ಮಡಿಕೇರಿ, ಜು. 13: ಕಳೆದ ಎರಡು ವರ್ಷಗಳಲ್ಲಿ ಕೊಡಗು ಪ್ರಕೃತಿ ವಿಕೋಪಕ್ಕೆ ಸಿಲುಕಿ ತತ್ತರಿಸಿತು. ಭೂಮಿಗೆ ತಂಪೆರೆಸುವ ಮಳೆಗಾಲವೂ ಈಗ ಕೊಡಗಿನ ಜನರಿಗೆ ಅತಂಕಕಾರಿ ಸಂಗತಿಯಾಗಿದೆ. ಭೂಕುಸಿತ ಏನು ಎಂದು ತಿಳಿಯದ ಕೊಡಗಿನ ಜನರಿಗೆ 2018 ನಂತರ ಭೂಕುಸಿತವು ಮಳೆಗಾಲದ ಸಂಗಾತಿಯಂತಾಗಿದೆ. 2018ರಲ್ಲಿ ಪ್ರಕೃತಿ ವಿಕೋಪ ನಮ್ಮೆಲ್ಲರಿಗೆ ಹೊಸದಂತಿದ್ದರೂ, ಎರಡು ವರ್ಷಗಳಲ್ಲಿ ನಾವು ಈ ವಿಕೋಪವನ್ನು ಎದುರಿಸುವ ಬಲ ಹಾಗೂ ಛಲವನ್ನು ಬೆಳೆಸಿಕೊಂಡಿದ್ದೇವೆ. ಇದೇ ರೀತಿ, ನಮ್ಮ ಜಿಲ್ಲಾಡಳಿತವೂ ಈ ವಿಕೋಪದ ಪರಿಣಾಮಗಳನ್ನು ಆದಷ್ಟು ಹತೋಟಿಯಲ್ಲಿಡಲು ಅನೇಕ ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳೊಂದರಲ್ಲಿ ಪ್ರಮುಖವಾದ ಅಂಶವೊಂದೆಂದರೆ ಕೊಡಗಿನಲ್ಲಿ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದ ‘ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ’. ರಾಷ್ಟ್ರೀಯ ವಿಪತ್ತು ಪ್ರಾಧಿಕಾರದ ಮಾರ್ಗಸೂಚಿಗಳ ಮೂಲಕ ಕೊಡಗಿನಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಾರ್ಯರೂಪಕ್ಕ್ಕೆ ಬಂದಿತು ಹಾಗೂ ಈ ಪ್ರಾಧಿಕಾರಕ್ಕೆ ಜಿಲ್ಲಾಧಿಕಾರಿಗಳಾದ ಅನೀಸ್ ಕಣ್ಮಣಿ ಜಾಯ್‍ರವರು ಪ್ರಮುಖರಾಗಿದ್ದು ಈ ಪ್ರಾಧಿಕಾರದ ಮೊದಲ ಅಧಿಕಾರಿಯಾಗಿ ಅನನ್ಯ ವಾಸುದೇವ್ ಎಂಬವರು ನವಂಬರ್ 2019ರಲ್ಲಿ ನೇಮಕಗೊಂಡರು. “ಈ ಪ್ರಾಧಿಕಾರದಡಿಯಲ್ಲಿ ಪ್ರತಿ ವರ್ಷ ಜಿಲ್ಲೆಯ ಭೂವಿಜ್ಞಾನದ ಕುರಿತು ಹಾಗೂ ಜಿಲ್ಲೆಯಲ್ಲಿ ಹಿಂದಿನ ವರ್ಷಗಳಲ್ಲಾದ ಪ್ರಕೃತಿ ವಿಕೋಪದ ಅಧ್ಯಯನದ ವರದಿಗಳನ್ನು ಸಲ್ಲಿಸಬೇಕು. ಈ ವರದಿಯಾಧಾರದ ಮೇಲೆ ಮುಂದಿನ ವರ್ಷಗಳಲ್ಲಿ ವಿಕೋಪವಾದರೆ ಅದನ್ನು ಎದುರಿಸಲು ಯೋಜನೆಗಳನ್ನು ರೂಪಿಸಬೇಕು. ಇದೇ ರೀತಿಯಾಗಿ, ಈ ವರ್ಷ ಹಲವಾರು ಯೋಜನೆಗಳನ್ನು ಜಿಲ್ಲಾಡಳಿತದಿಂದ ರೂಪಿಸಲಾಗಿದೆ. ಭಾರತ ಭೂವಿಜ್ಞಾನ ಸಮೀಕ್ಷೆ (ಜಿ.