ಮಡಿಕೇರಿ, ಜು. 13: ಸರ್ಕಾರದ ಇತ್ತೀಚಿನ ಸುತ್ತೋಲೆಯಂತೆ ಕೋವಿಡ್-19 ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡದಂತೆ ಮುಂಜಾಗ್ರತೆ ಕ್ರಮವಾಗಿ ಕೊಡಗು ಜಿಲ್ಲೆಯಲ್ಲಿ ಯಾರೇ ವ್ಯಕ್ತಿಯ ಗಂಟಲ ದ್ರವ ಮಾದರಿಯನ್ನು ಸೋಂಕು ಪರೀಕ್ಷೆಗಾಗಿ ಪಡೆದಿದ್ದಲ್ಲಿ, ಅಂತಹ ವ್ಯಕ್ತಿಗಳ ಕೈಗೆ ಮೊಹರು ಹಚ್ಚಿ, ಪ್ರಯೋಗಾಲಯದ ವರದಿ ಬರುವವರೆಗೆ ಕಡ್ಡಾಯವಾಗಿ ಗೃಹ ಸಂಪರ್ಕ ತಡೆಯಲ್ಲಿ ಇರಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸ್ಪಷ್ಟಪಡಿಸಿದ್ದಾರೆ.ಈ ನಿಯಮಗಳನ್ನು ಉಲ್ಲಂಘಿಸಿ ಗೃಹ ಸಂಪರ್ಕ ತಡೆಯಲ್ಲಿ ಇರದೆ ಹೊರಬರುವುದು, ಸಾರ್ವಜನಿಕವಾಗಿ ತಿರುಗಾಡುತ್ತಿರುವುದು, ಕೆಲಸದ ಮೇಲೆ ತೆರಳುವುದು ಇತ್ಯಾದಿಗಳು ಕಂಡುಬಂದಲ್ಲಿ ಅಂತವರ ವಿರುದ್ದ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಇಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು, ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಮ್ಮೇಳನ ಮುಖಾಂತರ ಮಾಹಿತಿ ಪಡೆಯುವುದರೊಂದಿಗೆ, ಕೊಡಗು ಸೇರಿದಂತೆ ಆಯಾ ಜಿಲ್ಲಾಡಳಿತದಿಂದ ಕೈಗೊಂಡಿರುವ ಕೊರೊನಾ ಸೋಂಕು ತಡೆಗಟ್ಟಲು ಮಾರ್ಗಸೂಚಿ ಬಗ್ಗೆ ವರದಿ ಪಡೆಯುವ ಮೂಲಕ, ಸರಕಾರದಿಂದ ತೆಗೆದುಕೊಂಡಿರುವ ಕಾನೂನು ಕ್ರಮಗಳ ದಿಸೆಯಲ್ಲಿ ಚರ್ಚಿಸಿದ್ದಾರೆ. ಸರಕಾರದಿಂದ ಸಲಹೆ : ವೀಡಿಯೋ ಸಮ್ಮೇಳನ ಸಂದರ್ಭ ಈ ಕೆಳಗಿನ ಮಾರ್ಗಸೂಚಿ ನೀಡಲಾಗಿದೆ. ಕೋವಿಡ್ ನಿಯಂತ್ರಣ, ಕೃಷಿ ಚಟುವಟಿಕೆ, ಪ್ರವಾಹ ಪರಿಸ್ಥಿತಿಯ ಕುರಿತು ಮಾಹಿತಿ ಪಡೆಯಲು ವೀಡಿಯೋ ಕಾನ್ಫರೆನ್ಸ್ ನಡೆಸಿದ ಮುಖ್ಯಮಂತ್ರಿಗಳು ಪ್ರಮುಖವಾಗಿ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ನಡೆಸಲು ಆದ್ಯತೆ ನೀಡಿ. 1 ಲಕ್ಷ ಟೆಸ್ಟ್ ಕಿಟ್ ಖರೀದಿಸಲಾಗಿದೆ. ಈಗಾಗಲೇ ಜಿಲ್ಲೆಗಳಿಗೆ ವಿತರಿಸಲಾಗಿದ್ದು, ತುರ್ತು ಪ್ರಕರಣಗಳಲ್ಲಿ ವಿವೇಚನೆಯಿಂದ ಈ ಪರೀಕ್ಷೆ ನಡೆಸಲು ಸೂಚಿಸಲಾಯಿತು.
