆ ಬೆಂಬಲ

ಜೈಪುರ, ಜು.13 : ರಾಜಸ್ಥಾನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಾಯಕತ್ವ ಬೆಂಬಲಿಸುವ ನಿರ್ಣಯ ಕೈಗೊಂಡಿದೆ. ಅಶೋಕ್ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ ಭಿನ್ನಮತ ಸ್ಫೋಟಗೊಂಡ ಬೆನ್ನಲ್ಲೇ ಇಂದು ಸಿಎಂ ಮನೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಕಾಂಗ್ರೆಸ್ ತನ್ನ ಎಲ್ಲ ಶಾಸಕರಿಗೆ ವಿಪ್‍ಜಾರಿ ಮಾಡಿ, ಶಾಸಕಾಂಗ ಸಭೆಯಲ್ಲಿ ಎಲ್ಲರೂ ಹಾಜರಾಗುವುದನ್ನು ಕಡ್ಡಾಯಗೊಳಿಸಿತ್ತು. ಹೀಗಾಗಿ ಸಭೆಯಲ್ಲಿ 96 ಶಾಸಕರು ಭಾಗಿಯಾಗಿದ್ದು, ಅಶೋಕ್ ಗೆಹ್ಲೋಟ್ ಬೆಂಬಲಿಸುವ ನಿರ್ಣಯ ಕೈಗೊಂಡಿದ್ದಾರೆ. ಸಚಿನ್ ಪೈಲಟ್ ಅವರೊಂದಿಗೆ 30ಕ್ಕೂ ಹೆಚ್ಚು ಶಾಸಕರಿದ್ದಾರೆ ಎಂದು ವರದಿಯಾಗಿತ್ತು. ಆದರೆ ಪೈಲಟ್ ಮತ್ತು ಇತರೆ 16 ಶಾಸಕರು ಮಾತ್ರ ಇಂದಿನ ಶಾಸಕಾಂಗ ಸಭೆಗೆ ಗೈರು ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತುರ್ತು ವಿಚಾರಣೆಗಳಿಗೆ ಮಾತ್ರ ಅವಕಾಶ

ಬೆಂಗಳೂರು, ಜು.13 : ಲಾಕ್ ಡೌನ್ ಅವಧಿಯಲ್ಲಿ ತುರ್ತು ಪ್ರಕರಣಗಳ ವಿಚಾರಣೆಯನ್ನು ಮಾತ್ರ ಕೈಗೆತ್ತಿಕೊಳ್ಳಲಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಜು.15 ರಿಂದ ಮುಂದಿನ ಆದೇಶದವರೆಗೂ ಹೈಕೋರ್ಟ್ ತುರ್ತು ವಿಚಾರಣೆಗಳನ್ನು ಮಾತ್ರ ನಡೆಸಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ತುರ್ತು ವಿಚಾರಣೆಗೆ ಲಿಸ್ಟಿಂಗ್ ಗೆ ಇ-ಮೇಲ್ ಮೂಲಕ ಸಲ್ಲಿಕೆ ಮಾಡಲಾದ ಮೆಮೊಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ ಎಂದು ಕೋರ್ಟ್ ನ ರಿಜಿಸ್ಟಾರ್ ಜನರಲ್ ರಾಜೇಂದ್ರ ಬದಾಮಿಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಜು.11 ರಿಂದ 9 ದಿನಗಳ ಲಾಕ್ ಡೌನ್ ವಿಧಿಸಿದೆ.

ಊರುಗಳಿಗೆ ತೆರಳಲು ನೂಕುನುಗ್ಗಲು

ಬೆಂಗಳೂರು, ಜು.13 : ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಅದನ್ನು ತಡೆಯಲು ರಾಜ್ಯ ಸರ್ಕಾರ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಮಂಗಳವಾರದಿಂದ ಒಂದು ವಾರ ಲಾಕ್ ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಜನ ಭಾರೀ ಸಂಖ್ಯೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಲು ಬಸ್ಸುಗಳಲ್ಲಿ ಪ್ರಯಾಣಿಸಲು ಭಾರೀ ಪೈಪೋಟಿ ಕಂಡು ಬಂತು. ಮೆಜಸ್ಟಿಕ್ ನಲ್ಲಿ ಪ್ರಯಾಣಿಕರ ನೂಕುನುಗ್ಗಲು ಸಹ ಉಂಟಾಗಿತ್ತು.