ಎಸ್.ಐ) ಹಾಗೂ ಇನ್ನಿತರ ಸಂಸ್ಥೆಗಳ ಕೊಡಗಿನ ಭೂವಿಜ್ಞಾನದ ಅಧ್ಯಯನಗಳ ಮೇರೆಗೆ ಕೊಡಗಿನಲ್ಲಿ ಅನೇಕ ಭೂಕುಸಿತ ಪೀಡಿತ ಹಾಗೂ ದುರ್ಬಲ ಪ್ರದೇಶಗಳನ್ನು ಜಿಲ್ಲಾಡಳಿತದಿಂದ ಗುರುತಿಸಲಾಗಿದ್ದು, ಈ ಪ್ರದೇಶಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಪ್ರತೀ ಗ್ರಾಮ ಪಂಚಾಯಿತಿ ಅಡಿಯಲ್ಲಿ ದುರ್ಬಲ ಪ್ರದೇಶಗಳ ಮಾಹಿತಿ ಲಭ್ಯವಿದ್ದು, ಈ ಪ್ರದೇಶಗಳ ಜನಸಂಖ್ಯೆಯನ್ನೂ ಸಮೀಕ್ಷೆಗೆ ತೆಗೆದುಕೊಂಡು ರಕ್ಷಣಾ ಕಾರ್ಯಗಳ ಯೋಜನೆಯನ್ನೂ ರೂಪಿಸಲಾಗಿದೆ,” ಎಂದು ಅನನ್ಯ ವಾಸುದೇವ್‍ರವರು ‘ಶಕ್ತಿ’ಗೆ ಮಾಹಿತಿ ಒದಗಿಸಿದ್ದಾರೆ.

2018ನೇ ಸಾಲಿನಲ್ಲಿ ಭೂಕುಸಿತ ಕೊಡಗಿಗೆ ಒಂದು ಅಜ್ಞಾತ ಪರಿಕಲ್ಪನೆ (ಟಿoveಟ/ಟಿeತಿ)ಯಾಗಿದ್ದು, ಈ ದುರಂತದ ಸಮಂiÀiದಲ್ಲಿ, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಕರ್ನಾಟಕ ನಾಗರಿಕ ರಕ್ಷಣಾ ತಂಡ ಸೇರಿದಂತೆ sಸೇನೆಯ ತಂಡವೂ ಕೂಡ ದುರಂತದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಗಳನ್ನು ನೆರವೇರಿಸಿದ್ದವು. ಈ ಎಲ್ಲಾ ರಕ್ಷಣಾ ಪಡೆಗಳು ಕೊಡಗಿಗೆ ತಲುಪುವ ಮುಂಚಿತವಾಗಿ ಕೊಡಗಿನ ಜನರೇ ಖುದ್ದು ರಕ್ಷಣಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಈಗ ಎರಡು ವರ್ಷಗಳ ನಂತರ ಜಿಲ್ಲೆಯ ಇಲಾಖೆಗಳ ಸಿಬ್ಬಂದಿಯನ್ನೇ ಈ ಕಾರ್ಯಕ್ಕೆ ತರಬೇತಿ ನೀಡಲಾಗಿದೆ, ಇದರಿಂದ ರಕ್ಷಣಾ ಕಾರ್ಯವೂ ವೇಗದಲ್ಲಿ ನಡೆಸಲು ನೆರವಾಗಲಿದೆ.

(ಮೊದಲ ಪುಟದಿಂದ) “ಎನ್.ಡಿ.ಆರ್.ಎಫ್ ನ ಒಂದು ತಂಡವನ್ನು ರಕ್ಷಣಾ ಕಾರ್ಯಕ್ಕೆ ಪೂರ್ವ-ನಿಯೋಜಿಸಲಾಗಿದೆ. ಇನ್ನು, ಜಿಲ್ಲೆಯ ಅಗ್ನಿಶಾಮಕ ದಳದ ಹಾಗೂ ಪೊಲೀಸ್ ತಂಡದ ನೌಕರರನ್ನು ರಕ್ಷಣಾ ಕಾರ್ಯಕ್ಕೆ ಸಜ್ಜು ಪಡಿಸಲಾಗಿದೆ,” ಎಂದು ಅನನ್ಯ ವಿವರಿಸಿದರು.