(ಮೊದಲ ಪುಟದಿಂದ)
ನೇಮಕಾತಿಗೆ ಸೂಚನೆ
ಕಂಟೇನ್ಮೆಂಟ್ ಝೋನ್ಗಳಲ್ಲಿ ಕಟ್ಟುನಿಟ್ಟಾಗಿ ಕ್ರಮ ವಹಿಸಬೇಕಾಗಿದೆ. ಅಲ್ಲದೆ, ಕ್ಷೇತ್ರ ಮಟ್ಟದ ಆರೋಗ್ಯ ಸಿಬ್ಬಂದಿ ಕೊರತೆ ಇರುವಲ್ಲಿ ಗುತ್ತಿಗೆ ಆಧಾರದಲ್ಲಿ 6 ತಿಂಗಳ ಅವಧಿಗೆ ನೇಮಕ ಮಾಡುವಂತೆ ಸೂಚಿಸಲಾಯಿತು. ಹೊರಗಿನಿಂದ ವಲಸೆ ಬಂದವರ ಕ್ವಾರಂಟೈನ್ ಮತ್ತು ಹೆಚ್ಚಿನ ನಿಗಾ ವಹಿಸಲು, ಅಲ್ಲದೆ, ನಾನ್ ಕೋವಿಡ್ ರೋಗಿಗಳ ಚಿಕಿತ್ಸೆಗೆ ಯಾವುದೇ ಅಡ್ಡಿಯಾಗದಂತೆ ಎಚ್ಚರ ವಹಿಸುವಂತೆ ಸರಕಾರದಿಂದ ಜಿಲ್ಲಾಡಳಿತಕ್ಕೆ ನಿರ್ದೇಶಿಸಲಾಗಿದೆ. ಯಾವುದೇ ಕಾರಣಕ್ಕೆ ಸಾರ್ವಜನಿಕ ಉತ್ಸವಗಳ ಆಚರಣೆ ಮಾಡುವಂತಿಲ್ಲ ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಕೋವಿಡ್ ಮತ್ತು ನಾನ್ ಕೋವಿಡ್ ಚಿಕಿತ್ಸೆ ನೀಡಲು
ಸಹಕರಿಸದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಬೂತ್ ಮಟ್ಟದಲ್ಲಿ ಕ್ವಾರಂಟೈನ್, ಸಂಪರ್ಕಿತರ ಪತ್ತೆ ಹಚ್ಚುವುದು, ಮನೆ ಮನೆ ಸಮೀಕ್ಷೆ ನಡೆಸುವ ಪ್ರಕ್ರಿಯೆಯನ್ನು ಪರಿಶೀಲನೆ ನಡೆಸಲು ಬೂತ್ ಮಟ್ಟದ ಸಮಿತಿಗಳನ್ನು ರಚಿಸಿ, ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಕರ ಸಹಕಾರವನ್ನು ಪಡೆಯುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಯಿತು.