ಕೋವಿಡ್ ಸಾಂಕ್ರಮಿಕ ರೋಗದ ಈ ಸಮಯದಲ್ಲಿ, ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಜರ್ ಹಾಗೂ ಮಾಸ್ಕ್‍ನಂತಹ ಅಗತ್ಯ ಸಾಮಗ್ರಿಗಳನ್ನು ಮುಂಚಿತವಾಗಿಯೇ ಸಂಗ್ರಹಮಾಡಲಾಗಿದೆ. “ಈ ವರ್ಷ ದುರಂತ ಸಂಭವಿಸಿದ್ದಲ್ಲಿ, ಕೋವಿಡ್ ಕಾರಣದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅವಶ್ಯಕತೆ ಇರುವ ಕಾರಣ ಜಿಲ್ಲಾಡಳಿತ ಹೆಚ್ಚಿನ ಪರಿಹಾರ ಕೇಂದ್ರಗಳನ್ನು ತೆರೆಯುವ ಚಿಂತನೆಯಲ್ಲಿದೆ. ಒಂದು ಪರಿಹಾರ ಕೇಂದ್ರ ಅವಶ್ಯವಿರುವ ಸ್ಥಳದಲ್ಲಿ ಕನಿಷ್ಟ ಮೂರು ಪರಿಹಾರ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ರೂಪಿಸಲಾಗಿದೆ,” ಎಂದು ಅವರು ಮಾಹಿತಿ ನೀಡಿದರು.

ಪ್ರತಿ ಮಳೆಗಾಲದ ಭೀತಿಯನ್ನು ನಾವು ಹೇಗೆ ನಿವಾರಿಸಬಹುದು? ಗುಡ್ಡಗಾಡು ಪ್ರದೇಶಗಳು ಇನ್ನುಮುಂದೆ ಸುರಕ್ಷಿತವಲ್ಲವೇ? ಕೊಡಗನ್ನು ಮುಂದಿನ ಪೀಳಿಗೆಗೆ ಹೇಗೆ ಸುರಕ್ಷಿತವಾಗಿಸಬಹುದು ಎಂಬ ಪ್ರಶ್ನೆಗೆ ಅನನ್ಯರವರು ಈ ರೀತಿ ಅಭಿಪ್ರಾಯಿಸಿದರು. “ಕೆಲವು ಪ್ರದೇಶಗಳು ಸುಮಾರು 70 ಡಿಗ್ರಿ ಗ್ರೇಡಿಯಂಟ್ ಇಳಿಜಾರು ಪ್ರದೇಶಗಳಾಗಿವೆ. ಈ ಪ್ರದೇಶಗಳಲ್ಲಿ ಮೊದಲು ಹೆಚ್ಚು ಜನಸಂಖೈ ಇರಲಿಲ್ಲ್ಲ. ಆದರೆ ಈಗ ಇವೆಲ್ಲವೂ ಹೆಚ್ಚು ಜನಸಂಖ್ಯೆಯ ಆವಾಸಸ್ಥಾನಗಳಾಗಿವೆ. ಇನ್ನು ಕೊಡಗಿನ ಭೂಪ್ರದೇಶದಲ್ಲಿ ಬಂಡೆಗಳು ಹೆಚ್ಚಾಗಿಲ್ಲ, ಬದಲಿಗೆ ಮಣ್ಣಿನ ದಿಬ್ಬಗಳು ಹೆಚ್ಚಾಗಿವೆ. ಹೀಗಿರುವಾಗ, ಯಾವದೇ ಗುಡ್ಡಗಳ ಮೇಲೆ ಕಟ್ಟಡ ನಿರ್ಮಾಣದ ಮೊದಲು ಭೂವಿಜ್ಞಾನಿಯ ಸಲಹೆ ಪಡೆದು, ಆ ಸಲಹೆಯ ಪ್ರಕಾರ ಎಂಜಿನಿಯರ್ ಮೂಲಕ ಕಟ್ಟಡವನ್ನು ವೈಜ್ಞಾನಿಕವಾಗಿ ನಿರ್ಮಿಸುವ ಅಗತ್ಯವಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಅನೇಕ ಬಾರಿ ಭೂಕುಸಿತಗಳಾಗುತ್ತವೆ. ಆದರೆ, ಅಲ್ಲಿ ಆ ಪ್ರದೇಶಕ್ಕೆ ತಕ್ಕಂತೆ ಕಟ್ಟಡ ನಿರ್ಮಾಣಗಳಾಗುತ್ತವೆ. ಅದೇ ರೀತಿ, ಕೊಡಗಿನ ಪ್ರದೇಶಗಳಲ್ಲಿ ಪರ್ಯಾಯ ವಿಧಾನಗಳಲ್ಲಿ ನಿರ್ಮಾಣ ಕಾರ್ಯಗಳು ಮಾಡುವದು ಅವಶ್ಯಕ.” -ಪ್ರಜ್ಞಾ ಜಿ.ಆರ್.