60 ವರ್ಷ ಮೇಲ್ಪಟ್ಟವರು ಹಾಗೂ ಇತರ ತೀವ್ರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿರುವವರನ್ನು ಪ್ರತ್ಯೇಕವಾಗಿರಿಸಬೇಕು ಮತ್ತು ಐಎಲ್ಐ ಮತ್ತು ಉಸಿರಾಟದ ತೊಂದರೆ ಇರುವವರನ್ನು ಗುರುತಿಸಿ, ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೊಳಪಡಿಸಬೇಕು ಎಂದು ನಿರ್ದೇಶಿಸಲಾಗಿದೆ. ಸೀಲ್ಡೌನ್ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಮಾಡಬೇಕು. ಈ ಪ್ರದೇಶಗಳಲ್ಲಿ ಹೆಚ್ಚು ಪರೀಕ್ಷೆ ನಡೆಸಬೇಕು. ಧಾರ್ಮಿಕ ಸ್ಥಳಗಳಲ್ಲಿ, ಮಾರುಕಟ್ಟೆ ಮೊದಲಾದ ಸ್ಥಳಗಳಲ್ಲಿ ಜನ ಗುಂಪುಗೂಡದಂತೆ ಎಚ್ಚರ ವಹಿಸಬೇಕು. ಕೋವಿಡ್ ಆಸ್ಪತ್ರೆಯಲ್ಲಿ ಸ್ವಚ್ಛತೆ ನಿರ್ವಹಣೆಯಲ್ಲಿ ತೊಡಗಿರುವ ಡಿ ಗ್ರೂಪ್ ನೌಕರರ ಪೆÇ್ರೀತ್ಸಾಹಧನ ಹೆಚ್ಚಳಕ್ಕೆ ಕ್ರಮ ವಹಿಸಲಾಗುವುದು ಎಂದಿರುವ ಮುಖ್ಯಮಂತ್ರಿಗಳು, ಆ್ಯಂಬ್ಯುಲೆನ್ಸ್ ಮತ್ತು ಚಿಕಿತ್ಸೆಗೆ ಹಾಸಿಗೆಗಳ ಕೊರತೆಯಾಗದಂತೆ ಎಚ್ಚರ ವಹಿಸುವಂತೆ ತಿಳಿಸಿದ್ದಾರೆ.
ಡಿಜಿಟಲ್ ಎಕ್ಸ್ರೇ ಯಂತ್ರಗಳ ಮೂಲಕ ಶ್ವಾಸಕೋಶದ ಸೋಂಕನ್ನು ತ್ವರಿತವಾಗಿ ಪತ್ತೆ ಹಚ್ಚಲು ಸಾಧ್ಯವಿದ್ದು, ಈ ಉಪಕರಣಗಳ ಬಳಕೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿರುವ ಅವರು, ಕೋವಿಡ್ ಮಾರಣಾಂತಿಕ ಕಾಯಿಲೆ ಅಲ್ಲ, ಭಯಭೀತರಾಗುವ ಅಗತ್ಯವಿಲ್ಲ ಎಂದು ಜನರಿಗೆ ತಿಳುವಳಿಕೆ ನೀಡುವ ಅಗತ್ಯವಿದೆ ಎಂದು ನೆನಪಿಸಿದ್ದಾರೆ.
ಮಳೆ ವೇಳೆ ನಿಗಾ ವಹಿಸಲು ಸೂಚನೆ
ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ಹೆಚ್ಚು ಮಳೆಯಾಗುತ್ತಿರುವ ಪ್ರದೇಶದಲ್ಲಿ ಜನರ ಸ್ಥಳಾಂತರಕ್ಕೆ ಮೊದಲೇ ಸ್ಥಳ ಗುರುತಿಸುವಂತೆ ಸೂಚಿಸಲಾಯಿತು. ಅಕ್ಟೋಬರ್ವರೆಗೆ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ. ಪ್ರವಾಹ ಕುರಿತು ಎಚ್ಚರ ವಹಿಸಿ. ಮಣ್ಣಿನ ತೇವಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಬೆಳೆಹಾನಿಯಾಗದಂತೆ ಎಚ್ಚರ ವಹಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಗಮನ ಸೆಳೆದಿದ್ದಾರೆ. ಉತ್ತಮ ಮಳೆಯಾಗಿ, ಬಂಪರ್ ಬೆಳೆ ಬರುವ ಸಾಧ್ಯತೆ ಇದ್ದು, ಬೇಡಿಕೆ ಕಡಿಮೆ ಇರುವ ಕಾರಣ ಗೋದಾಮುಗಳನ್ನು ಗುರುತಿಸಿ, ಕೃಷಿ ಉತ್ಪನ್ನ ದಾಸ್ತಾನಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಅವರು ನಿರ್ದೇಶಿಸಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಹಾಗೂ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.